Asianet Suvarna News Asianet Suvarna News

ರಸ್ತೆ ಗುಂಡಿ ಅಪಘಾತ ಪರಿಹಾರ : ಕೋರ್ಟಿಂದ ಎಚ್ಚರಿಕೆ

ರಸ್ತೆಗುಂಡಿಗಳಿಂದ ಸಂಭವಿಸಿದ ಅಪಘಾತಗಳಿಗೆ ಸೂಕ್ತ ಪ್ರಮಾಣದಲ್ಲಿ ಪರಿಹಾರ ವಿತರಿಸುವ ಬಗ್ಗೆ ಹೈ ಕೋರ್ಟ್ ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಆಡಳಿತ ಪಕ್ಷದ ಮುಖಂಡರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

High Court Warns To BBMP For Pothole Accidents
Author
Bengaluru, First Published Nov 28, 2019, 8:52 AM IST

ಬೆಂಗಳೂರು [ನ.28]:  ನಗರ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಸಾವು-ನೋವು ಅನುಭವಿಸಿದವರಿಗೆ ಪರಿಹಾರ ನೀಡುವ ಕುರಿತು ನ್ಯಾಯಾಲಯದ ಮಾಡಿದ ಆದೇಶ ಪಾಲಿಸದ ಸಂಬಂಧ ಬಿಬಿಎಂಪಿಗೆ ಚಾಟಿ ಬೀಸಿರುವ ಹೈಕೋರ್ಟ್‌, ಮೇಯರ್‌, ಉಪ ಮೇಯರ್‌ ಹಾಗೂ ಆಡಳಿತ ಪಕ್ಷದ ನಾಯಕರ ವಿರುದ್ಧವೇ ನ್ಯಾಯಾಂಗ ನಿಂದನೆಯಡಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ನಗರದಲ್ಲಿ ರಸ್ತೆ ಗುಂಡಿಗಳ ವಿಚಾರವಾಗಿ ವಿಜಯನ್‌ ಮೆನನ್‌ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿ ಕಾರ್ಯ ವೈಖರಿ ವಿರುದ್ಧ ಕೆಂಡಾಮಂಡಲವಾಯಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ, ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಗಾಯಗೊಂಡವರಿಗೆ ಬಿಬಿಎಂಪಿ ಪರಿಹಾರ ನೀಡಲು ನ್ಯಾಯಾಲಯ ಹೊರಡಿಸಿದ ಆದೇಶದ ಬಗ್ಗೆ ಮೇಯರ್‌, ಉಪ ಮೇಯರ್‌, ಆಡಳಿತ ಪಕ್ಷದ ನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸಭೆ ನಡೆಸಿದ್ದಾರೆ. ಈ ವಿಚಾರ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ಆಗಬೇಕು ಎಂಬ ನಿರ್ಣಯ ಕೈಗೊಂಡಿದ್ದಾರೆ ತಿಳಿಸಿದರು.

ಅದರಿಂದ ಕೆಂಡಾಮಂಡಲರಾದ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಲಯವು ಆದೇಶ ಮಾಡಿರುವುದು ಪಾಲನೆ ಮಾಡಲು. ಅದನ್ನು ಬಿಟ್ಟು ಕೋರ್ಟ್‌ ಆದೇಶ ಪಾಲಿಸಬೇಕೋ, ಬೇಡವೋ ಎಂದು ರಾಜಕಾರಣಿಗಳು (ಮೇಯರ್‌, ಉಪಮೇಯರ್‌, ಆಡಳಿತ ಪಕ್ಷದ ನಾಯಕರು) ಸಭೆ ಸೇರಿ ನಿರ್ಧರಿಸಲು ಅಲ್ಲ. ರಾಜಕಾರಣಿಗಳು ಹೀಗೆ ಮಾಡುತ್ತಾರೆ ಎಂದರೆ ಏನರ್ಥ? ಕೋರ್ಟ್‌ ಆದೇಶಗಳಿಗೆ ಗೌರವ ಹಾಗೂ ಘನತೆ ಇದೇ. ಗೌರವ ಹಾಗೂ ಹಾಗೂ ಪ್ರತಿಷ್ಠೆಯ ವಿಚಾರ ಬಂದರೆ ರಾಜಿಯಾಗುವ ಪ್ರಶ್ನೆಯೇ ಇರುವುದಿಲ್ಲ ಎಂದು ಕಟುವಾಗಿ ನುಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ಕೋರ್ಟ್‌ ಆದೇಶ ಬಗ್ಗೆ ಚರ್ಚಿಸುವ ಔಚಿತ್ಯವೇನಿದೆ. ಇದು ನ್ಯಾಯಾಂಗದಲ್ಲಿ ಹಸ್ತಕ್ಷೇಪವಲ್ಲದೇ ಇನ್ನೇನು? ಬಿಬಿಎಂಪಿಗೆ ಪಾಠ ಕಲಿಸಲೇಬೇಕು. ಕೋರ್ಟ್‌ ಆದೇಶದ ಬಗ್ಗೆ ಚರ್ಚಿಸಲು ಸಭೆ ನಡೆಸಿದ ಮೇಯರ್‌ ಹಾಗೂ ಇತರರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ನೀಡಿ ಕೋರ್ಟ್‌ ಮುಂದೆ ನಿಲ್ಲಿಸಲೇಬೇಕು. ಆದ್ದರಿಂದ ಅವರ ಹೆಸರನ್ನು ನೀಡಿ, ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸುತ್ತೇವೆ ಎಂದು ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿದರು.

ಬಿಬಿಎಂಪಿ ವಕೀಲರು ಉತ್ತರಿಸಿ, ಪಾಲಿಕೆಯು ಕೋರ್ಟ್‌ ಮತ್ತದರ ಆದೇಶಗಳ ಬಗ್ಗೆ ಅತ್ಯಂತ ಗೌರವ ಇಟ್ಟುಕೊಂಡಿದೆ. ಮೇಯರ್‌ ಹಾಗೂ ಇತರರು ಸಭೆಯಲ್ಲಿ ಪರಿಹಾರ ನೀಡುವ ನಿಯಮಗಳ ಕುರಿತು ಸಭೆ ನಡೆಸಿದ್ದಾರೆ. ಅದು ಬಿಟ್ಟು ಕೋರ್ಟ್‌ ಆದೇಶದ ಪಾಲನೆ ವಿಚಾರದಲ್ಲಿ ಅಲ್ಲ. ರಸ್ತೆ ಗುಂಡಿಗಳಿಂದ ಅಪಘಾತವಾಗಿ ಗಾಯಗೊಂಡವರಿಗೆ ಪರಿಹಾರ ನೀಡಲು ಕೆಎಂಸಿ ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವಿಲ್ಲ. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಒಂದು ವಾರ ಕಾಲಾವಕಾಶ ನೀಡದರೆ ಎಲ್ಲ ವಿವರಗಳನ್ನು ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಕೋರಿದರು.

ಅದಕ್ಕೆ ಒಪ್ಪದ ನ್ಯಾಯಪೀಠ, ಈಗಾಗಲೇ ಸಾಕಷ್ಟುಸಮಯ ನೀಡಲಾಗಿದೆ. ಇನ್ನೂ ಒಂದು ವಾರ ಅಲ್ಲ; ಒಂದು ದಿನವೂ ಸಮಯ ಕೊಡಲ್ಲ. ಹೈಕೋರ್ಟ್‌ ತನ್ನ ಅಧಿಕಾರ ಚಲಾಯಿಸುವುದಷ್ಟೇ ಬಾಕಿ ಉಳಿದಿದೆ. ನಮ್ಮ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದು ನಿಮ್ಮ ಹಕ್ಕಿನ ವಿಚಾರ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಒಂದೊಮ್ಮೆ ಸುಪ್ರೀಂಕೋರ್ಟ್‌ ನಮ್ಮ ಆದೇಶವನ್ನು ರದ್ದುಗೊಳಿಸಿದರೂ ನಮ್ಮ ಅಭ್ಯಂತರವಿಲ್ಲ. ಆದರೆ, ಕೋರ್ಟ್‌ ಆದೇಶದ ವಿಚಾರದಲ್ಲಿ ಬಿಬಿಎಂಪಿ ನಡೆದುಕೊಳ್ಳುತ್ತಿರುವ ರೀತಿ ಸಹಿಸಲು ಸಾಧ್ಯವಿಲ್ಲ. ಗುರುವಾರ ಬೆಳಿಗ್ಗೆ 10.30ಕ್ಕೆ ಮೇಯರ್‌, ಉಪ ಮೇಯರ್‌, ಆಡಳಿತ ಪಕ್ಷದ ನಾಯಕರ ಹೆಸರು ಕೊಡಬೇಕು. ಮುಂದೆ ಏನು ಮಾಡಬೇಕು ಎಂಬುದನ್ನು ನ್ಯಾಯಾಲಯ ತೀರ್ಮಾನಿಸುತ್ತದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

‘ನ್ಯಾಯಾಂಗ ನಿಂದನೆ ಆಗಲು ಬಿಡಲ್ಲ’

ರಸ್ತೆ ಗುಂಡಿ ಅಪಘಾತದಲ್ಲಿ ಗಾಯಗೊಂದವರೆಗೆ ಬಿಬಿಎಂಪಿ ಪರಿಹಾರ ನೀಡುವುದಕ್ಕೆ ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿಲ್ಲ. ರಸ್ತೆ ಅಪಘಾತ ಸಂದರ್ಭದಲ್ಲಿ ಮೋಟರ್‌ ವಾಹನ ಕಾಯ್ದೆಯಡಿ ನಿಯಮಗಳ ಅನುಸಾರ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತದೆ. ಅದೇ ರೀತಿ ಬಿಬಿಎಂಪಿ ನಿಯಮ ರೂಪಿಸಿಕೊಂಡು ಇನ್ನು ಮುಂದೆ ರಸ್ತೆ ಗುಂಡಿ ಅಪಘಾತದಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡಬೇಕಾಗುತ್ತದೆ. ಈ ಬಗ್ಗೆ ಕಾನೂನು ವಿಭಾಗದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಬಿಬಿಎಂಪಿ ಮೇಯರ್‌, ಉಪಮೇಯರ್‌ ಹಾಗೂ ಆಡಳಿಯ ಪಕ್ಷದ ನಾಯಕರ ವಿರುದ್ಧ ನ್ಯಾಯಾಂಗ ನಿಂದನೆಗೆ ಗುರಿಯಾಗದಂತೆ ಕ್ರಮವಹಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ತಿಳಿಸಿದ್ದಾರೆ.

Follow Us:
Download App:
  • android
  • ios