ರಿಕ್ಕಿ ರೈ ಶೂಟೌಟ್ ಪ್ರಕರಣ ಭೇದಿಸಲು ಪೊಲೀಸರು ಹೆಣಗಾಡುತ್ತಿದ್ದಾರೆ. ಮಾಜಿ ಗನ್‌ಮ್ಯಾನ್ ಮನ್ನಪ್ಪ ವಿಠ್ಠಲ್ ಮೇಲೆ ಅನುಮಾನ ಬಲವಾಗಿದೆ. ಚೇತರಿಸಿಕೊಂಡ ರಿಕ್ಕಿ ಆಸ್ಪತ್ರೆಯಿಂದ ಇಂದು ಅಥವಾ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಮಾಹಿತಿ ನೀಡದೆ ರಿಕ್ಕಿ ನುಣುಚಿಕೊಳ್ಳುತ್ತಿದ್ದಾರೆ ಎಂಬ ಅನುಮಾನವಿದೆ. ಪೊಲೀಸರು ವಿಚಾರಣೆಗೆ ಸಜ್ಜಾಗಿದ್ದಾರೆ. ರಿಕ್ಕಿ ಸದಾಶಿವನಗರದ ನಿವಾಸದಲ್ಲಿ ಉಳಿಯುವ ಸಾಧ್ಯತೆಯಿದೆ.
ಬೆಂಗಳೂರು (ಏ.27): ಭೂಗತ ಜಗತ್ತಿನ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಶೂಟ್ ಔಟ್ ನಡೆದು ಒಂದು ವಾರವಾದ್ರೂ ಪ್ರಕರಣ ಭೇದಿಸುವುದು ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಸದ್ಯಕ್ಕೆ ಮುತ್ತಪ್ಪ ರೈ ಮಾಜಿ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ಮೇಲೆ ಪೊಲೀಸರ ಅನುಮಾನ ಬಲವಾಗಿದೆ. ಇದೀಗ ಬಹುತೇಕ ಇಂದು ಅಥವಾ ನಾಳೆ ಆಸ್ಪತ್ರೆಯಿಂದ ರಿಕ್ಕಿ ಡಿಶ್ಚಾರ್ಜ್ ಆಗುವ ಸಾಧ್ಯತೆ ಇದೆ. ಈಗಾಗ್ಲೇ ಚೇತರಿಸಿಕೊಂಡರೂ ರಿಕ್ಕಿ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿದ್ದು, ಗನ್ ಮ್ಯಾನ್ ವಿಠ್ಠಲ್ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಶೂಟೌಟ್ ಬಗ್ಗೆ ರಿಕ್ಕಿ ರೈಗೆ ಸಂಪೂರ್ಣ ಮಾಹಿತಿ ಇದೆ. ಸ್ಪಷ್ಟವಾದ ಮಾಹಿತಿ ನೀಡದೆ ರಿಕ್ಕಿ ನುಣುಚಿಕೊಳ್ತಿದ್ದಾರೆ ಎಂಬ ಅನುಮಾನ ಕೂಡ ಮೂಡಿದೆ. ಇದೇ ಕಾರಣಕ್ಕೆ ಆಸ್ಪತ್ರೆಯಿಂದ ಬಂದ ತಕ್ಷಣ ವಿಚಾರಣೆ ಮಾಡಲು ಪೊಲೀಸರ ತಯಾರಿ ನಡೆಸಿದ್ದಾರೆ. ಆದ್ರೆ ಪೊಲೀಸರ ತನಿಖೆ ಎದರಿಸಬೇಕೆಂದು ಆಸ್ಪತ್ರೆಯಲ್ಲೇ ಸ್ಪೆಷಲ್ ವಾರ್ಡ್ ಪಡೆದು ವಾಸ್ತವ್ಯ ಹೂಡಿರುವ ಸಾಧ್ಯತೆ ಇದೆ. ಡಿಶ್ಚಾರ್ಜ್ ಆದ್ರೂ ಫಾರ್ಮ್ ಹೌಸ್ ಗೆ ಹೋಗದೆ ಸದಾಶಿವನಗರದ ನಿವಾಸದಲ್ಲಿ ಉಳಿಯುವ ಸಾಧ್ಯತೆ ದಟ್ಟವಾಗಿದೆ.
ಗನ್‌ಮ್ಯಾನ್ ವಶಕ್ಕೆ:
ರಿಕ್ಕಿ ರೈ ಗನ್‌ಮ್ಯಾನ್ ಮನ್ನಪ್ಪ ವಿಠಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ವಿಠಲ್ ನನ್ನು ಪೊಲೀಸರು ಒಂದು ಸುತ್ತು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಆತನಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಡದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಠ್ಹಲ್ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಪೊಲೀಸರು ಆತನನನ್ನು ವಶಕ್ಕೆ ಪಡೆದಿದ್ದು, ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆ:
ರಿಕ್ಕಿ ರೈ ಗನ್ ಮ್ಯಾನ್ ವಿಠಲ್ ಮೇಲೆ ಸಾಕಷ್ಟು ಅನುಮಾನವಿದೆ. ಹಾಗಾಗಿ ಆತನನ್ನ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದ್ದೇವೆ. ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದರು. ಸುದ್ದಿಗಾರೊಂದಿಗೆ ಮಾತನಾಡಿ, ಪ್ರಕರಣದ ವಿಚಾರಣೆ ಮುಂದುವರೆದಿದೆ. ಪ್ರಕರಣದಲ್ಲಿ ರಿಕ್ಕಿ ರೈ ಗನ್ ಮ್ಯಾನ್‌ಗಳು ಬಳಸುತ್ತಿದ್ದ 7 ಗನ್‌ಗಳನ್ನ ವಶಕ್ಕೆ ಪಡೆದಿದ್ದೇವೆ. ಸ್ಥಳದಲ್ಲಿ ಸಿಕ್ಕ ಗುಂಡುಗಳು ಹಾಗೂ ವಶಪಡಿಸಿಕೊಂಡ ಗನ್‌ಗಳನ್ನ ಎಫ್‌ಎಸ್‌ಎಲ್ ಗೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಯಾವ ಗನ್ ಬಳಸಲಾಗಿದೆ ಎಂಬುದು ಖಚಿತವಾಗುತ್ತೆ. ಅಲ್ಲದೇ ಎಫ್‌ಐಆರ್‌ನಲ್ಲಿ ದಾಖಲಾದ ಎ೧ ಹಾಗೂ ಎ೩ ಆರೋಪಿಗಳನ್ನ ವಿಚಾರಣೆ ಮಾಡಲಾಗಿದೆ. ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಕರೆಯಲಾಗುವುದು. ಎ2 ಹಾಗೂ ಎ4 ಆರೋಪಿಗಳು ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ್ದಾರೆ. ಅವರನ್ನೂ ಕರೆದು ವಿಚಾರಣೆ ಮಾಡುತ್ತೇವೆ ಎಂದರು.
ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ:ರಾಕೇಶ್ ಮಲ್ಲಿ
ರಿಕ್ಕಿ ರೈ ಶೂಟೌಟ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಪೊಲೀಸರ ನೋಟಿಸ್ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣದ ಎ1 ಆರೋಪಿ ರಾಕೇಶ್ ಮಲ್ಲಿ ತಿಳಿಸಿದರು.
ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಬಳಿಕ ರಾಕೇಶ್ ಮಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುತ್ತಪ್ಪ ರೈ ಮೇಲೆ ಹಿಂದೆ ಅಟ್ಯಾಕ್ ಮಾಡಿದ್ದ ಫ್ರಾನ್ಸಿಸ್ ಜೊತೆ ಸೇರಿ ಈಗ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ನನ್ನ ರಾಜಕೀಯ ಭವಿಷ್ಯ ಹಾಳು ಮಾಡಲು ಇವೆಲ್ಲ ಸಂಚು ನಡೆಯುತ್ತಿದೆ. ಸರ್ಕಾರದಿಂದ ನನಗೆ ಇಬ್ಬರು ಗನ್ ಮ್ಯಾನ್‌ಗಳನ್ನ ನೀಡಲಾಗಿದೆ. ಅದನ್ನ ತೆಗೆಸಿಹಾಕಲು ಇಲ್ಲಸಲ್ಲದ ಆರೋಪ ಹೊರಿಸಲಾಗುತ್ತಿದೆ. ಮುತ್ತಪ್ಪ ರೈಗೂ ನನಗೂ ಹಿಂದೆ ವೈಮನಸ್ಸು ಇದ್ದದ್ದು ನಿಜ, ಅದು ಆಗಲೇ ಮುಗಿದು ಹೋಗಿದೆ. ಅವರ ಮಕ್ಕಳಿಗೂ, ನನಗೂ ಯಾವ ವ್ಯವಹಾರವೂ ಇಲ್ಲ, ದ್ವೇಷವೂ ಇಲ್ಲ. ನನ್ನ ರಾಜಕೀಯ ಭವಿಷ್ಯಕ್ಕೆ ಅಡ್ಡಿ ಮಾಡಲು, ನಮ್ಮ ಪಕ್ಷದವರೂ ಸೇರಿ ಕೆಲವರು ನನ್ನ ಹೆಸರು ಕೆಡಿಸಲು ಹೀಗೆ ಮಾಡುತ್ತಿದ್ದಾರೆ. ರಿಕ್ಕಿ ಕಾರಿನ ಡ್ರೈವರ್‌ಗೆ ನನ್ನ ಹೆಸರೇ ಗೊತ್ತಿಲ್ಲ. ಅಂತಹವನಿಗೆ ನನ್ನ ಹೆಸರು ಹೇಳಿಸಿ ದೂರು ಕೊಡಿಸಿದ್ದಾರೆ. ಇದರ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ ಎಂದರು.
