ಮ-ನರೇಗಾ ಬದಲಿಸಿ ‘ವಿಬಿ ಜಿ ರಾಮ್‌ ಜಿ’ ಯೋಜನೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಇದೀಗ ರಾಜ್ಯ ಸರ್ಕಾರ ಸಂಘರ್ಷದ ಹಾದಿ ತುಳಿದಿದೆ. ಜ.22ರಿಂದ ವಿಧಾನಮಂಡಲದ ಅಧಿವೇಶನ ನಡೆಸಿ ಮ-ನರೇಗಾ ಯೋಜನೆ ಪುನರ್‌ಸ್ಥಾಪನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು : ಮ-ನರೇಗಾ ಯೋಜನೆ ಬದಲಿಸಿ ‘ವಿಬಿ ಜಿ ರಾಮ್‌ ಜಿ’ ಯೋಜನೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಇದೀಗ ರಾಜ್ಯ ಸರ್ಕಾರ ಸಂಘರ್ಷದ ಹಾದಿ ತುಳಿದಿದೆ. ಜ.22ರಿಂದ ವಿಧಾನಮಂಡಲದ ಅಧಿವೇಶನ ನಡೆಸಿ ಮ-ನರೇಗಾ ಯೋಜನೆ ಪುನರ್‌ಸ್ಥಾಪನೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅಧಿವೇಶನದ ಮೂಲಕ ಕೇಂದ್ರದ ಎದುರು ಮ-ನರೇಗಾ ಯೋಜನೆ ಪುನಸ್ಥಾಪನೆಗೆ ಒತ್ತಾಯ ಮಂಡಿಸುವ ಜತೆಗೆ ನ್ಯಾಯಾಲಯದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಗುರುವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ಮೂರು ನಿರ್ಣಯಗಳನ್ನು ತೆಗೆದುಕೊಂಡಿದ್ದು, ಜ.22 ರಿಂದ ಜ.31ರವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಜ.22 ರಂದು ಬೆಳಗ್ಗೆ 11 ಗಂಟೆಗೆ ಮೊದಲಿಗೆ ಜಂಟಿ ಅಧಿವೇಶನ ನಡೆಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಂದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣಕ್ಕೆ ಆಹ್ವಾನಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ.

ರಾಜ್ಯಪಾಲರು ವಿಧಾನಮಂಡಲದ ಅಧಿವೇಶನ ಉದ್ದೇಶಿಸಿ ಮಾಡಲಿರುವ ಭಾಷಣ ಅನುಮೋದಿಸಲು ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿದೆ. ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ಭಾಷಣ ಕಳುಹಿಸಲಿದ್ದು, ತಮ್ಮ ವಿವೇಚನೆ ಬಳಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ರಾಜ್ಯಪಾಲರಿಗೆ ಕಳುಹಿಸುವ ಭಾಷಣದಲ್ಲಿ ಮ-ನರೇಗಾ ಸಾಧನೆ ಹಾಗೂ ಯೋಜನೆಯಿಂದ ಜನರಿಗೆ ಆಗಿರುವ ಉಪಯೋಗಗಳ ಬಗ್ಗೆ ಒತ್ತಿ ಹೇಳಲು ಚರ್ಚಿಸಲಾಗಿದೆ. ಈ ಭಾಷಣವನ್ನು ಅಂತಿಮಗೊಳಿಸಿ ಅನುಮೋದಿಸುವ ಹೊಣೆಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ.

ಗವರ್ನರ್‌ ಭಾಷಣ ಅನುಮೋದನೆ ಹೊಣೆ ಸಿಎಂಗೆ:

ರಾಜ್ಯಪಾಲರು ವಿಧಾನಮಂಡಲದ ಅಧಿವೇಶನ ಉದ್ದೇಶಿಸಿ ಮಾಡಲಿರುವ ಭಾಷಣ ಅನುಮೋದಿಸಲು ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿದೆ. ರಾಜ್ಯ ಸರ್ಕಾರವು ರಾಜ್ಯಪಾಲರಿಗೆ ಭಾಷಣ ಕಳುಹಿಸಲಿದ್ದು, ತಮ್ಮ ವಿವೇಚನೆ ಬಳಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ರಾಜ್ಯಪಾಲರಿಗೆ ಕಳುಹಿಸುವ ಭಾಷಣದಲ್ಲಿ ಮ-ನರೇಗಾ ಸಾಧನೆ ಹಾಗೂ ಯೋಜನೆಯಿಂದ ಜನರಿಗೆ ಆಗಿರುವ ಉಪಯೋಗಗಳ ಬಗ್ಗೆ ಒತ್ತಿ ಹೇಳಲು ಚರ್ಚಿಸಲಾಗಿದೆ. ಈ ಭಾಷಣವನ್ನು ಅಂತಿಮಗೊಳಿಸಿ ಅನುಮೋದಿಸುವ ಹೊಣೆಯನ್ನು ಸಿದ್ದರಾಮಯ್ಯ ಅವರಿಗೆ ವಹಿಸಲಾಗಿದೆ.

ಜಾಗೃತಿ, ಅರಿವು ಮೂಡಿಸಲು ವಿಶೇಷ ಚರ್ಚೆ:

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌, ಕೇಂದ್ರ ಸರ್ಕಾರವು ಮ-ನರೇಗಾ ಯೋಜನೆ ರದ್ದುಪಡಿಸಿ ಜಾರಿ ಮಾಡಿರುವ ವಿಬಿ ಜಿ ರಾಮ್‌ ಜಿ ನೂತನ ಕಾಯ್ದೆ ಸಮಾಜದ ಮೇಲೆ ಬೀರಿರುವ ಸಾಮಾಜಿಕ, ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು, ಜಾಗೃತಿ ಮೂಡಿಸಲು ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಜ.22 ರಿಂದ ಜ.31ರವರೆಗೆ ಅಧಿವೇಶನ:

ಸಚಿವ ಸಂಪುಟ ಸಭೆಯಲ್ಲಿ ಜ.22 ರಿಂದ ಜ.31 ರವರೆಗೆ ಅಧಿವೇಶನ ನಡೆಸಲು ಒಪ್ಪಿಗೆ ನೀಡಲಾಗಿದೆ. ಜ.22 ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡಲಿದ್ದಾರೆ. ರಾಜ್ಯಪಾಲರ ಭಾಷಣದ ಬಳಿಕ ಮ-ನರೇಗಾ ಕುರಿತ ವಿಶೇಷ ಚರ್ಚೆ ಶುರುವಾಗಲಿದೆ. ಜ.24, 25, 26 ರಂದು ಸರ್ಕಾರಿ ರಜೆ ಇರುವ ಬಗ್ಗೆಯೂ ಚರ್ಚೆಯಾಗಿದೆ. ಕನಿಷ್ಠ 5 ದಿನ ಅಧಿವೇಶನ ನಡೆಸಲು ಅನುಮೋದನೆ ನೀಡಿದ್ದು, ಜ.22 ರಿಂದ ಜ.31ರ ನಡುವೆ ಯಾವ ದಿನಗಳಲ್ಲಿ ಅಧಿವೇಶನ ನಡೆಸಬೇಕು? ಎಷ್ಟು ದಿನ ನಡೆಸಬೇಕು? ಯಾವ ದಿನ ರಜೆ ನೀಡಬೇಕು ಎಂಬ ಬಗ್ಗೆ ವಿಧಾನಸಭೆ ಸಭಾಧ್ಯಕ್ಷರು ಹಾಗೂ ವಿಧಾನಪರಿಷತ್‌ ಸಭಾಪತಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.

ಪ್ರತಿ ವರ್ಷ ಜಂಟಿ ಅಧಿವೇಶನ ನಡೆಸಲಾಗುತ್ತಿತ್ತು. ಇದು ತುರ್ತು ಅಧಿವೇಶನ ಹೇಗೆ? ಎಂಬ ಪ್ರಶ್ನೆಗೆ, ಪ್ರತಿ ವರ್ಷ ಇಷ್ಟು ಬೇಗ ಜಂಟಿ ಅಧಿವೇಶನ ನಡೆಸುತ್ತಿರಲಿಲ್ಲ. ಈ ವರ್ಷ ಬೇಗ ನಡೆಸುತ್ತಿದ್ದೇವೆ. ಅದನ್ನೇ ತುರ್ತು ಎಂದು ಕರೆಯುತ್ತಾರೆ ಎಂದು ಎಚ್.ಕೆ.ಪಾಟೀಲ್‌ ಉತ್ತರಿಸಿದರು. ಇನ್ನು ವಿಧಾನಸಭೆ ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬಂದ ಸರ್ಕಾರದ ಮೊದಲ ಅಧಿವೇಶನ ಅಥವಾ ಪ್ರತಿ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಬೇಕು ಎಂದು ಸಂವಿಧಾನದಲ್ಲೇ ಇದೆ. ಇದೇ ನಿಯಮದಡಿ ರಾಜ್ಯಪಾಲರಿಗೆ ಆಹ್ವಾನ ನೀಡುತ್ತಿದ್ದೇವೆ. ತಾಂತ್ರಿಕ ಕಾರಣಗಳಿಂದಾಗಿ ಈ ವರ್ಷ ತ್ವರಿತವಾಗಿ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ನ್ಯಾಯಾಲಯದಲ್ಲೂ ಹೋರಾಟ: ಎಚ್.ಕೆ.ಪಾಟೀಲ್

ಅಧಿವೇಶನದಲ್ಲಿ ವಿಶೇಷ ಚರ್ಚೆ ನಡೆಸುವ ಮೂಲಕ ಜನತಾ ನ್ಯಾಯಾಲಯಕ್ಕೆ ಮ-ನರೇಗಾ ವಿಷಯ ಕೊಂಡೊಯ್ಯುತ್ತೇವೆ. ಜತೆಗೆ ಕಾನೂನಿನ ನ್ಯಾಯಾಲಯದ ಮೊರೆ ಹೋಗಲೂ ನಿರ್ಣಯಿಸಲಾಗಿದೆ. ಹೈಕೋರ್ಟ್‌ ಅಥವಾ ಸುಪ್ರೀಂ ಕೋರ್ಟ್‌-ಎಲ್ಲಿ ಪ್ರಕರಣ ದಾಖಲಿಸಬೇಕು ಎಂಬ ಬಗ್ಗೆ ಚರ್ಚಿಸಿ ನಿರ್ಣಯ ಮಾಡುತ್ತೇವೆ ಎಂದು ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ಕಲಾಪದ ಅವಧಿ ನಿರ್ಧಾರ ಸ್ಪೀಕರ್‌ ಹೆಗಲಿಗೆ?

ಸಚಿವ ಎಚ್.ಕೆ. ಪಾಟೀಲ್‌ ಅವರ ಪ್ರಕಾರ, ಜ.22 ರಿಂದ ಜ.31ರ ನಡುವೆ 5 ದಿನಗಳ ಕಾಲ ಅಧಿವೇಶನ ನಡೆಸಲು ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಜ.24, 25 ಹಾಗೂ 26 ರಂದು ಸರ್ಕಾರಿ ರಜಾ ದಿನ. ಜ.31ರ ಶನಿವಾರವೂ ಸೇರಿ ಅಧಿವೇಶನ ನಡೆಸಿದರೆ ರಜಾ ದಿನ ಹೊರತಾಗಿಯೂ 7 ದಿನ ಲಭ್ಯವಾಗುತ್ತದೆ. ಸರ್ಕಾರ 5 ದಿನ ಕಲಾಪ ನಡೆಸಲು ಉದ್ದೇಶಿಸಿದ್ದು, ರಾಜ್ಯಪಾಲರ ಭಾಷಣ ಕುರಿತು ವಂದನಾ ನಿರ್ಣಯದ ವಿರುದ್ಧ ಚರ್ಚಿಸಲು ಹೆಚ್ಚುವರಿ ಸಮಯಾವಕಾಶ ನೀಡಲು ಹಾಗೂ ಶಾಸಕರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಲು ಅನುವಾಗುವಂತೆ ಎಷ್ಟು ದಿನ ಕಲಾಪ ನಡೆಸಬೇಕೆಂಬ ಬಗ್ಗೆ ನಿರ್ಧಾರವನ್ನು ಸ್ಪೀಕರ್‌ ಹಾಗೂ ಬಿಎಸಿಗೆ ವಹಿಸಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ಗೌರ್‍ನರ್‌ ಭಾಷಣದಲ್ಲೇ ನರೇಗಾ ಲಾಭ ಬಗ್ಗೆ ಪ್ರಸ್ತಾಪಕ್ಕೆ ನಿರ್ಧಾರ

ರಾಜ್ಯಪಾಲರು ವಿಧಾನಮಂಡಲದ ಅಧಿವೇಶನ ಉದ್ದೇಶಿಸಿ ಮಾಡಲಿರುವ ಭಾಷಣ ಅನುಮೋದಿಸಲು ಸಚಿವ ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿದೆ. ರಾಜ್ಯಪಾಲರಿಗೆ ಕಳುಹಿಸುವ ಭಾಷಣದಲ್ಲಿ ಮ-ನರೇಗಾ ಸಾಧನೆ ಹಾಗೂ ಯೋಜನೆಯಿಂದ ಜನರಿಗೆ ಆಗಿರುವ ಉಪಯೋಗಗಳ ಬಗ್ಗೆ ಒತ್ತಿ ಹೇಳಲು ಚರ್ಚಿಸಲಾಗಿದೆ.

ದುರುದ್ದೇಶದ ಅಧಿವೇಶನ

ದುರುದ್ದೇಶದಿಂದ ಕರೆಯಲು ಹೊರಟಿರುವ ಅಧಿವೇಶನ ಇದು. ನಾವು ಅಧಿವೇಶನದಲ್ಲಿ ಭಾಗಿಯಾಗಿ ಚರ್ಚೆ ಮಾಡಲು ಸಿದ್ಧರಿದ್ದೇವೆ.

- ಆರ್‌. ಅಶೋಕ್‌, ಪ್ರತಿಪಕ್ಷ ನಾಯಕ