ರೈತರ ಅನುಕೂಲತೆಗೆ ಯಶಸ್ವಿನಿ ಯೋಜನೆ ಮರುಜಾರಿ: ಸಚಿವ ಸೋಮಶೇಖರ್
ರೈತರ ಅನುಕೂಲತೆಗಾಗಿ ಯಶಸ್ವಿನಿ ಯೋಜನೆಯನ್ನು ಅ.2ರ ಗಾಂಧಿ ಜಯಂತಿಯಂದು ಮರು ಜಾರಿಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಹೈನುಗಾರಿಕೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ.
ಸುಬ್ರಹ್ಮಣ್ಯ (ಜು.24): ಯಶಸ್ವಿನಿ ಯೋಜನೆ ಜಾರಿಯಾಗಿರಲಿಲ್ಲ, ಸುಮಾರು 2-3 ವರ್ಷಗಳ ನಂತರ ಮತ್ತೆ ಚಾಲನೆ ನೀಡುತ್ತಿದ್ದೇವೆ. ಸುಮಾರು ಸಹಕಾರಿಗಳು ಹಲವು ವರ್ಷಗಳಿಂದ ಯಶಸ್ವಿನಿ ಯೋಜನೆ ಮತ್ತೆ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಅ.2ರ ಗಾಂಧಿ ಜಯಂತಿಯಂದು ಮರು ಜಾರಿಮಾಡಲು ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಅವರು ಶನಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಅ.2ರಂದು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಯಶಸ್ವಿನಿಗೆ ಅ.2ರ ನಂತರ ಸದಸ್ಯರಾಗಬಹುದು. ಈ ಹಿಂದೆ ಸದಸ್ಯರಾಗಿದ್ದವರು ಕೂಡ ಮತ್ತೆ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದರು.
ಯಶಸ್ವಿನಿ ಯೋಜನೆ ಮತ್ತೆ ಜಾರಿ ಚಿಂತನೆ: ಬೊಮ್ಮಾಯಿ
ಹೈನುಗಾರಿಕೆಗೆ ಪ್ರತ್ಯೇಕ ಬ್ಯಾಂಕ್
ಹೈನುಗಾರಿಕೆ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಈಗಾಗಲೇ 26 ಲಕ್ಷ ರೈತರು ಹಾಲನ್ನು ಹಾಕುತ್ತಿದ್ದಾರೆ. ಅವರಿಗೆ ಪ್ರತ್ಯೇಕವಾಗಿ ನಂದಿನಿ ಕ್ಷೀರಾ ಸಮೃದ್ಧಿ ಬ್ಯಾಂಕ್ ಮಾಡಲು ರಿಸವ್‌ರ್ ಬ್ಯಾಂಕ್‌ನಿಂದ ಅನುಮತಿ ಪಡೆಯಲಾಗಿದ್ದು, ಅವರಿಗೆ ಪೂರಕ ಮಾಹಿತಿ, ದಾಖಲೆ ನೀಡಲಾಗಿದೆ. ಸುಮಾರು ವರ್ಷದಿಂದ ಹೊಸತಾಗಿ ಯಾರಿಗೂ ಕೋ-ಆಪರೇಟಿವ್ ಬ್ಯಾಂಕ್‌ಗೆ ಅವಕಾಶ ನೀಡಿಲ್ಲ. ಅದಕ್ಕಾಗಿ ಇದೀಗ ಅವಕಾಶ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳ ಕನಸಿನ ಕೂಸಾದ ಈ ಬ್ಯಾಂಕ್, ಸಹಕಾರ ಕ್ಷೇತ್ರದ ಬ್ಯಾಂಕ್ ಆಗಿ ಜನತೆಗೆ ಸಹಕಾರ ನೀಡಲಿದೆ. ನಬಾರ್ಡ್‌ನಿಂದ ಇದಕ್ಕೆ ಬೇಕಾದ ಯೋಜನೆಗಳನ್ನು ಪಡೆಯಲು ಪ್ರಯತ್ನಿಸಲಾಗುವುದು. ಇದನ್ನೂ ಅಕ್ಟೋಬರ್‌ನಲ್ಲಿ ಆರಂಭಿಸಲಾಗುವುದು ಎಂದು ಸೋಮಶೇಖರ್ ಹೇಳಿದರು.
ಬೆಳೆಸಾಲ ನೀಡಲು ಕೃಷಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಹಣ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು. ಅತಿವೃಷ್ಟಿಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ ಮತ್ತು ಮನೆ ಇತ್ಯಾದಿಗಳು ಹಾನಿಗೊಳಗಾದ ಕೃಷಿಕರಿಗೆ ತಕ್ಷಣ ಪರಿಹಾರ ವಿತರಿಸಲಾಗುತ್ತಿದೆ. 5 ಲಕ್ಷ, 3 ಲಕ್ಷ, 1ಲಕ್ಷ ಹಾಗೂ 50 ಸಾವಿರ ರು. ವರೆಗೆ ಜಿಲ್ಲಾಧಿಕಾರಿಗಳ ವರದಿಯನ್ನು ಆಧರಿಸಿ ತಕ್ಷಣ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಕುಕ್ಕೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ವನಜಾ ವಿ. ಭಟ್, ಮಾಜಿ ಸದಸ್ಯ ಕಿಶೋರ್ ಶಿರಾಡಿ ಉಪಸ್ಥಿತರಿದ್ದರು.