ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಸಾಕ್ಷಿಗಳ ವಿಚಾರಣೆ ಕುರಿತು ದರ್ಶನ್ ಪರ ವಕೀಲರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ರೇಣುಕಾಸ್ವಾಮಿ ಪೋಷಕರಿಗೆ ಸಮನ್ಸ್ ಜಾರಿ ಮಾಡಿದೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಬುಧವಾರ ವಿಚಾರಣೆ ವೇಳೆ ಆರೋಪಿ ಲಕ್ಷ್ಮಣ್, ಜೈಲಲ್ಲಿ ಕಾಲ ಕಳೆಯಲು ಕಷ್ಟವಾಗುತ್ತಿದೆ. ಕೋಣೆಗೆ ಟಿ.ವಿ.ಸೌಲಭ್ಯ ಕಲ್ಪಿಸುವಂತೆ ಎಲ್ಲರ ಪರವಾಗಿ ಮನವಿ ಮಾಡುತ್ತಿರುವುದಾಗಿ ಹೇಳಿದರು. ಇದನ್ನು ಆಲಿಸಿದ ಜಡ್ಜ್, ಈ ಮನವಿ ಕುರಿತು ಆದೇಶ ಹೊರಡಿಸಲಾಗುವುದು ಎಂದರು. ನಟ ದರ್ಶನ್ ಕೂಡಾ ಲಕ್ಷ್ಮಣ್ ಜೊತೆ ಕೊಠಡಿ ಹಂಚಿಕೊಂಡಿರುವ ಕಾರಣ ಟಿವಿ ಸಿಗಬಹುದು ಎಂದು ಹೇಳಲಾಗಿತ್ತು. ಆದರೆ ಇದೀಗ ದರ್ಶನ್ ಬ್ಯಾರಕ್ ನಲ್ಲಿ ಟಿವಿ ಅಳವಡಿಸಲು ಜೈಲಾಧಿಕಾರಿಗಳಿಗೆ ಸೂಚನೆ ನೀಡುವುದರ ಜೊತೆಗೆ ಟಿವಿ ಅಳವಡಿಕೆ ಮಾಡುವ ಸ್ಥಳದಲ್ಲಿ ಸಿಸಿಟಿವಿ ಕೂಡ ಅಳವಡಿಸುವಂತೆ ಆದೇಶ ಹೊರಡಿಸಲಾಗಿದೆ. ಲಕ್ಷ್ಮಣ್, ದರ್ಶನ್ ಹಾಗೂ ಪ್ರಕರಣದ ಇತರೆ ಆರೋಪಿಗಳು ಒಂದೇ ಕೋಣೆಯಲ್ಲಿದ್ದಾರೆ.
ರೇಣುಕಾಸ್ವಾಮಿ ಪೋಷಕರಿಗೆ ಸಮನ್ಸ್ ಜಾರಿ
ಕೊಲೆಗೀಡಾಗಿರುವ ರೇಣುಕಾಸ್ವಾಮಿ ಅವರ ತಂದೆ ಹಾಗೂ ತಾಯಿ (ಸಾಕ್ಷಿ ಸಂಖ್ಯೆ 7-8) ಅವರು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಿ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು ಸಲ್ಲಿಸಿರುವ ಅರ್ಜಿ ಯನ್ನು 57 ನೇ ಸಿಸಿಹೆಚ್ ಕೋರ್ಟ್ ಪುರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ CW -7, CW-8, ಅಂದರೆ ರೇಣುಕಾ ಸ್ವಾಮಿ ತಂದೆ ತಾಯಿಗೆ ಸಮನ್ಸ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದ್ದು, ದರ್ಶನ್ ಪರ ವಕೀಲ ಸುನೀಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 17 ರಂದು ರೇಣುಕಾಸ್ವಾಮಿ ತಂದೆ ತಾಯಿ ಕೋರ್ಟ್ ಗೆ ಹಾಜರಾಗಬೇಕಿದೆ.
ವಿಚಾರಣೆ ವೇಳೆ ಪ್ರಕರಣದ ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಹಾಯಕ ವಿಶೇಷ ಸರ್ಕಾರಿ ಅಭಿಯೋಜಕ ಸಚಿನ್, ಪ್ರಮುಖ ಸಾಕ್ಷಿಗಳಾಗಿರುವ ಮೃತ ರೇಣುಕಾಸ್ವಾಮಿಯ ತಂದೆ-ತಾಯಿಯನ್ನು ಪಾಟಿ ಸವಾಲಿಗೆ ಒಳಪಡಿಸಬೇಕಿದೆ. ಹಾಗಾಗಿ, ವಿಚಾರಣೆಗೆ ಹಾಜರಾಗಲು ಅವರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಿದರು. ಈ ಮನವಿಯನ್ನು ಪವಿತ್ರಾಗೌಡ, ದರ್ಶನ್ ಹಾಗೂ ಇತರೆ ಆರೋಪಿಗಳ ಪರ ವಕೀಲರು ತೀವ್ರವಾಗಿ ಆಕ್ಷೇಪಿಸಿದ್ದರು.
ದರ್ಶನ್ ಪರ ವಕೀಲರ ಮನವಿ ತಿರಸ್ಕಾರ
ಇನ್ನು ಸಾಕ್ಷಿದಾರರನ್ನ ಆರ್ಡರ್ ವೈಸ್ ಕರೆಸುವಂತೆ ಮನವಿ ಮಾಡಿ, ಪ್ರಾಸಿಕ್ಯೂಷನ್ ಪಿಕ್ ಅಂಡ್ ಚೂಸ್ ಮಾಡಬಾರದು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. ಜೊತೆಗೆ ಮೊದಲು ಪ್ರತ್ಯಕ್ಷದರ್ಶಿ ಸಾಕ್ಷಿಗಳಿಗೆ ಸಮನ್ ಮಾಡುವಂತೆ ದರ್ಶನ್ ಪರ ವಕೀಲ ಮತ್ತು ಆರೋಪಿಗಳ ಪರ ವಕೀಲರು ಮನವಿ ಮಾಡಿದ್ದರು. ಇದನ್ನು ಕೂಡ ಕೋರ್ಟ್ ತಿರಸ್ಕರಿಸಿ ಪ್ರಾಸಿಕ್ಯೂಷನ್ ಆಯ್ಕೆಯಂತೆ ಸಮನ್ಸ್ ನೀಡಿದೆ.
ಬುಧವಾರ ನಡೆದ ವಿಚಾರಣೆಯಲ್ಲಿ ಪ್ರಕರಣದಲ್ಲಿ ಪಟ್ಟಿ ಮಾಡಿರುವ ಸಾಕ್ಷಿಗಳ ಪೈಕಿ, ತಾವು ಬಯಸಿದ ಸಂದರ್ಭದಲ್ಲಿ ಸಾಕ್ಷಿಗಳನ್ನು ಆಯ್ಕೆ ಮಾಡಿಕೊಂಡು (ಪಿಕ್ ಆ್ಯಂಡ್ ಚೂಸ್) ವಿಚಾರಣೆ ನಡೆಸುವುದಕ್ಕೆ ಪ್ರಾಸಿಕ್ಯೂಷನ್‌ಗೆ (ತನಿಖಾಧಿಕಾರಿಗಳು) ಅವಕಾಶವಿಲ್ಲ. ಮೊದಲು ದೂರುದಾರ ಹಾಗೂ ಘಟನೆಯ ಪ್ರತ್ಯಕ್ಷ ದರ್ಶಿಗಳಿಗೆ ಸಮನ್ಸ್ ನೀಡಿ, ಅವರ ಸಾಕ್ಷ್ಯ ದಾಖಲಿಸಿಕೊಳ್ಳಬೇಕು. ನಂತರ ಪ್ರಾಸಿಕ್ಯೂಷನ್ ಸಿದ್ಧಪಡಿಸಿರುವ ಪಟ್ಟಿಯ ಅನುಕ್ರಮದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಸರದಿ ಪ್ರಕಾರವೇ ಸಾಕ್ಷಿಗಳಿಗೆ ಸಮನ್ಸ್ ಮಾಡಬೇಕು. ಹಾಗೆಯೇ, ಯಾವ ಸಮಯದಲ್ಲಿ; ಯಾವ ಸಾಕ್ಷಿಯನ್ನು ವಿಚಾರಣೆಗೆ ಕರೆಸಬೇಕು? ಯಾವ ಸಾಕ್ಷಿಯ ಹೇಳಿಕೆ ದಾಖಲಿಸಿಕೊಳ್ಳಬೇಕು ಎಂಬುದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿರುತ್ತದೆ. ಅದನ್ನು ಪ್ರಾಸಿಕ್ಯೂಷನ್ ನಿರ್ಧರಿಸಲಾಗದು ಎಂದು ಆರೋಪಿಗಳ ಪರ ವಕೀಲರು ಆಕ್ಷೇಪಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಾಕ್ಷಿಗಳ ಪಾಟಿಸವಾಲು ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿಯಲು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಲು ಸ್ವತಂತ್ರರಿದ್ದಾರೆ. ಇನ್ನೂ ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಬೇಕೆಂಬ ಪ್ರಾಸಿಕ್ಯೂಷನ್ ಮನವಿ ಕುರಿತು ಗುರುವಾರ ತೀರ್ಮಾನ ತಿಳಿಸುವುದಾಗಿ ಹೇಳಿದ್ದರು. ಅದರಂತೆ ಇಂದು ದರ್ಶನ್ ಪರ ವಕೀಲರ ಮನವಿ ತಿರಸ್ಕಾರವಾಗಿದೆ.


