ಬೆಂಗಳೂರು(ಅ.30): ಕರಾವಳಿಯ 3 ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದ ಕೆಲ ಜಿಲ್ಲೆಗಳಲ್ಲಿ ಅ.31ರಿಂದ 2 ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ದಕ್ಷಿಣ ತಮಿಳುನಾಡು ಹಾಗೂ ಶ್ರೀಲಂಕಾ ಭಾಗದಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿರುವ ವಾತಾವರಣ ನಿರ್ಮಾಣವಾಗಿದೆ.

ಇದರ ಪ್ರಭಾವದಿಂದ ಅ.30 ಹಾಗೂ 31ರಂದು ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದ ಮೇಲೆ ಪ್ರಭಾವ ಬೀರಲಿದ್ದು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರತಿಷ್ಠೆಯಾದ ಮೆಡಿಕಲ್ ಕಾಲೇಜ್: ಡಿಕೆಶಿಗೆ ಡಿಚ್ಚಿ ಕೊಡಲು ಸುಧಾಕರ್ ಮೈಲೇಜ್...

ಇನ್ನು ರಾಜ್ಯದ ಬಹುತೇಕ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಸೋಮವಾರ ಮತ್ತು ಮಂಗಳವಾರ ರಾಜ್ಯದ ಹಲವೆಡೆ ಒಣಹವೆ ಕಂಡು ಬಂದಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲವೆಡೆ ಮಂಗಳವಾರ ಮೋಡ ಕವಿದ ವಾತಾವರಣ ಉಂಟಾಗಿತ್ತು. ಅಲ್ಲಲ್ಲಿ ತುಂತುರು ಮತ್ತು ಸಾಧಾರಣ ಮಳೆಯಾದ ವರದಿಯಾಗಿದೆ.

ಇನ್ನು ದಕ್ಷಿಣ ತಮಿಳುನಾಡು ಹಾಗೂ ಶ್ರೀಲಂಕಾ ಭಾಗದಲ್ಲಿ ಗಾಳಿಯ ಒತ್ತಡ ಕಡಿಮೆಯಾಗಿರುವ ವಾತಾವರಣ ನಿರ್ಮಾಣವಾಗಿದೆ. ಇದು ಚಂಡಮಾರುತವಾಗಿ ರೂಪಗೊಳ್ಳುವ ಬಗ್ಗೆ ಸ್ಪಷ್ಟಮಾಹಿತಿ ಇಲ್ಲ. ಸದ್ಯದ ಲಕ್ಷಣಗಳನ್ನು ಗಮನಿಸಿದರೆ ಚಂಡಮಾರುತವಾಗಿ ರೂಪಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ. ಒಂದು ವೇಳೆ ಚಂಡಮಾರುತವಾದರೂ ತಮಿಳುನಾಡು, ಕೇರಳ ಭಾಗದಲ್ಲಿ ಹೆಚ್ಚಿನ ಪ್ರಮಾಣ ಪ್ರಭಾವ ಬೀರಲಿದೆ. ರಾಜ್ಯದ ಕರಾವಳಿ ಮತ್ತು ಮಳೆನಾಡುಭಾಗದಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಬಹುದು. ಆತಂಕ ಪಡಬೇಕಾದ ಆಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂ ಹಿರಿಯ ವಿಜ್ಞಾನಿ ಪ್ರಭು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಗದಗ: ಅತಿಯಾದ ಮಳೆಗೆ ಕೊಳೆತ ಈರುಳ್ಳಿ, ಸಂಕಷ್ಟದಲ್ಲಿ ರೈತರು