ಮೀಸಲಾತಿ ಘೋಷಿಸಿದರೆ ಸನ್ಮಾನ, ಇಲ್ಲವೇ ವಿರಾಟ ಸಮಾವೇಶ: ಜಯಮೃತ್ಯುಂಜಯ ಶ್ರೀ
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಘೋಷಣೆಯಾದರೆ, ಸಿಎಂಗೆ ಸನ್ಮಾನ ಇಲ್ಲವಾದರೆ ಹೋರಾಟ ಎಂದು ಕೂಡಲ ಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಗದಗ (ಡಿ.7) : ಎರಡು ವರ್ಷದ ಹೋರಾಟದ ಪರಿಣಾಮ ಸರ್ಕಾರ ಡಿಸೆಂಬರ್ 19 ಮೀಸಲಾತಿ ಘೋಷಿಸಲಿದೆ ಅನ್ನೋ ವಿಶ್ವಾಸವಿದೆ. ಒಂದು ವೇಳೆ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಘೋಷಣೆಯಾದರೆ, ಸಿಎಂಗೆ ಸನ್ಮಾನ ಇಲ್ಲವಾದರೆ ಹೋರಾಟ ಎಂದು ಕೂಡಲ ಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಘೋಷಣೆ ಮಾಡಿದರೆ ಅವರಿಗೆ ಕಲ್ಲುಸಕ್ಕರೆ ತುಲಾಬಾರ ಮಾಡಲಾಗುವುದು. ಹಸಿರು ಶಾಲು ಹಾಕಿ, ವಿಜಯಪುರ ರುಮಾಲು ಸುತ್ತಿ ಗೋಕಾಕ್ ಕರದಂಟು ತಿನ್ನಿಸುತ್ತೇವೆ. ಅಲ್ಲದೆ ಮಠದಲ್ಲಿ ಸಿಎಂ ಫೋಟೋ ಹಾಕಿಗೌರವ ನೀಡುತ್ತೇವೆ. ಡಿ.17 ರಂದು ಗದಗ ತೋಂಟದಾರ್ಯ ಮಠದಿಂದ ರ್ಯಾಲಿ ಮಾಡಿ ಸಮಾವೇಶ ಮಾಡಲಿದ್ದೇವೆ. ಡಿ.19ಕ್ಕೆ ಸವದತ್ತಿಯಲ್ಲಿ ಕೊನೆಯ ಸಮಾವೇಶ ನಡೆಯಲಿದೆ. ಅಷ್ಟರಲ್ಲಿ ಮೀಸಲಾತಿ ಘೋಷಣೆಯಾಗಲಿದೆ. ಮೀಸಲಾತಿ ಘೋಷಣೆಯಾದಲ್ಲಿ ಅಲ್ಲೇ ಸಂಭ್ರಮಾಚರಣೆ ಮಾಡುತ್ತೇವೆ. ಡಿ.22 ಕ್ಕೆ ಸುವರ್ಣ ಸೌಧ ಆವರಣದಲ್ಲಿ 25 ಲಕ್ಷ ಜನರನ್ನ ಸೇರಿಸಿ ಮುಖ್ಯಮಂತ್ರಿಗೆ ಸನ್ಮಾನ ಮಾಡುತ್ತೇವೆ. ಒಂದು ವೇಳೆ ಮೀಸಲಾತಿ ವಿಳಂಬವಾದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ಡಿ.19ಕ್ಕೆ ಮೀಸಲಾತಿ ಘೋಷಿಸದಿದ್ದರೆ, 22ಕ್ಕೆ ಸುವರ್ಣ ಸೌಧ ಮುತ್ತಿಗೆ: ಬೊಮ್ಮಾಯಿ ಸರ್ಕಾರಕ್ಕೆ ಕೂಡಲ ಶ್ರೀ ಎಚ್ಚರಿಕೆ
ಯಾರೇ ಹೋರಾಟ ಮಾದಿದರೂ ಒಳಿತಾಗಬೇಕು: ಎರಡು ವರ್ಷದಿಂದ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಮಾಡಿದ್ದೇನೆ. ಹರಿಹರ ಪೀಠ ಅಥವಾ ಇನ್ನೊಬ್ಬರ ವಿಷಯ ಗೊತ್ತಿಲ್ಲ. ಈ ನಡುವೆ ಯಾರೇ ಹೋರಾಟ ಮಾಡಿದ್ದರೂ ಅದರ ಬಗ್ಗೆ ಅನ್ನೋದು ಗೊತ್ತಿಲ್ಲ. ಪಾಪ ಯಾರೋ ಹೋರಾಟ ಮಾಡಿಕೊಳ್ಳುತ್ತಾರೆ ಮಾಡಿಕೊಳ್ಳಲಿ ಬಿಡಿ. ಆದರೆ, ಯಾರೇ ಹೋರಾಟ ಮಾಡಿದರೂ ಅದರಿಂದ ಸಮಾಜಕ್ಕೆ ಒಳಿತಾಗಬೇಕು ಎಂದು ತಿಳಿಸಿದರು.
ಗಡಿ ಹೋರಾಟಕ್ಕೆ ನಮ್ಮ ಬೆಂಬಲವಿದೆ: ಇನ್ನು ನಾಡು ನುಡಿ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಮಹಾರಾಷ್ಟ್ರ ಸರ್ಕಾರವೇ ಮಹಾಜನ ಸಮಿತಿ ನೇಮಕ ಮಾಡಿತ್ತು. ಸಮಿತಿ ವರದಿ ಪ್ರಕಾರ ಬೆಳಗಾವಿ ಸೇರಿದಂತೆ ತಜ್ ಪ್ರದೇಶ, ಸಾಂಗ್ಲಿ ಕರ್ನಾಟಕ್ಕೆ ಸೇರಬೇಕು. ಅವರ ಸಮೀತಿಯಲ್ಲೇ ಬೆಳಗಾವಿ ನಮ್ಮದು ಅಂತಾ ಆಗಿದೆ. ಈಗ ವಿನಾಕರಣ ಮಹಾರಾಷ್ಟ್ರ ಸರ್ಕಾರ ಗಡಿ ಖ್ಯಾತೆ ತೆಗೆಯವ ಪ್ರಯತ್ನ ಮಾಡಬಾರದು. ಮಹಾರಾಷ್ಟ್ರದ ಪುಂಡರು ಕನ್ನಡಿಗರೊಂದಿಗೆ ತಂಟೆ ತಕರಾರು ಮಾಡಲು ಬಂದಲ್ಲಿ ನಾವು ಚನ್ನಮ್ಮ, ರಾಯಣ್ಣನ ಅಭಿಮಾನಿಗಳು ಒಂದಿಂಚು ಭೂಮಿಯನ್ನೂ ಕೊಡುವುದಿಲ್ಲ. ಗಡಿ ವಿಷಯವಾಗಿ ಸರ್ಕಾರದ ಪರವಾಗಿದ್ದೇವೆ. ಈ ಬಗ್ಗೆ ಸರ್ಕಾರ ದಿಟ್ಟತನದ ನಿರ್ಧಾರ ತೆಗೆದುಕೊಳ್ಳಲಿ. ಆದರೆ, ನಾವು ಮೀಸಲಾತಿ ಹೋರಾಟದಲ್ಲಿದ್ದೇನೆ. ಗಡಿ ಪ್ರದೇಶದ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ತಿಳಿಸಿದರು.