ಗದಗ ಜಿಲ್ಲೆಯ ದೇವಸ್ಥಾನದಲ್ಲಿ ರಾತ್ರಿ ವೇಳೆ ನಿಗೂಢ ಗೆಜ್ಜೆ ಶಬ್ಧ ಕೇಳಿಬರುತ್ತಿದೆ. ದುರ್ಗಮ್ಮ ದೇವಸ್ಥಾನದಲ್ಲಿ ಬೆಂಕಿ ಅವಘಡದ ನಂತರ ದೇವಿಯರ ಮೂರ್ತಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದ್ದು, ಅಂದಿನಿಂದ ಈ ಶಬ್ಧ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾತ್ರೆ ನಡೆಸಲು ತೀರ್ಮಾನಿಸಿದ್ದಾರೆ.
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಕೇಳಿಬರುತ್ತಿರುವ ವಿಸ್ಮಯಕಾರಿ ಮತ್ತು ನಿಗೂಢ ಗೆಜ್ಜೆ ಶಬ್ಧದ ಹಿನ್ನೆಲೆ ಅಲ್ಲಿನ ಜನ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. ಗ್ರಾಮದ ಆಂಜನೇಯ (ಮಾರುತಿ) ದೇವಸ್ಥಾನದಿಂದ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಗೆಜ್ಜೆ ನಾದ ಕೇಳಿ ಬರುತ್ತಿದ್ದು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಈ ನಿಗೂಢ ಧ್ವನಿ ಕೇಳಿಸುತ್ತಿರುವುದು ಗ್ರಾಮದಲ್ಲಿ ಭಯ ಮತ್ತು ಅಚ್ಚರಿಯನ್ನು ಹುಟ್ಟಿಸಿತ್ತು. ಹೀಗಾಗಿ ಗ್ರಾಮಸ್ಥರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಜಾತ್ರೆ ಮಾಡಲು ತೀರ್ಮಾನ ತೆಗೆದುಕೊಂಡಿದ್ದಾರೆ.
ಅಮವಾಸ್ಯೆಯಂದು ಬೆಂಕಿ ಅವಘಡ
ಕಳೆದ ಅಮವಾಸ್ಯೆಯಂದು ಕೊರ್ಲಹಳ್ಳಿ ಗ್ರಾಮದ ದುರ್ಗಮ್ಮ (ದುರ್ಗಾದೇವಿ) ದೇವಸ್ಥಾನದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ದುರ್ಗಮ್ಮ ಹಾಗೂ ಮಾಯಮ್ಮ ದೇವಿಯರ ಮೂರ್ತಿಗಳಿಗೆ ಬೆಂಕಿ ತಗುಲಿ ವಿರೂಪಗೊಂಡಿದ್ದವು. ಬೆಂಕಿ ಅವಘಡದ ನಂತರ, ಸುರಕ್ಷತೆ ಹಾಗೂ ಪೂಜಾ ಕ್ರಮ ಮುಂದುವರಿಸುವ ಉದ್ದೇಶದಿಂದ ಗ್ರಾಮಸ್ಥರು ಈ ದೇವಿಯರ ಮೂರ್ತಿಗಳನ್ನು ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಸ್ಥಳಾಂತರಿಸಿದ್ದರು. ಆದರೆ ಪೂಜೆ ಮಾಡುವುದನ್ನು ನಿಲ್ಲಿಸಿದ್ದರು.
ಗೆಜ್ಜೆ ನಾದ ಆರಂಭ ಯಾವಾಗ
ಯಾವಗ ದೇವಿಯರ ಮೂರ್ತಿಗಳನ್ನು ಆಂಜನೇಯ ದೇವಸ್ಥಾನಕ್ಕೆ ಸ್ಥಳಾಂತರಿಸಿದರೂ ಅಲ್ಲಿಂದಲೇ, ದೇವಸ್ಥಾನ ಆವರಣದಿಂದ ಗೆಜ್ಜೆ ಸದ್ದು ಕೇಳಿ ಬರುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ವಿಶೇಷವಾಗಿ ಮಾಯಮ್ಮ ಮತ್ತು ದುರ್ಗಮ್ಮ ದೇವಿಯರ ಮೂರ್ತಿಗಳನ್ನು ಇಟ್ಟಿರುವ ಜಾಗದ ಬಳಿಯೇ ಈ ನಾದ ಸ್ಪಷ್ಟವಾಗಿ ಕೇಳಿಸುತ್ತಿದೆ ಎಂಬುದು ಅವರ ನಂಬಿಕೆ. ಬೆಂಕಿ ಅವಘಡದ ನಂತರ ದೇವಿಯರಿಗೆ ನಿಯಮಿತ ಪೂಜೆ–ಪುನಸ್ಕಾರ ನಡೆಯದೆ ಇರುವುದೇ ಈ ನಿಗೂಢ ನಾದಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗುತ್ತಿದೆ.
ದೇವಿಯರ ಸಂಚಾರ ಎಂಬ ನಂಬಿಕೆ
ಇನ್ನು ಕೆಲ ಗ್ರಾಮಸ್ಥರು, “ಸ್ವತಃ ದುರ್ಗಾಮಾತೆ ಮತ್ತು ಮಾಯಮ್ಮ ದೇವಿಯರೇ ಸಂಚರಿಸುತ್ತಿರಬಹುದು. ಅದಕ್ಕೇ ಗೆಜ್ಜೆ ನಾದ ಕೇಳಿಸುತ್ತಿದೆ” ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ. ಈ ವಿಸ್ಮಯಕಾರಿ ಘಟನೆ ಸುದ್ದಿ ಹರಡುತ್ತಿದ್ದಂತೆ, ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಜನರು ಈ ನಿಗೂಢ ಗೆಜ್ಜೆ ಸದ್ದನ್ನು ಕೇಳಲು ಕೊರ್ಲಹಳ್ಳಿ ಗ್ರಾಮಕ್ಕೆ ತಂಡೋಪ ತಂಡವಾಗಿ ಬರುತ್ತಿದ್ದಾರೆ.
ರಾತ್ರಿ ಹೊತ್ತು ಹೆಚ್ಚಾಗುವ ನಿಗೂಢ ಧ್ವನಿ
ಗ್ರಾಮಸ್ಥರ ಹೇಳಿಕೆಯಂತೆ, ಹಗಲಿಗಿಂತಲೂ ರಾತ್ರಿ ಹೊತ್ತು ಗೆಜ್ಜೆ ನಾದ ಹೆಚ್ಚು ಸ್ಪಷ್ಟವಾಗಿ ಕೇಳಿಸುತ್ತಿದ್ದು, ಇದರಿಂದ ಹಲವರು ಭಯಭೀತರಾಗಿದ್ದಾರೆ. ದೇವಸ್ಥಾನದ ಒಳಗಿಂದಲೇ ಧ್ವನಿ ಬರುತ್ತಿರುವುದರಿಂದ, ಇದನ್ನು ಸಾಮಾನ್ಯ ಶಬ್ದ ಎಂದು ನಿರ್ಲಕ್ಷ್ಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಫೆಬ್ರವರಿ 2ರಂದು ಜಾತ್ರೆ ನಡೆಸಲು ತೀರ್ಮಾನ
ಈ ನಿಗೂಢ ಘಟನೆಯ ನಡುವೆ, ಮಾಯಮ್ಮ ಹಾಗೂ ದುರ್ಗಮ್ಮ ದೇವಿಯರ ವಿರೂಪಗೊಂಡ ಮೂರ್ತಿಗಳಿಗೆ ಮರುಬಣ್ಣ ಹಚ್ಚಿ, ಫೆಬ್ರವರಿ 2ರಂದು ಜಾತ್ರೆ ಮತ್ತು ವಿಶೇಷ ಪೂಜೆ–ಪುನಸ್ಕಾರ ನಡೆಸಲು ಗ್ರಾಮಸ್ಥರು ಒಟ್ಟಾಗಿ ತೀರ್ಮಾನಿಸಿದ್ದಾರೆ. ದೇವಿಯರ ಪೂಜೆ ಪುನಃ ಆರಂಭವಾದ ಬಳಿಕ ಈ ನಿಗೂಢ ಗೆಜ್ಜೆ ನಾದ ನಿಲ್ಲಬಹುದು ಎಂಬ ಆಶಾಭಾವನೆಯೂ ಗ್ರಾಮಸ್ಥರಲ್ಲಿ ಮೂಡಿದೆ. ಒಟ್ಟಾರೆ, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿನ ಆಂಜನೇಯ ದೇವಸ್ಥಾನದಿಂದ ಕೇಳಿ ಬರುತ್ತಿರುವ ಈ ನಿಗೂಢ ಗೆಜ್ಜೆ ನಾದ ಗ್ರಾಮಸ್ಥರಲ್ಲಿ ಆತಂಕ, ಭಕ್ತಿ ಮತ್ತು ಕುತೂಹಲ ಉಂಟುಮಾಡಿದ್ದು, ಈ ವಿಸ್ಮಯಕಾರಿ ಘಟನೆ ಎಲ್ಲರ ಗಮನ ಸೆಳೆದಿದೆ.


