ಗದಗಿನ ಐತಿಹಾಸಿಕ ಕೋಟೆಯ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯ ನಡೆಯುತ್ತಿದ್ದಾಗ ದೈತ್ಯಾಕಾರದ ಸರ್ಪವೊಂದು ಪ್ರತ್ಯಕ್ಷವಾಗಿದೆ. ತಲೆಯ ಮೇಲೆ ಕೂದಲು ಇದೆ ಎನ್ನಲಾದ ಈ ಸರ್ಪವು, ದೇವಸ್ಥಾನದ ಆವರಣದಲ್ಲಿ ಅಡಗಿರುವ ನಿಧಿಯನ್ನು ಕಾಯುತ್ತಿದೆ ಎಂಬ ಚರ್ಚೆ ಸ್ಥಳೀಯರಲ್ಲಿ ಆರಂಭವಾಗಿದೆ.

ಗದಗ (ಜ.30): ಗದಗ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ದೈತ್ಯಾಕಾರದ ಸರ್ಪ ಪ್ರತ್ಯಕ್ಷವಾಗಿದ್ದು, ಇಡೀ ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಸ್ಥಳೀಯರ ಪ್ರಕಾರ, ಈ ಹಾವು ಬರೋಬ್ಬರಿ ಎರಡು ಮಾರಿನಷ್ಟು ಉದ್ದವಿದೆಯಂತೆ! ಇದನ್ನು ಕಂಡವರು ಭಯದಿಂದ ಮೂತ್ರ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಸರ್ಪದ ದರ್ಶನ ಕೇವಲ ಭಯವನ್ನಷ್ಟೇ ಅಲ್ಲದೆ, ಭಕ್ತರಲ್ಲಿ ಅಚ್ಚರಿಯನ್ನೂ ಮೂಡಿಸಿದೆ.

ಉತ್ಖನನ ವೇಳೆ ಹೆಡೆ ಎತ್ತಿದ 'ಜಟಾಧಾರಿ' ಸರ್ಪ?

ಇತ್ತೀಚೆಗೆ ದೇವಸ್ಥಾನದ ಬಳಿ ಉತ್ಖನನ ಕಾರ್ಯ ನಡೆಯುತ್ತಿದ್ದಾಗ ಈ ಭಯಾನಕ ಸರ್ಪ ಪ್ರತ್ಯಕ್ಷವಾಗಿತ್ತಂತೆ. ಕೆಲಸ ಮಾಡುತ್ತಿದ್ದ ಕಾರ್ಮಿಕರ ಎದುರೇ ಹೆಡೆ ಎತ್ತಿ ಬುಸುಗುಟ್ಟುತ್ತಿದ್ದಂತೆ, ಕಾರ್ಮಿಕರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ವಿಶೇಷವೆಂದರೆ, ಈ ಹಾವಿಗೆ ತಲೆಯ ಮೇಲೆ ಕೂದಲು ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಆದರೆ ಇದು ಕಪ್ಪು ಬಣ್ಣದ ನಾಗರಹಾವಾಗಿದ್ದರಿಂದ ನೋಡುಗರಿಗೆ ಹಾಗೆ ಕಂಡಿರಬಹುದು ಎಂದು ಹೇಳಲಾಗುತ್ತಿದೆ.

ನಿಧಿಯ ಕಾವಲುಗಾರನೇ ಈ ನಾಗರಾಜ?

ಇಲ್ಲಿ ಹಳೆಯ ಕಾಲದ ಹಾವು ಇದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಎನ್ನುತ್ತಾರೆ ದೇವಸ್ಥಾನದ ಭಕ್ತ ಅಶೋಕ್ ಬೂದಿಹಾಳ. ಹಳ್ಳಿಗರಲ್ಲಿ ಒಂದು ಗಾಢವಾದ ನಂಬಿಕೆಯಿದೆ - ಎಲ್ಲಿ ಪುರಾತನ ಕಾಲದ ಸರ್ಪಗಳಿರುತ್ತವೆಯೋ ಅಲ್ಲಿ ಅಗಾಧವಾದ ನಿಧಿ ಅಡಗಿರುತ್ತದೆ ಎಂಬುದು. ಹೀಗಾಗಿ, ದೇವಸ್ಥಾನದ ಆವರಣದಲ್ಲಿ ಅಡಗಿರುವ ನಿಧಿಯನ್ನು ಕಾಯಲು ಈ ಸರ್ಪ ಪ್ರತ್ಯಕ್ಷವಾಗಿದೆಯೇ ಎಂಬ ಚರ್ಚೆಗಳು ಈಗ ಜೋರಾಗಿವೆ.

ಬಾವಿಯಿಂದ ಬಂದಿತೇ ಮಿಸ್ಟರಿ ಹಾವು?

ಬೆಳ್ಳಂಬೆಳಗ್ಗೆ ದೇವಸ್ಥಾನದ ಬಳಿ ಕಾಣಿಸಿಕೊಂಡ ಈ ಸರ್ಪವು ಪಕ್ಕದಲ್ಲೇ ಇರುವ ಹಳೆಯ ಬಾವಿಯಿಂದ ಬಂದಿರಬಹುದು ಎಂಬ ಅಂದಾಜೂ ಇದೆ. ಆದರೆ, ಭಕ್ತ ಅಶೋಕ್ ಅವರು ಹೇಳುವಂತೆ, 'ನಾನು ಪೂಜೆಗೆ ಬಂದಾಗ ಅಲ್ಲಿ ಯಾವುದೇ ಹಾವು ಇರಲಿಲ್ಲ, ಆದರೆ ಜನರ ನಡುವೆ ಇಂತಹ ಸುದ್ದಿಗಳು ಹರಿದಾಡುತ್ತಿವೆ' ಎಂದರು. ಒಟ್ಟಿನಲ್ಲಿ ಈ ಸರ್ಪದ ಇರುವಿಕೆ ಈಗ ಭಕ್ತಿ ಮತ್ತು ಭಯದ ನಡುವಿನ ರೋಚಕ ಕಥೆಯಾಗಿ ಮಾರ್ಪಟ್ಟಿದೆ.