ಬೆಂಗಳೂರು(ಅ.30): ಸ್ವಚ್ಛತೆ ಕಾಪಾಡದೇ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಹಾಗೂ ಕೊಳೆತ ತರಕಾರಿ ಬಳಕೆಗೆ ರೇಸ್‌ ಕೋರ್ಸ್‌ ರಸ್ತೆಯ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು 50 ಸಾವಿರ ರು. ದಂಡ ವಿಧಿಸಿದ್ದಾರೆ.

ಪಾಲಿಕೆ ಆರೋಗ್ಯಾಧಿಕಾರಿಗಳು ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೊಳೆತ ತರಕಾರಿ ಬಳಕೆ, ಪರಿಸರಕ್ಕೆ ಮಾರಕವಾದ ನಿಷೇಧಿತ ಪ್ಲಾಸ್ಟಿಕ್‌ ಬಳಕೆ, ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡದಿರುವುದನ್ನು ಕಂಡು ಬಂದಿದೆ. ಹೋಟಲ್‌ ಆಡಳಿತ ಮಂಡಳಿಗೆ 50 ಸಾವಿರ ರು. ದಂಡ ವಿಧಿಸಿದ್ದಾರೆ.

ಶೀಘ್ರದಲ್ಲೇ ಕಬ್ಬನ್‌ ಪ್ರತಿಮೆ ಸ್ಥಳಾಂತರ.

ಇನ್ನು ವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಣೆ ಮತ್ತು ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಹಿನ್ನೆಲೆಯಲ್ಲಿ ಮಹದೇವಪುರ ವಲಯದ ವಿ.ಆರ್‌.ಮಾಲ್‌ನಲ್ಲಿರುವ ಮ್ಯಾಕ್‌ಡೋನಾಲ್ಡ್‌ ಹಾಗೂ ಮಿ.ಕೇನ್‌ ಎಂಬ ರೆಸ್ಟೋರೆಂಟ್‌ಗಳಿಗೆ ಕ್ರಮವಾಗಿ 40 ಮತ್ತು 10 ಸಾವಿರ ರು. ದಂಡ ವಿಧಿಸಿರುವುದಾಗಿ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಲ್ಕು ಅಂಶ ಪರಿಶೀಲನೆಗೆ ಸೂಚನೆ:

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹೋಟೆಲ್‌ ರೆಸ್ಟೋರೆಂಟ್‌, ಬೇಕರಿ ಸೇರಿದಂತೆ ಇನ್ನಿತರ ಮಳಿಗೆಗಳಲ್ಲಿ ಕಸ ವಿಂಗಡಣೆ, ಆಹಾರದ ಗುಣಮಟ್ಟಹಾಗೂ ಸ್ವಚ್ಛತೆ, ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಹಾಗೂ ಕಸ ವಿಲೇವಾರಿಗೆ ಸಗಟು ತ್ಯಾಜ್ಯ ವಿಲೇವಾರಿದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೇ? ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಪಾಲಿಕೆ ನಿಯಮ ಉಲ್ಲಂಘಿಸಿದರೆ, ಉದ್ದಿಮೆ ಪರವಾನಗಿ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಕರಾವಳಿ ಸೇರಿ ದಕ್ಷಿಣ ಒಳನಾಡು, ಮಲೆನಾಡಿನಲ್ಲಿ 2 ದಿನ ವ್ಯಾಪಕ ಮಳೆ ಸಾಧ್ಯತೆ