Asianet Suvarna News Asianet Suvarna News

ಯಶಸ್ವಿನಿ ನೋಂದಣಿ ಅವಧಿ ವಿಸ್ತರಣೆಗೆ ಆಗ್ರಹ

ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಸಲು ಶನಿವಾರವೇ ಕೊನೆಯ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿವೆ. ಆದ್ದರಿಂದ ಸರ್ಕಾರ ನೋಂದಣಿ ಅವಧಿ ವಿಸ್ತರಿಸಿದರೆ ಅನುಕೂಲವಾಗಲಿದೆ: ಸಿರಿಗೆರೆ ರಾಜಣ್ಣ 

Request for Extension of Yashasvini Registration Period in Karnataka grg
Author
First Published Dec 31, 2022, 9:00 AM IST

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಡಿ.31):  ರಾಜ್ಯ ಸರ್ಕಾರದ ಮಹತ್ವದ ಯಶಸ್ವಿನಿ ಯೋಜನೆಯಡಿ ನೋಂದಣಿಗೆ ಡಿ. 31 ಕೊನೆಯ ದಿನವಾಗಿದ್ದು ಲಕ್ಷಾಂತರ ಷೇರುದಾರರು ಇನ್ನೂ ನೋಂದಣಿಗೆ ಮುಂದಾಗಿಲ್ಲ. ಮತ್ತೊಂದೆಡೆ ಸಹಕಾರ ಸಂಘಗಳಲ್ಲಿ ಖಾತೆ ಹೊಂದಿರುವ ಬಹುತೇಕ ಸ್ತ್ರೀ ಶಕ್ತಿ ಸಂಘಗಳ ಸದಸ್ಯೆಯರು ಷೇರುದಾರರಾಗಿಲ್ಲ. ಆದ್ದರಿಂದ ದಿನಾಂಕ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಹಳ್ಳಿ-ಹಳ್ಳಿಗಳಲ್ಲೂ ಇರುವ ಸ್ತ್ರೀ ಶಕ್ತಿ ಸಹಕಾರ ಸಂಘಗಳ ಮಹಿಳೆಯರು ಸಹಕಾರಿ ಸಂಘಗಳಲ್ಲಿ ಸಂಘದ ಬ್ಯಾಂಕ್‌ ಖಾತೆ ಹೊಂದಿದ್ದರೂ ಬಹುತೇಕರು ವೈಯಕ್ತಿಕವಾಗಿ ಷೇರುದಾರರಾಗಿಲ್ಲ. ಆದ್ದರಿಂದ ಇಂತಹ ಮಹಿಳೆಯರು ಯಶಸ್ವಿನಿ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಆಗುತ್ತಿಲ್ಲ. ಆಯಾ ಸಂಘಗಳ ಬೈಲಾದಂತೆ ಕನಿಷ್ಠ 500 ರುಪಾಯಿಯಿಂದ ಷೇರು, ಪ್ರವೇಶ ಶುಲ್ಕವಿದೆ.

ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕೆಂದರೆ ಪೂರ್ವಾನ್ವಯವಾಗಿ ಮೂರು ತಿಂಗಳು ಮೊದಲೇ ಸಹಕಾರ ಸಂಘಗಳ ಷೇರುದಾರರಾಗಬೇಕಿದೆ. ಇದರಿಂದಾಗಿ ತಕ್ಷಣ ಷೇರುದಾರರಾದರೂ ಅನಿವಾರ್ಯ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಇದೂ ಸಹ ರಾಜ್ಯದಲ್ಲಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವಲ್ಲಿ ಹಿನ್ನಡೆ ಉಂಟು ಮಾಡಿದೆ. ಆದ್ದರಿಂದ ನೋಂದಣಿ ಅವಧಿ ವಿಸ್ತರಿಸಬೇಕು ಎಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಕೋಟ್ಯಂತರ ಜನಕ್ಕೆ ಯಶಸ್ವಿನಿ ಯೋಜನೆ ಅನುಕೂಲ: ಸ್ಪೀಕರ್‌ ಕಾಗೇರಿ

ನೋಂದಣಿ ಹಿನ್ನಡೆ:

ಸಹಕಾರ ಇಲಾಖೆ ಮೂಲಗಳ ಪ್ರಕಾರ ರಾಜ್ಯದಲ್ಲಿ 45000 ವಿವಿಧ ವರ್ಗದ ಸಹಕಾರ ಸಂಘಗಳಿದ್ದು 2.30 ಕೋಟಿಗೂ ಅಧಿಕ ಸದಸ್ಯರಿದ್ದಾರೆ. 2022-23 ನೇ ಸಾಲಿಗೆ ಯಶಸ್ವಿನಿ ಯೋಜನೆಡಿ 30 ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಿದ್ದರೂ ಇಲ್ಲಿಯವರೆಗೂ ಸುಮಾರು 20 ಲಕ್ಷ ಸದಸ್ಯರನ್ನಷ್ಟೇ ನೋಂದಣಿ ಮಾಡಲಾಗಿದೆ. ಇನ್ನುಳಿದವರು ಅಷ್ಟೇನೂ ಆಸಕ್ತಿ ತೋರಿಸುತ್ತಿಲ್ಲ. ಇದೆಲ್ಲವನ್ನೂ ಪರಿಗಣಿಸಿ ನೋಂದಣಿ ದಿನಾಂಕ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಏನಿದು ಯೋಜನೆ?:

ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಂಡಿರುವ ವಿಶೇಷ ಯೋಜನೆ ‘ಯಶಸ್ವಿನಿ’ ಆಗಿದ್ದು ಫಲಾನುಭವಿಯ ಕುಟುಂಬಕ್ಕೆ ವಾರ್ಷಿಕವಾಗಿ ಗರಿಷ್ಠ 5 ಲಕ್ಷ ರುಪಾಯಿವರೆಗೆ ಚಿಕಿತ್ಸಾ ವೆಚ್ಚ ಮಿತಿಗೊಳಿಸಲಾಗಿದೆ. ರಾಜ್ಯದ ಯಾವುದೇ ಸಹಕಾರ ಸಂಘ/ಗ್ರಾಮೀಣ ಸ್ವ ಸಹಾಯ ಗುಂಪಿನಲ್ಲಿ ಕುಟುಂಬದ ಒಬ್ಬ ವ್ಯಕ್ತಿ ಸದಸ್ಯನಾಗಿ 3 ತಿಂಗಳಾಗಿದ್ದರೆ ಸಾಕು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು.

ರೈತರ ಅನುಕೂಲತೆಗೆ ಯಶಸ್ವಿನಿ ಯೋಜನೆ ಮರುಜಾರಿ: ಸಚಿವ ಸೋಮಶೇಖರ್‌

ಗ್ರಾಮೀಣ ಭಾಗದಲ್ಲಿ ನಾಲ್ಕು ಸದಸ್ಯರ ಕುಟುಂಬವೊಂದಕ್ಕೆ 500 ರು. ನಿಗದಿಗೊಳಿಸಿದ್ದು ಪ್ರತಿ ಹೆಚ್ಚುವರಿ ಸದಸ್ಯರಿಗೆ ತಲಾ 100 ರು. ಪಾವತಿಸಬೇಕು. ನಗರ ಪ್ರದೇಶದಲ್ಲಿ ನಾಲ್ಕು ಸದಸ್ಯರ ಕುಟುಂಬಕ್ಕೆ 1 ಸಾವಿರ ರು. ನಿಗದಿ ಮಾಡಿದ್ದು ಪ್ರತಿ ಹೆಚ್ಚವರಿ ಸದಸ್ಯರಿಗೆ 200 ರು. ನೀಡಬೇಕಿದೆ. ಪರಿಶಿಷ್ಟಜಾತಿ ಮತ್ತು ಪಂಗಡವರಿಗೆ ಸರ್ಕಾರವೇ ಸದಸ್ಯತ್ವದ ವಂತಿಗೆಯನ್ನು ಭರಿಸಲಿದೆ.

ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಸಲು ಶನಿವಾರವೇ ಕೊನೆಯ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿವೆ. ಆದ್ದರಿಂದ ಸರ್ಕಾರ ನೋಂದಣಿ ಅವಧಿ ವಿಸ್ತರಿಸಿದರೆ ಅನುಕೂಲವಾಗಲಿದೆ ಅಂತ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ತಿಳಿಸಿದ್ದಾರೆ.  

Follow Us:
Download App:
  • android
  • ios