ಗದಗ ತಾಲೂಕಿನ ಲಕ್ಕುಂಡಿ ಉತ್ಖನನದ ನಿರ್ದೇಶಕರಾಗಿದ್ದ, ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಟಿ.ಎಂ. ಕೇಶವ್ (74) ಅವರು ನಿಧನರಾಗಿದ್ದಾರೆ. ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ತಮ್ಮ ನಿವಾಸದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಗದಗ (ಜ.30): ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಪುರಾತತ್ವ ಉತ್ಖನನದ ನಿರ್ದೇಶಕರಾಗಿದ್ದ, ಭಾರತೀಯ ಪುರಾತತ್ವ ಇಲಾಖೆಯ ನಿವೃತ್ತ ಅಧೀಕ್ಷಕ ಟಿ.ಎಂ. ಕೇಶವ್ (74) ಅವರು ಇಂದು ನಿಧನರಾಗಿದ್ದಾರೆ. ಹಿರಿಯ ಸಂಶೋಧಕರ ಅಗಲಿಕೆಯಿಂದ ಪುರಾತತ್ವ ಇಲಾಖೆಗೆ ತುಂಬಲಾರದ ನಷ್ಟ ಉಂಟಾಗಿದೆ.
ಕ್ಯಾನ್ಸರ್ ಕಾಯಿಲೆಯಿಂದ ಕೊನೆಯುಸಿರು
ಕಳೆದ ಕೆಲವು ದಿನಗಳಿಂದ ಕರುಳು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕೇಶವ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಂಗಳೂರಿನ ತಮ್ಮ ಸ್ವನಿವಾಸದಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶರಣುಗೋಗೇರಿ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
ಉತ್ಖನನಕ್ಕೆ ಚಾಲನೆ ನೀಡಿದ್ದ ಕೇಶವ್
2025ರ ಜೂನ್ ತಿಂಗಳಲ್ಲಿ ಲಕ್ಕುಂಡಿಯ ಐತಿಹಾಸಿಕ ತಾಣಗಳ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಟಿ.ಎಂ. ಕೇಶವ್ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ಲಕ್ಕುಂಡಿಯ ವೈಭವವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಅವರ ಪಾತ್ರ ದೊಡ್ಡದಾಗಿತ್ತು. ಈ ಕಾರ್ಯ ಪ್ರಗತಿಯಲ್ಲಿರುವಾಗಲೇ ಅವರ ಅಗಲಿಕೆ ನೋವು ತಂದಿದೆ.
ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅಧೀಕ್ಷಕರು
ಉತ್ಖನನ ಕಾರ್ಯ ಆರಂಭವಾದ ಕೆಲವೇ ದಿನಗಳಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕೇಶವ್ ಅವರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಯೋಸಹಜ ಕಾಯಿಲೆ ಹಾಗೂ ಕ್ಯಾನ್ಸರ್ ಉಲ್ಬಣಗೊಂಡ ಹಿನ್ನೆಲೆ ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.


