ಹಿರಿಯ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರು ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ, ಅವರ ಅವಿರೋಧ ಆಯ್ಕೆ ಖಚಿತವಾಗಿದೆ. ಸಚಿವಾಕಾಂಕ್ಷಿಯಾಗಿದ್ದ ಉಮಾಶ್ರೀ ಅವರು ಇದೀಗ ಮೇಲ್ಮನೆಯ ಉನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ಬೆಂಗಳೂರು (ಆ.17): ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಹುದ್ದೆಗೆ ಕಾಂಗ್ರೆಸ್‌ನ ಹಿರಿಯ ಸದಸ್ಯೆ, ಖ್ಯಾತ ನಟಿ ಉಮಾಶ್ರೀ ಅವರು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವು ಈ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿರುವುದರಿಂದ, ಉಮಾಶ್ರೀ ಅವರು ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ. ನಾಳೆ ಸದನದಲ್ಲಿ ಅಧಿಕೃತವಾಗಿ ಅವರ ಆಯ್ಕೆಯನ್ನು ಪ್ರಕಟಿಸಲಾಗುತ್ತದೆ.
'ಸಚಿವೆ ಆಗುವ ಆಸೆ ಇತ್ತು, ಆದರೆ...'
ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಮಾಶ್ರೀ ಅವರು ತಮ್ಮ ಮನದ ಇಂಗಿತವನ್ನು ಹಂಚಿಕೊಂಡರು. 'ನಗೂ ಸಹಜವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಸಚಿವೆ ಆಗುವ ಆಕಾಂಕ್ಷೆ ಇತ್ತು. ಆದರೆ, ನಮ್ಮ ಕಾಂಗ್ರೆಸ್ ಪಕ್ಷ ನನಗೆ ಸಚಿವ ಸ್ಥಾನಕ್ಕಿಂತಲೂ ಅತ್ಯಂತ ಉನ್ನತವಾದ ಸಾಂವಿಧಾನಿಕ ಸ್ಥಾನವನ್ನು ಗೌರವದಿಂದ ನೀಡಿದೆ. ಹಾಗಾಗಿ ನನಗೆ ಈ ಸ್ಥಾನ ಸಿಕ್ಕಿದ್ದಕ್ಕೆ ಅತ್ಯಂತ ತೃಪ್ತಿಯಿದೆ. ನನಗೆ ಈ ಮಹತ್ವದ ಜವಾಬ್ದಾರಿ ನೀಡಿದ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. 'ಪಕ್ಷ ಮತ್ತು ಸದನ ನನ್ನ ಮೇಲಿಟ್ಟಿರುವ ನಿರೀಕ್ಷೆಗೆ ತಕ್ಕಂತೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿಕೊಂಡು ಹೋಗುತ್ತೇನೆ' ಎಂದು ತಿಳಿಸಿದರು.
ಕಣದಿಂದ ಹಿಂದೆ ಸರಿದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ:
ಮತ್ತೊಂದೆಡೆ, ಉಪಸಭಾಪತಿ ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಾಣ ನಡೆ ಪ್ರದರ್ಶಿಸಿದೆ. ಇತ್ತೀಚೆಗಷ್ಟೇ ನಡೆದ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಸ್ಪರ್ಧಿಸಿ, ಸಂಖ್ಯಾಬಲದ ಕೊರತೆಯಿಂದಾಗಿ ಸೋಲು ಕಂಡಿದ್ದರು. ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಸಂಖ್ಯಾಬಲ ಇರುವುದರಿಂದ, ಮತ್ತೊಮ್ಮೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೋತು ಮುಜುಗರಕ್ಕೆ ಈಡಾಗುವುದು ಬೇಡ ಎಂದು ಎನ್‌ಡಿಎ ನಾಯಕರು ನಿರ್ಧರಿಸಿದ್ದಾರೆ.
ಹೀಗಾಗಿ, ಯಾವುದೇ ಪೈಪೋಟಿ ಇಲ್ಲದೆ ಉಮಾಶ್ರೀ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದು, ನಾಳೆ ಸದನ ಆರಂಭವಾಗುತ್ತಿದ್ದಂತೆ ಅವರ ಅವಿರೋಧ ಆಯ್ಕೆಯನ್ನು ಸಭಾಪತಿಗಳು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಚಿವರಾಗಿ, ಶಾಸಕಿಯಾಗಿ ಹಾಗೂ ಪರಿಷತ್ ಸದಸ್ಯೆಯಾಗಿ ಅಪಾರ ಅನುಭವ ಹೊಂದಿರುವ ಉಮಾಶ್ರೀ ಅವರು, ಇದೀಗ ಮೇಲ್ಮನೆಯ ಪೀಠವನ್ನೇರಲು ಸಜ್ಜಾಗಿದ್ದಾರೆ.


