ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದೆ. ಜಾಮೀನಿನ ಮೇಲೆ ಹೊರಗಿದ್ದ ದರ್ಶನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ ಬಂಧನವಾಗಿದೆ.
KNOW
ಬೆಂಗಳೂರು : ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದ ಪ್ರಮುಖ ಆರೋಪಿ ನಟ ದರ್ಶನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ ಬಂಧನವಾಗಿದೆ. ಇದೀಗ ಎ2 ಆರೋಪಿಯನ್ನು ಬಂಧಿಸಲು ನೈಸ್ ರೋಡ್ ಬಳಿ ಕಾದಿದ್ದರು. ಆದರೆ ದರ್ಶನ್ ಪೊಲೀಸರ ಕಣ್ಣು ತಪ್ಪಿಸಿದ್ದರು. ಟೋಲ್ ಗೇಟ್ ಬಳಿಯೇ ಜೀಪ್ ಹಾಕಿಕೊಂಡು ಪೊಲೀಸರು ಕಾಯುತ್ತಿದ್ದರು. ಆದರೆ ದರ್ಶನ್ ಪೊಲೀಸರ ಕಣ್ಣು ತಪ್ಪಿಸಿ ಹೊಸಕರೆ ಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆ ಸೇರಿದ್ದರು. ಈಗ ಪತ್ನಿ ಮನೆಯಿಂದಲೇ ಪೊಲೀಸರು ದರ್ಶನ್ ನನ್ನು ಅರೆಸ್ಟ್ ಮಾಡಿದ್ದಾರೆ. ಪ್ರಕರಣದಲ್ಲಿ ಈವರೆಗೆ ಬೆಂಗಳೂರಿನಲ್ಲಿ ಐದು ಜನರ ಬಂಧನವಾಗಿದೆ, ಮತ್ತಿಬ್ಬರ ಬಂಧನಕ್ಕೆ ಬೆಂಗಳೂರು ಪೊಲೀಸರು ಚಿತ್ರದುರ್ಗಕ್ಕೆ ತೆರಳಿದ್ದಾರೆ.
ಪ್ರಕರಣ ಸಂಬಂಧ ಈಗ ಒಬ್ಬೊಬ್ಬರಾಗಿ ಬಂಧನವಾಗಿತ್ತಿರುವ ಸಂದರ್ಭದಲ್ಲಿ ದರ್ಶನ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಈಗ ಹೊಸಕೆರೆ ಹಳ್ಳಿಯಲ್ಲಿ ಪತ್ನಿ ವಿಜಯಲಕ್ಷ್ಮಿ ನಿವಾಸಲ್ಲಿ ದರ್ಶನ್ ಪತ್ತೆಯಾಗಿದ್ದು, ಬಂಧನವಾಗಿದೆ. ಅವರ ಅತ್ಯಾಪ್ತೆ ಗೆಳತಿ ಪವಿತ್ರಾ ಗೌಡಳನ್ನು ಕೂಡ ಆರ್ ಆರ್ ನಗರದಲ್ಲಿನ ನಿವಾಸದಲ್ಲೇ ಬಂಧಿಸಲಾಗಿತ್ತು. ಆಗಸ್ಟ್ 13ರಂದು ಮೈಸೂರಿನ ಟೀ ನರಸೀಪುರದಲ್ಲಿರುವ ವಿನೀಶ್ ದರ್ಶನ್ ಫಾರಂ ಹೌಸ್ ನಲ್ಲಿ ಇದ್ದರೆಂದು ಮಾಹಿತಿ ಲಭ್ಯವಾಗಿತ್ತು. ಆದರೆ ಅಲ್ಲಿರಲಿಲ್ಲ. ತಮಿಳುನಾಡು ಹೋಗಿದ್ದಾರೆಂದು ಸುದ್ದಿಯಾಗಿತ್ತು. ಟೋಲ್ ಗಳಲ್ಲಿ ಅವರ ಕಾರು ಮತ್ತು ಜೀಪು ಓಡಾಡಿದ ಸಿಸಿಟಿವಿ ದೃಶ್ಯ ಸೆರೆಯಾಗಿತ್ತು. ಬೇಲ್ ರದ್ದಾದ ಮೇಲೆ ಪೊಲೀಸರು ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸಿದ್ದರು. ಕಾರು ಮತ್ತು ಜೀಪು ವಾಪಾಸಾಗುವಾಗ ನೈಸ್ ರಸ್ತೆ ಬಳಿ ಅವರ ಆಪ್ತರು ವಾಹನವನ್ನು ಓಡಿಸುತ್ತಿದ್ದದು ಪತ್ತೆಯಾಯ್ತು. ಹೀಗಾಗಿ ಪೊಲೀಸರ ಕಣ್ಣು ತಪ್ಪಿಸಿದ್ದ ದರ್ಶನ್ ಕೊನೆಗೂ ಬಂಧನವಾಗಿದೆ.
ಸದ್ಯ ವಿಜಯಲಕ್ಷ್ಮಿ ನಿವಾಸದಿಂದ ಬಂಧನವಾಗಿರುವ ದರ್ಶನ್ ನನ್ನು ಪೊಲೀಸರು ಅನ್ನಪೂರ್ಣೇಶ್ವರಿ ಠಾಣೆಗೆ ಕರೆತಂದಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ನಂತರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಿದ್ದಾರೆ. ಈಗಾಗಲೇ ಎ1 ಆರೋಪಿ ಪವಿತ್ರಾ ಗೌಡ ಪೊಲೀಸ್ ಠಾಣೆಯಲ್ಲಿದ್ದು, ಈಕೆಯ ಜೊತೆಗೆ ಲಕ್ಷ್ಮಣ್, ಪ್ರದೋಷ್, ನಾಗಾರಾಜ್ ಬಂಧನವಾಗಿದೆ. ಚಿತ್ರದುರ್ಗದ ಇಬ್ಬರು ಆರೋಪಿಗಳಾದ ಎ6 ಅನುಕುಮಾರ್, ಎ7 ಜಗದೀಶ್ ಅನ್ನು ವಶಕ್ಕೆ ಪಡೆಯಲು ಕಾಮಾಕ್ಷಿಪಾಳ್ಯ ಠಾಣೆ ಎಸ್ ಐ ವಿನಾಯಕ ನೇತೃತ್ವದ ಟೀಮ್ ಚಿತ್ರದುರ್ಗಕ್ಕೆ ತೆರಳಿದೆ. ಆರೋಪಿಗಳ ಮೆಡಿಕಲ್ ಚೆಕಪ್ ಮಾಡಿಸಲು ವೈದ್ಯರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ.
ತಮಿಳುನಾಡಿನಿಂದ ಬೆಂಗಳೂರಿಗೆ ವಾಪಸ್ಸು ಬರುತ್ತಿರುವ ವೇಳೆ ಮಾರ್ಗ ಮಧ್ಯೆ ನಟ ದರ್ಶನ್ ಕಾರು ಬದಲಾಯಿಸಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನೈಸ್ ರಸ್ತೆಯಲ್ಲಿ ದರ್ಶನ್‌ನ ವಾಹನಗಳು ಪತ್ತೆಯಾಗಿದ್ದು, ಫಾರ್ಚೂನರ್ ಕಾರು ಹಾಗೂ ಕೆಂಪು ಬಣ್ಣದ ಜೀಪ್ ಎರಡನ್ನೂ ಪೊಲೀಸರು ತಡೆದು ಅದರಲ್ಲಿ ಪ್ರಯಾಣಿಸುತ್ತಿದ್ದವರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು.
ಹೈಕೋರ್ಟ್ ನಿಂದ ಜಾಮೀನು ಪಡೆದ ಆರೋಪಿಗಳು ಆರಾಮವಾಗಿ ಓಡಾಡಿಕೊಂಡಿದ್ದರು. ಪ್ರಮುಖವಾಗಿ ಅನಾರೋಗ್ಯದ ಕಾರಣ ನೀಡಿ ದರ್ಶನ್ ಜಾಮೀನಿನ ಮೇಲೆ ಹೊರಬಂದಿದ್ದರು. ಬೆನ್ನು ನೋವಿದೆ ಶಸ್ತ್ರಚಿಕತ್ಸೆ ಮಾಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ಜಾಮೀನು ಪಡೆದು ಹೊರಬಂದ ಬಳಿಕ ಯಾವ ಶಸ್ತ್ರ ಚಿಕಿತ್ಸೆ ಕೂಡ ಮಾಡಿಸದೆ ಆರಾಮವಾಗಿದ್ದ ದರ್ಶನ್ ಗೆ ಈಗ ಮತ್ತೆ ಕಂಟಕ ಎದುರಾಗಿದೆ. ಹೈಕೋರ್ಟ್ ಕೊಲೆ ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಜಾಮೀನು ರದ್ದು ಮಾಡಿದೆ.
