ಪ್ರತಿ ವರ್ಷ ಮಕರ ಸಂಕ್ರಮಣ ದಿನದಂದು ಮುಜರಾಯಿ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲ ದೇಗುಲಗಳಲ್ಲಿ ಭಕ್ತರಿಗೆ ಕನಿಷ್ಠ 50 ಗ್ರಾಂ. ಎಳ್ಳು-ಬೆಲ್ಲ ಕೊಬ್ಬರಿ ಮಿಶ್ರಣ ಪ್ರಸಾದ ನೀಡುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರು : ಪ್ರತಿ ವರ್ಷ ಮಕರ ಸಂಕ್ರಮಣ ದಿನದಂದು ಮುಜರಾಯಿ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲ ದೇಗುಲಗಳಲ್ಲಿ ಭಕ್ತರಿಗೆ ಕನಿಷ್ಠ 50 ಗ್ರಾಂ. ಎಳ್ಳು-ಬೆಲ್ಲ ಕೊಬ್ಬರಿ ಮಿಶ್ರಣ ಪ್ರಸಾದ ನೀಡುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಸಂಕ್ರಾಂತಿಯ ಸಾಂಪ್ರದಾಯಿಕ ಆಚರಣೆಗಳನ್ನು ಆಚರಿಸದ ಕಾರಣ ಅವು ಮರೆಯಾಗುತ್ತಿರುವುದು ಕಂಡುಬರುತ್ತಿದೆ. ಹೀಗಾಗಿ ಪ್ರತಿ ಹಿಂದೂಗಳು ಹಬ್ಬ ಹರಿದಿನಗಳನ್ನು ಆಚರಿಸಲು ಹಾಗೂ ಹಿಂದೂ ಸಂಸ್ಕೃತಿ ಉಳಿಸಿ, ಬೆಳೆಸಿ ಮುನ್ನಡೆಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನೈವೇದ್ಯ ಮಾಡಿ ವಿತರಣೆ:
ಎಳ್ಳು-ಬೆಲ್ಲವನ್ನು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ನೀಡಬೇಕು. ಸರ್ಕಾರದ ಲಾಂಛನ ಮತ್ತು ದೇವಾಲಯದ ಹೆಸರನ್ನು ಮುದ್ರಿಸಿರುವ ಲಕೋಟೆಯಲ್ಲಿ ಭಕ್ತರಿಗೆ ಕನಿಷ್ಠ 50 ಗ್ರಾಂ. ಎಳ್ಳು, ಬೆಲ್ಲ, ಕೊಬ್ಬರಿ ಮಿಶ್ರಣ ಪ್ರಸಾದ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ನಿಯಮಾನುಸಾರ ಭರಿಸಬೇಕು
ಅದಕ್ಕೆ ತಗಲುವ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ನಿಯಮಾನುಸಾರ ಭರಿಸಬೇಕು. ಬಡವ, ಬಲ್ಲಿದರಿಗೂ ಮಕರ ಸಂಕ್ರಾಂತಿ ದಿನದಂದು ಎಳ್ಳು, ಬೆಲ್ಲ ಮುಂತಾದವುಗಳು ದೊರಕಲು ಲಭ್ಯವಾಗಲಿ ಎಂಬ ದೃಷ್ಟಿಯಿಂದ ಮುಜರಾಯಿ ಇಲಾಖೆಯ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಂದು ಆಯಾ ದೇವಾಲಯಗಳ ವತಿಯಿಂದ ಎಳ್ಳು-ಬೆಲ್ಲವನ್ನು ವಿತರಿಸುವಂತೆ ಆದೇಶದಲ್ಲಿ ಹೇಳಲಾಗಿದೆ ಎಂದು ವಿವರಿಸಿದ್ದಾರೆ.


