ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಜು.27): ಕಳೆದ 150 ದಿನಗಳಿಂದ ಕೊರೋನಾ ಸೋಂಕಿನ ವಿರುದ್ಧ ನಿರಂತರವಾಗಿ ಹಗಲಿರುಳು ಹೋರಾಡುತ್ತಾ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗಿರುವ ಬಿಬಿಎಂಪಿ ಅಧಿಕಾರಿ ಹಾಗೂ ಸಿಬ್ಬಂದಿ ಒತ್ತಡದಿಂದ ಮುಕ್ತರಾಗಲು ರಜೆ ನೀಡಿಕೆ, ಪುರಸ್ಕಾರ, ಕೌನ್ಸೆಲಿಂಗ್‌ ಮುಂತಾದವುಗಳ ಮೂಲಕ ಉತ್ಸಾಹ, ಚೈತನ್ಯ ತುಂಬಿಸುವಂತಹ ಕಾರ್ಯಕ್ರಮ ರೂಪಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ರಾಜಧಾನಿಯಲ್ಲಿ ಮೊದಲ ಕೊರೋನಾ ಸೋಂಕು ಕಾಣಿಸಿಕೊಂಡ ಮಾ.9ರಿಂದ ನಿಧಾನವಾಗಿ ಶುರುವಾದ ಈ ಹೋರಾಟಕ್ಕೆ ಈಗ 150 ದಿನ ತುಂಬಿದೆ. ಇಷ್ಟು ದಿನಗಳ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 45 ಸಾವಿರಕ್ಕೆ ಏರಿಕೆಯಾಗಿದೆ. ಸೋಂಕಿಗೆ 860ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ಗರ್ಭಿಣಿ, 50 ವರ್ಷ ಮೇಲ್ಪಟ್ಟ ಪೌರ ಕಾರ್ಮಿಕರಿಗೆ ವೇತನ ಸಹಿತ ರಜೆ

ಆರಂಭದಿಂದ ಈವರೆಗೆ ಬಿಬಿಎಂಪಿ ಆರೋಗ್ಯ, ಕಂದಾಯ, ಘನತ್ಯಾಜ್ಯ ಶಿಕ್ಷಣ ಸೇರಿದಂತೆ ಎಲ್ಲ ವಿಭಾಗದ ಅಧಿಕಾರಿ ಸಿಬ್ಬಂದಿ ಕಂಟೈನ್ಮೆಂಟ್‌ ಪ್ರದೇಶ ನಿರ್ಮಾಣ, ಸೋಂಕಿತರಿಗೆ ಚಿಕಿತ್ಸೆ, ಸಂಪರ್ಕಿತರ ಪತ್ತೆ, ಆರೋಗ್ಯ ಸಮೀಕ್ಷೆ, ಸೋಂಕು ನಿವಾರಕ ಸಿಂಪಡಣೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಪಾಲಿಕೆ ಅಧಿಕಾರಿ ಹಾಗೂ ಸಿಬ್ಬಂದಿಗೆ ರಜೆಯೂ ಸಿಗುತ್ತಿಲ್ಲ. ಸೋಂಕು ನಿಯಂತ್ರಣಕ್ಕೆ ಬಾರದೇ ಹೆಚ್ಚಾಗುತ್ತಿರುವುದರಿಂದ ಅಧಿಕಾರಿಗಳು ದೈಹಿಕ ಶ್ರಮದ ಜೊತೆಗೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಮಧ್ಯೆ ಸೋಂಕಿನ ಭೀತಿ ಸಹ ಅಧಿಕಾರಿ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರು ಎದುರಿಸುತ್ತಿದ್ದಾರೆ. ಸೋಂಕಿನ ಭೀತಿಯಿಂದ ಅನೇಕ ಅಧಿಕಾರಿ ಸಿಬ್ಬಂದಿ ಕುಟುಂಬ ಸದಸ್ಯರಿಂದ ದೂರವಿದ್ದು ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಎಲ್ಲದರ ಬಗ್ಗೆ ಬಿಬಿಎಂಪಿಯ ಅನೇಕ ಅಧಿಕಾರಿ- ಸಿಬ್ಬಂದಿ ಹಿರಿಯ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ, ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ನಗರದಲ್ಲಿ ಕೊರೋನಾ ನಿಯಂತ್ರಣ ಕಾರ್ಯ ಚಟುವಟಿಕೆಗಳಿಗೆ ತೊಂದರೆ ಉಂಟಾಗದಂತೆ ‘ರಿಫ್ರೆಶ್‌ಮೆಂಟ್‌ಗೆ ಕಾರ್ಯಕ್ರಮ’ ರೂಪಿಸುವುದಕ್ಕೆ ಮುಂದಾಗಿದ್ದಾರೆ.

1. ರಜೆ ನೀಡುವುದು

ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಪಾಲಿಕೆಯ ಅನೇಕ ಅಧಿಕಾರಿ, ಸಿಬ್ಬಂದಿಗೆ ರಜೆಯ ನೀಡದೇ ನಿರಂತರವಾಗಿ ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ, ಅಧಿಕಾರಿ ಸಿಬ್ಬಂದಿಗಳಿಗೆ ಹಂತ ಹಂತವಾಗಿ ಅಥವಾ ಪಾಳಿಯ ಪ್ರಕಾರ ರಜೆ ನೀಡಲು ಚಿಂತನೆ ಮಾಡಲಾಗಿದೆ. ಇದರಿಂದ ಅವರು ಕುಂಬ ಸದಸ್ಯರೊಂದಿಗೆ ಕಾಲ ಕಳೆಯುವುದರಿಂದ ಅವರ ಮಾನಸಿಕ ಮತ್ತು ದೈಹಿಕ ಒತ್ತಡ ನಿವಾರಣೆ ಆಗಲಿದೆ ಎಂಬ ವಿಶ್ವಾಸ ಪಾಲಿಕೆಯದ್ದಾಗಿದೆ.

2. ಪ್ರೋತ್ಸಾಹ, ಮನ್ನಣೆ

ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡು ಉತ್ತಮ ಕೆಲಸ ಮಾಡಿದ ಅಧಿಕಾರಿಗಳನ್ನು ಗುರುತಿಸಿ ಪ್ರೋತ್ಸಾಹ ಮತ್ತು ಮನ್ನಣೆ ನೀಡಲು ಭತ್ಯೆ, ಸನ್ಮಾನ, ಪುರಸ್ಕಾರ ನೀಡುವುದು.

3. ತಜ್ಞರಿಂದ ಸಲಹೆ

ಅಧಿಕಾರಿ, ಸಿಬ್ಬಂದಿಯನ್ನು ಸಣ್ಣ ತಂಡಗಳಾಗಿ ರೂಪಿಸಿ, ತಜ್ಞ ವೈದ್ಯರಿಂದ ಆತ್ಮವಿಶ್ವಾಸ ಹೆಚ್ಚಿಸುವ ಜೊತೆಗೆ ಕೌನ್ಸೆಲಿಂಗ್‌ ವ್ಯವಸ್ಥೆ ಮಾಡುವುದು.

4. ವೈಯಕ್ತಿಕ ಸಮಸ್ಯೆ ಪರಿಹಾರ

ನಿರಂತರವಾಗಿ ಬಿಬಿಎಂಪಿಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಕುಟುಂಬದ ಮತ್ತು ವೈಯಕ್ತಿಕ ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ. ಆ ಸಮಸ್ಯೆಗಳನ್ನು ಪರಿಹರಿಸುವ ವ್ಯವಸ್ಥೆ ಮಾಡಲು ಪ್ರಯತ್ನಿಸುವುದು.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು, ಸ್ವತಃ ನಾನು ಸಹ ಒತ್ತಡಕ್ಕೆ ಒಳಗಾಗಿದ್ದಾನೆ. ಸರಿಯಾಗಿ ಊಟ, ನಿದ್ದೆ ಸಹ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅಧಿಕಾರಿ, ಸಿಬ್ಬಂದಿ ಅನುಭವಿಸುತ್ತಿರುವ ಮಾನಸಿಕ ಮತ್ತು ದೈಹಿಕ ಒತ್ತಡ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.