ಮಾನನಷ್ಟ ‌ಮೊಕದ್ದಮೆ ಕೇಸ್‌ ಹಿನ್ನೆಲೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಐಜಿಪಿ ರೂಪಾ ಮೌದ್ಗಿಲ್‌ಗೆ ಸಮನ್ಸ್‌ ಜಾರಿ ಮಾಡಿತ್ತು. ಈ ಹಿನ್ನೆಲೆ ಕೋರ್ಟ್‌ಗೆ ಹಾಜರಾದ ಡಿ. ರೂಪಾ ಜಾಮೀನು ಪಡೆದಿದ್ದಾರೆ. 

ಬೆಂಗಳೂರು (ಜೂನ್ 6, 2023): ಐಎಎಸ್ ರೋಹಿಣಿ ಸಿಂಧೂರಿ ಹಾಗೂ ಐಜಿಪಿ ರೂಪ ಮೌದ್ಗಿಲ್ ನಡುವಿನ ಜಟಾಪಟಿ ಪ್ರಕರಣ ಮತ್ತೊಂದು ಟ್ವಿಸ್ಟ್‌ ಪಡೆದುಕೊಂಡಿದೆ. ಐಪಿಎಸ್‌ ಅಧಿಕಾರಿ ಡಿ. ರೂಪಾ ವಿರುದ್ಧ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಈ ಹಿನ್ನೆಲೆ ಡಿ. ರೂಪಾ ಇಂದು ನಗರದ ಕೋರ್ಟ್‌ಗೆ ಹಾಜರಾಗಿದ್ದಾರೆ.

ಈ ಮೂಲಕ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಿಬ್ಬರ ಜಟಾಪಟಿ ಮತ್ತೊಂದು ಹಂತಕ್ಕೆ ಹೋಗಿದೆ. ಮಾನನಷ್ಟ ‌ಮೊಕದ್ದಮೆ ಹಿನ್ನೆಲೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಐಜಿಪಿ ರೂಪಾ ಮೌದ್ಗಿಲ್‌ಗೆ ಸಮನ್ಸ್‌ ಜಾರಿ ಮಾಡಿದ್ದಾರೆ. ಸಮನ್ಸ್ ಜಾರಿ ಹಿನ್ನೆಲೆ ಮಂಗಳವಾರ ಡಿ. ರೂಪಾ ಕೋರ್ಟ್‌ಗೆ ಹಾಜರಾಗಿ ಜಾಮೀನು ಪಡೆದಿದ್ದಾರೆ. 25 ಸಾವಿರ ಬಾಂಡ್ ಷರತ್ತಿನೊಂದಿಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಐಜಿಪಿ ಡಿ. ರೂಪಾ ಮೌದ್ಗಿಲ್‌ ಅವರಿಗೆ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: IAS vs IPS ಸಮರಕ್ಕೆ ಮತ್ತೊಂದು ಟ್ವಿಸ್ಟ್‌: ವೈಯಕ್ತಿಕ ವೇದನೆಯಿಂದಾಗಿ ರೂಪಾ ಮೌದ್ಗಿಲ್​​ ಸಮರ..?

ಇನ್ನೊಂದೆಡೆ ವಿಚಾರಣೆಗೂ ಮುನ್ನ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಹೂಡಿರುವ 1 ಕೋಟಿ ರು. ಕ್ರಿಮಿನಲ್‌ ಮಾನನಷ್ಟ ಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹಿಂದೆ ಸರಿದಿರುವ ಘಟನೆಯೂ ವರದಿಯಾಗಿದೆ. ಈ ಕುರಿತಂತೆ ಡಿ.ರೂಪಾ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ವಿಚಾರಣೆ ಸೋಮವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಪ್ರಕರಣದ ಬಗ್ಗೆ ಮಾಹಿತಿ ಪಡೆದ ನ್ಯಾಯಮೂರ್ತಿಗಳು, ಈ ಹಿಂದೆ ತಾವು ವಕೀಲರಾಗಿದ್ದ ಸಂದರ್ಭದಲ್ಲಿ ಬೇರೊಂದು ಪ್ರಕರಣ ಸಂಬಂಧ ರೋಹಿಣಿ ಸಿಂಧೂರಿ ಅವರನ್ನು ಪ್ರತಿನಿಧಿಸಿದ್ದೆವು. ಹಾಗಾಗಿ, ತಾವು ಈ ಅರ್ಜಿ ವಿಚಾರಣೆ ನಡೆಸುವುದಿಲ್ಲ. ಅರ್ಜಿಯನ್ನು ಬೇರೊಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲು ಸೂಕ್ತ ಆದೇಶ ಪ್ರಕಟಿಸಲು ಪ್ರಕರಣದ ಕಡತವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದಿಡಬೇಕು ಎಂದು ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದರು.

ಇದನ್ನೂ ಓದಿ: D Roopa Vs Rohini Sindhuri: ನಿಮ್ ಜಗಳದಲ್ಲಿ ನನ್ ಮಗನ ಹೆಸ್ರು ಎಳಿಬೇಡಿ: ಡಿಕೆ ರವಿ ತಾಯಿ ಕಣ್ಣೀರು

ರೂಪಾ ಮೌದ್ಗಿಲ್‌ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ತಮ್ಮ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ತಮ್ಮ ತೇಜೋವಧೆ ಮಾಡುವ ದುರುದ್ದೇಶದಿಂದಲೇ ರೂಪಾ ಅವರು ಈ ಕೃತ್ಯ ಎಸಗಿದ್ದಾರೆ. ಅವರ ಈ ಕೃತ್ಯ ತಮ್ಮ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ಆರೋಪಿಸಿ ರೋಹಿಣಿ ಸಿಂಧೂರಿ ನಗರದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಕೋರ್ಟ್‌ಗೆ ಮಾರ್ಚ್‌ 3 ರಂದು ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. 

ಅಲ್ಲದೆ, ಮಾನಹಾನಿ ಮಾಡಿ ಮಾನಸಿಕ ಯಾತನೆ ಉಂಟು ಮಾಡಿರುವುದಕ್ಕಾಗಿ ಡಿ. ರೂಪಾ ಅವರಿಂದ ಒಂದು ಕೋಟಿ ರೂಪಾಯಿಯನ್ನು ಪರಿಹಾರವಾಗಿ ಕೊಡಿಸಿಕೊಡಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಸಿಂಧೂರಿ ಅವರು ದೂರಿನಲ್ಲಿ ಕೋರಿದ್ದಾರೆ.

ಇದನ್ನೂ ಓದಿ: ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಯಾಕೆ: ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ ಡಿ. ರೂಪಾ