ನ್ಯೂಯಾರ್ಕ್‌ನ ಆಲ್ಬನಿಯಲ್ಲಿ ನೆಲೆಸಿರುವ ಕನ್ನಡಿಗ ದಂಪತಿ ಸುಚಿತ ಮತ್ತು ಅಮೋಲ್ ಜಾಜು ಅವರ ನೂತನ ಗೃಹಪ್ರವೇಶ ಸಮಾರಂಭದಲ್ಲಿ ದೇಶಭಕ್ತಿ ಮೊಳಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಪೂಜೆಯ ನಂತರ ನೆರೆದಿದ್ದವರೆಲ್ಲರೂ 'ವಂದೇ ಮಾತರಂ' ಮತ್ತು 'ಜನಗಣಮನ' ಗೀತೆಗಳನ್ನು ಹಾಡಿ ತಾಯ್ನಾಡಿನ ಮೇಲಿನ ಪ್ರೀತಿಯನ್ನು ಮೆರೆದರು.

ನ್ಯೂಯಾರ್ಕ್: 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150 ವರ್ಷಗಳ ನಂತರ, ಸಾವಿರಾರು ಮೈಲು ದೂರದ ಅಮೆರಿಕದ ಕನ್ನಡಿಗರ ಮನೆಯಲ್ಲೂ ಮೊಳಗಿದೆ!

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಕನ್ನಡಿಗರಾದ ಸುಚಿತ ಜಾಜು ಮತ್ತು ಅಮೋಲ್ ಜಾಜು ಅವರ ನೂತನ ಮನೆಯ ಗೃಹಪ್ರವೇಶ ಸಮಾರಂಭ ಸಂಭ್ರಮದಿಂದ ನಡೆಯಿತು.

‘ವಂದೇ ಮಾತರಂ’ ಮತ್ತು ‘ಜನಗಣಮನ’

ಗೃಹಪ್ರವೇಶದ ಅಂಗವಾಗಿ ಹೋಮ, ಹವನ ಹಾಗೂ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿತ್ತು. ಪೂಜೆಯ ಕೊನೆಯಲ್ಲಿ ಮಂಗಳಾರತಿ ನಡೆಯುತ್ತಿದ್ದ ಸಂದರ್ಭದಲ್ಲಿ ಪುರೋಹಿತರಾದ ಶ್ರೀಧರ ಆಚಾರ್ಯ ಅವರು ಅಂದು ಆಗಸ್ಟ್ 15 ಎಂಬುದನ್ನು ನೆನಪಿಸಿ ಭಾರತದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸುವಂತೆ ಕರೆ ನೀಡಿದರು.

ಅಲ್ಲಿ ನೆರೆದಿದ್ದ ಎಲ್ಲರೂ ಒಟ್ಟಾಗಿ ‘ವಂದೇ ಮಾತರಂ’ ಮತ್ತು ‘ಜನಗಣಮನ’ ಗೀತೆಗಳನ್ನು ಹಾಡಿದರು. ನಂತರ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳು ಮೊಳಗಿದವು. ಗೃಹಪ್ರವೇಶದ ಸಂಭ್ರಮ ಕ್ಷಣಾರ್ಧದಲ್ಲಿ ದೇಶಭಕ್ತಿಯ ಸಂಭ್ರಮವಾಗಿಯೂ ಮಾರ್ಪಟ್ಟಿತು.

ಬಂಕಿಮಚಂದ್ರ ಚಟ್ಟೋಪಾಧ್ಯಾಯರು 1875ರಲ್ಲಿ ರಚಿಸಿದ ‘ವಂದೇ ಮಾತರಂ’ಗೆ ಈಗ 150 ವರ್ಷಗಳ ಸಂಭ್ರಮ. ಈ ಐತಿಹಾಸಿಕ ಸಂದರ್ಭವನ್ನು ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2025ರ ನವೆಂಬರ್‌ನಿಂದ 2026ರ ನವೆಂಬರ್‌ವರೆಗೆ ದೇಶಾದ್ಯಂತ ‘ವಂದೇ ಮಾತರಂ’ 150ನೇ ವರ್ಷಾಚರಣೆಯನ್ನು ಹಮ್ಮಿಕೊಂಡಿದೆ.

ಅದೇ ‘ವಂದೇ ಮಾತರಂ’ ಇಂದು ತಾಯ್ನಾಡಿನಿಂದ ಸಾವಿರಾರು ಮೈಲು ದೂರದ ಅಮೆರಿಕದ ಆಲ್ಬನಿಯ ಮನೆಯೊಂದರ ಗೃಹಪ್ರವೇಶದಲ್ಲೂ ಮೊಳಗಿರುವುದು ವಿಶೇಷ.

ಇದನ್ನೂ ಓದಿ: ಐಐಟಿ ಕನಸು ಭಂಗವಾಯ್ತೆಂದು ಗೂಗಲ್ ಬೆನ್ನೇರಿದ ಭಾರತೀಯ ಯುವಕ, ಸೋಲೊಪ್ಪದೇ ಗೆದ್ದ ಕಂಟೆಂಟ್ ಕ್ರಿಯೇಟರ್ ಸ್ಪೂರ್ತಿಯ ಕಥೆ!

ಮನೆ ಅಮೆರಿಕದಲ್ಲಿರಬಹುದು... ಆದರೆ ಮನಸ್ಸಿನಲ್ಲಿ ಭಾರತ!

ತಾಯ್ನಾಡಿನಿಂದ ಸಾವಿರಾರು ಮೈಲು ದೂರದಲ್ಲಿ ನೆಲೆಸಿದ್ದರೂ ತಮ್ಮ ಮನೆಯ ಶುಭ ಸಮಾರಂಭದಲ್ಲಿಯೂ ಸ್ವಾತಂತ್ರ್ಯ ದಿನವನ್ನು ಮರೆಯದೆ ವಂದೇ ಮಾತರಂ ಮತ್ತು ಜನಗಣಮನ ಹಾಡಿ ದೇಶಪ್ರೇಮ ಮೆರೆದ ಈ ಕ್ಷಣ ನಿಜಕ್ಕೂ ಸ್ಫೂರ್ತಿದಾಯಕ.

ದೇಶಪ್ರೇಮಕ್ಕೆ ಗಡಿಗಳಿಲ್ಲ, ದೂರವೂ ಅಡ್ಡಿಯಲ್ಲ. ತಾಯ್ನಾಡು ಸಾವಿರಾರು ಮೈಲು ದೂರವಿದ್ದರೂ ಭಾರತವನ್ನು ಹೃದಯದಲ್ಲಿ ಹೊತ್ತು ಬದುಕಬಹುದು ಎಂಬುದಕ್ಕೆ ಈ ಗೃಹಪ್ರವೇಶವೇ ಒಂದು ಸುಂದರ ಉದಾಹರಣೆ.

ಇದನ್ನೂ ಓದಿ: ​"ಅವರು ಕುಣಿದು ಕುಪ್ಪಳಿಸ್ತಾರೆ, ನಾನ್ ಮಲಗಿ ಕಣ್ಣೀರು ಹಾಕ್ತೀನಿ!" ನೆರೆಮನೆಯ ಪಾರ್ಟಿ ನೋಡಿ ಟೆಕ್ಕಿಗೆ ಶುರುವಾಯ್ತು..