ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ನಂತರ ದರ್ಶನ್, ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ. ರಜಾ ದಿನಗಳಲ್ಲಿ ಕುಟುಂಬದ ಭೇಟಿಗೆ ಅವಕಾಶವಿಲ್ಲದ ಕಾರಣ, ಅವರು ಸೋಮವಾರದವರೆಗೆ ಕಾಯಬೇಕಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ವಜಾಗೊಂಡ ಹಿನ್ನೆಲೆಯಲ್ಲಿ ಮತ್ತೆ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್, ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್ ಗೆ ಇಂದು, ನಾಳೆ ಮತ್ತು ಭಾನುವಾರ ರಜೆಯ ಹಿನ್ನೆಲೆಯಲ್ಲಿ ಮನೆಯವರನ್ನು ಭೇಟಿಯಾಗುವ ಅವಕಾಶ ಇಲ್ಲ. ಜೈಲಿನ ನಿಯಮದ ಪ್ರಕಾರ ರಜಾ ದಿನಗಳಲ್ಲಿ ಕೈದಿಗಳಿಗೆ ಮನೆಯವರನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ. ಸೋಮವಾರ ದರ್ಶನ್ ಮತ್ತು ಪವಿತ್ರ ಗೌಡಗೆ ಕುಟುಂಬದವರನ್ನು ಭೇಟಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಪ್ರಸ್ತುತ, ದರ್ಶನ್ ಹಾಗೂ ಅವರ ತಂಡ ಕ್ವಾರಂಟೈನ್ ಜೈಲಿನಲ್ಲಿದ್ದು, ಪವಿತ್ರ ಗೌಡ ಮಾತ್ರ ಪ್ರಮುಖ ಜೈಲಿನ ಮಹಿಳಾ ಬ್ಯಾರಕ್‌ನಲ್ಲಿ ಸೆರೆವಾಸದಲ್ಲಿದ್ದಾರೆ. 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜೈಲು ಅಧಿಕಾರಿಗಳು ಬಂಧಿಗಳಿಗೆ ಲಾಡು ವಿತರಣೆ ಮಾಡಿದ್ದಾರೆ.
ಬೆಳಗ್ಗೆ ಉಪ್ಪಿಟ್ಟು ಸೇವಿಸಿದ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ನಟ ದರ್ಶನ್ ಆಗಸ್ಟ್ 15ರ ಬೆಳಗ್ಗೆ ಜೈಲಿನ ಮೆನುವಿನಂತೆ ನೀಡಲಾದ ಉಪ್ಪಿಟ್ಟನ್ನು ಸೇವಿಸಿದರು. ಜೈಲು ಸಿಬ್ಬಂದಿ ಸಾಮಾನ್ಯ ವಿಚಾರಣಾಧೀನ ಕೈದಿಗಳಿಗೆ ನೀಡುವ ರೀತಿಯಲ್ಲಿ ಉಪ್ಪಿಟ್ಟು ಒದಗಿಸಿದ್ದರು. ದರ್ಶನ್ ಜೊತೆಗೆ ಆರೋಪಿಗಳಾದ ನಾಗರಾಜ್, ಪ್ರದೂಶ್ ಮತ್ತು ಲಕ್ಷ್ಮಣ್ ಕೂಡ ಉಪ್ಪಿಟ್ಟನ್ನು ಸೇವಿಸಿದರು.
ದರ್ಶನ್, ನಾಗರಾಜ್, ಲಕ್ಷ್ಮಣ್ ಮತ್ತು ಪ್ರದೋಶ್ ನಾಲ್ವರು ಪ್ರಸ್ತುತ ಜೈಲಿನ ಕ್ವಾರಂಟೈನ್ ಸೆಲ್‌ನ ಅಡ್ಮಿಷನ್ ಬ್ಯಾರಕ್‌ನಲ್ಲಿ ಇದ್ದಾರೆ. ಇಂದು ಬೆಳಗ್ಗೆ 10 ಗಂಟೆಯ ನಂತರ ಇವರಿಗೆ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ನೀಡಲಾಗಿದೆ. ಅದರ ಬಳಿಕ, ಈ ನಾಲ್ವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸಬೇಕೋ ಅಥವಾ ಒಂದೇ ಬ್ಯಾರಕ್‌ನಲ್ಲಿ ಇರಿಸಬೇಕೋ ಎಂಬುದನ್ನು ಹಿರಿಯ ಜೈಲು ಅಧಿಕಾರಿಗಳು ನಿರ್ಧರಿಸಲಿದ್ದಾರೆ.
ಡಿ ಗ್ಯಾಂಗ್ ಗೆ ರಾತ್ರಿ ಮುದ್ದೆ ಚಪಾತಿ ಅನ್ನ ಸಾಂಬಾರ್ ಊಟ..!
ರಾತ್ರಿ ಜೈಲಿಗೆ ಹೋದ ದರ್ಶನ್ ಮತ್ತು ಗ್ಯಾಂಗ್ ಗೆ ಊಟಕ್ಕೆ ಚಪಾತಿ, ಅನ್ನ, ಸಾಂಬಾರ್ ನೀಡಲಾಯ್ತು. ರಾತ್ರಿ ಊಟ ಸೇವಿಸಿದ ದರ್ಶನ್, ಬಳಿಕ ಲಕ್ಷ್ಮಣ್ ಮತ್ತು ನಾಗರಾಜ್ ತಡ ರಾತ್ರಿವರೆಗೂ ಸಾಕಷ್ಟು ಮಾತುಕತೆ ನಡೆಸಿದರು. ತಡರಾತ್ರಿ ವರೆಗೂ ಮೂವರ ನಡುವೆ ಸಂಭಾಷಣೆ ಮುಂದುವರಿಯಿತು. ಆದರೆ, ಜೈಲಿನಲ್ಲಿ ನಿದ್ರೆ ಮಾಡದೇ ದರ್ಶನ್ ಗ್ಯಾಂಗ್ ಪರದಾಟ ನಡೆಸಿದೆ ಜೈಲಿನಲ್ಲಿ ನಿದ್ರೆ ಬರದೆ ಬೆನ್ನುನೋವು ಎಂದು ದರ್ಶನ್ ಸಹಚರರ ಬಳಿ ಅಳಲು ವ್ಯಕ್ತಪಡಿಸಿದ್ದಾರಂತೆ. ಇದರ ಮಧ್ಯೆ, ಪ್ರದೋಶ್ ಮಾತ್ರ ಸಂಪೂರ್ಣ ಮೌನಕ್ಕೆ ಜಾರಿ ಯಾರೊಂದಿಗೂ ಮಾತನಾಡದೆ ಕಣ್ಣೀರು ಹಾಕುತ್ತಲೇ ಇದ್ದ, ಒಂದೇ ಬ್ಯಾರಕ್‌ನಲ್ಲಿದ್ದರೂ ದರ್ಶನ್, ನಾಗರಾಜ್, ಲಕ್ಷ್ಮಣ್ ಅವರ ಜೊತೆ ಮಾತಾಡಲಿಲ್ಲ. ತಡರಾತ್ರಿ ವರೆಗೂ ಎಚ್ಚರವಾಗಿಯೇ ಇದ್ದ. ಮತ್ತೊಂದೆಡೆ, ಮಹಿಳಾ ಬ್ಯಾರಕ್‌ನಲ್ಲಿ ಪವಿತ್ರಾ ಗೌಡ ಮೌನಕ್ಕೆ ಶರಣು . ಜೈಲಿಗೆ ಮರಳಿ ಕಾಲಿಟ್ಟಾಗಿನಿಂದಲೇ ಅವರು ಕಣ್ಣೀರು ಹಾಕುತ್ತಿದ್ದು, ಯಾರೊಂದಿಗೂ ಮಾತನಾಡದ ಸ್ಥಿತಿಯಲ್ಲಿ ಇದ್ದಾರೆ. ರಾತ್ರಿ ಊಟ ಮಾಡದೆ, ಬೆಳಗಿನ ಜಾವದವರೆಗೂ ಚಡಪಡಿಸುತ್ತಿದ್ದು, ಬೆಳಗಿನ ಜಾವ ನಿದ್ರೆಗೆ ಜಾರಿದರು.
ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು, ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಅವರನ್ನು ಚಿತ್ರದುರ್ಗದಿಂದ ಕರೆತಂದು ಠಾಣೆಯಲ್ಲಿ ಇರಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ಏಳು ಮಂದಿಯ ಜಾಮೀನುಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ್ದು, ನಿನ್ನೆ ದರ್ಶನ್, ಪವಿತ್ರಾ ಗೌಡ, ಪ್ರದೋಶ್, ಲಕ್ಷ್ಮಣ್ ಮತ್ತು ನಾಗರಾಜ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಉಳಿದ ಇಬ್ಬರನ್ನು ಚಿತ್ರದುರ್ಗದಿಂದ ಕರೆತರಲು ವಿಳಂಬವಾದ ಕಾರಣ, ಅನುಕುಮಾರ್ ಮತ್ತು ಜಗದೀಶ್ ಅವರನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಪೊಲೀಸರು ಸಿದ್ಧರಾಗಿದ್ದಾರೆ. ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಇವರನ್ನು ಕರೆತಂದು ಬಳಿಕ ಪರಪ್ಪನ ಅಗ್ರಹಾರದಲ್ಲಿ ಇರಿಸಲಿದ್ದಾರೆ.


