Asianet Suvarna News Asianet Suvarna News

Karnataka Rains| ವಾರದ ಬಳಿಕ ರಾಜ್ಯಕ್ಕೆ ಬಿಡುವು ನೀಡಿದ ಮಳೆ

*   ಬಹುತೇಕ ಜಿಲ್ಲೆಗಳಲ್ಲಿ ತಗ್ಗಿದ ವರುಣನ ಅಬ್ಬರ
*   ಮಳೆ ಹಾನಿ ಮುಂದುವರಿಕೆ
*   ಚಿತ್ರದುರ್ಗದಲ್ಲಿ ಒಬ್ಬ ವ್ಯಕ್ತಿ ನೀರು ಪಾಲು
 

Reduced Rainfall After a Week in Karnataka grg
Author
Bengaluru, First Published Nov 22, 2021, 10:42 AM IST
  • Facebook
  • Twitter
  • Whatsapp

ಬೆಂಗಳೂರು(ನ.22):  ಬಂಗಾಳ ಕೊಲ್ಲಿಯಲ್ಲಿ(Bay of Bengal) ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ರಾಜ್ಯದ(Karnataka) ವಿವಿಧೆಡೆ ನಿರಂತರವಾಗಿ ಸುರಿಯುತ್ತಿದ್ದ ಮಳೆ(Rain) ಭಾನುವಾರ ಬಹುತೇಕ ಜಿಲ್ಲೆಗಳಲ್ಲಿ ಕಡಿಮೆಯಾಗಿದೆ. ಆದರೆ ಮಳೆ ಹಾನಿ ಮಾತ್ರ ಮುಂದುವರಿಯುವುದರೊಂದಿಗೆ ಅಸ್ತವ್ಯಸ್ತವಾಗಿರುವ ಜನಜೀವನ ಸಹಜಸ್ಥಿತಿಗೆ ಮರಳಲು ವಿಳಂಬವಾಗಿದೆ. ರಕ್ಷಣಾ ಕಾರ್ಯಗಳು ಮುಂದುವರಿದಿವೆ. ಈ ನಡುವೆ ವ್ಯಕ್ತಿಯೊಬ್ಬ ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ ವರದಿಯಾಗಿದೆ.

ಭಾರೀ ಮಳೆಗೆ ತತ್ತರಿಸಿರುವ ಬಳ್ಳಾರಿ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಭಾನುವಾರ ಮಳೆಯಾಗಲಿಲ್ಲ. ಗದಗ ಜಿಲ್ಲೆಯಲ್ಲಿ ಮಾತ್ರ 1 ಗಂಟೆಗೂ ಅಧಿಕ ಕಾಲ ಜಡಿಮಳೆಯಾಗಿದೆ. ದಕ್ಷಿಣ ಕನ್ನಡ, ಕೊಡಗು ಸೇರಿ ಕೆಲವೆಡೆ ತುಂತುರು ಮಳೆಯಾಗಿದ್ದು ದಿನವಿಡೀ ಮೋಡ(Cloudy) ಕವಿದ ವಾತಾವರಣವಿತ್ತು. ಹೀಗಾಗಿ ಮತ್ತೆ ಎಲ್ಲಿ ಮಳೆ ಅಬ್ಬರಿಸುವುದೋ ಎಂಬ ಆತಂಕ ಮಾತ್ರ ದೂರವಾಗಿಲ್ಲ.

Karnataka Rains| ಅಕಾಲಿಕ ಮಳೆಗೆ ರಾಜ್ಯದಲ್ಲಿ ಈವರೆಗೆ 24 ಸಾವು

ನಿರಂತರ ಮಳೆಯಿಂದಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಬಹುತೇಕ ಕೆರೆಗಳು ಕೋಡಿ ಬಿದ್ದಿದ್ದು ಹಿರಿಯೂರು ತಾಲೂಕಿನ ಗಾಯತ್ರಿ ಜಲಾಶಯದಲ್ಲಿ ಈಜಲು ಹೋಗಿದ್ದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾನೆ. ನೀರು ಪಾಲಾದ ಯುವಕನನ್ನು ಜೆ.ಜಿ.ಹಳ್ಳಿಯ ಸಲ್ಮಾನ್‌(24) ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನ ಮೃತ ದೇಹ(Deadbody) ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ 17,190 ಹೆಕ್ಟೇರ್‌ ಕೃಷಿ(Agriculture) ಮತ್ತು ತೋಟಗಾರಿಕೆ ಬೆಳೆಹಾನಿಯಾಗಿದ್ದು 118 ಮನೆಗಳು ಭಾಗಶಃ ಜಖಂಗೊಂಡಿವೆ. ಕೊಟ್ಟೂರು ತಾಲೂಕಿನಲ್ಲಿ 2 ದಿನಗಳಿಂದ ಸುರಿದ ಮಳೆಗೆ ನೆನೆದು ಶೆಟೆರೋಗದಿಂದ ಅಂದಾಜು 50ಕ್ಕೂ ಅಧಿಕ ಕುರಿಗಳು ಮತ್ತು ಮೇಕೆಗಳು ಸಾವಿಗೀಡಾಗಿವೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು 1153 ಮನೆಗಳು ಹಾನಿಯಾಗಿವೆ. ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ ಕಾರಣ ಏಳು ಕಾಳಜಿ ಕೇಂದ್ರಗಳನ್ನು ತೆರೆದು 137 ಕುಟುಂಬಗಳ 750 ಸಂತ್ರಸ್ತರು, ನಾಲ್ಕು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 18 ಜಾನುವಾರುಗಳ ಜೀವಹಾನಿಯಾಗಿದೆ. 15 ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. 125 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ.

ದಾವಣಗೆರೆ ಜಿಲ್ಲಾದ್ಯಂತ 97 ಮನೆಗಳು(House) ಧರೆಗುರುಳಿದ್ದು, 5 ದನದ ಕೊಟ್ಟಿಗೆ ನಾಶವಾಗಿದೆ. ದೇವರ ಬೆಳಕೆರೆ ಪಿಕಪ್‌ ಡ್ಯಾಂನ ಹಿನ್ನೀರಿನಲ್ಲಿ ತೋಟದ ಮನೆಯಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸುವಲ್ಲಿ ಆಡಳಿತ ಯಂತ್ರ ಯಶಸ್ವಿಯಾಗಿದೆ.

ಟಿಬಿ ಡ್ಯಾಂನಿಂದ ನೀರು: ಹಂಪಿ ಸ್ಮಾರಕ ಜಲಾವೃತ

ತುಂಗಭದ್ರಾ ಜಲಾಶಯದ(Tungabhdra Dam) ಒಳಹರಿವಿನಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು. ಇದರಿಂದಾಗಿ ಹಂಪಿಯ(Hampi) ಸ್ಮಾರಕಗಳು ಜಲಾವೃತವಾಗಿವೆ. ಸ್ನಾನಘಟ್ಟ, ರಾಮ-ಲಕ್ಷ್ಮಣರ ದೇಗುಲ, ಚಕ್ರತೀರ್ಥ, ಕೋಟಿಲಿಂಗ, ಕಂಪಭೂಪ ಮಾರ್ಗಕ್ಕೆ ನೀರು ನುಗ್ಗಿದ್ದು, ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.

Bengaluru Rain| ನಗರದಲ್ಲಿ ಅವಾಂತರ ಸೃಷ್ಟಿಸಿದ ಮಳೆ

ಚಾಮರಾಜನಗರ ಡ್ಯಾಂ 10 ವರ್ಷ ಬಳಿಕ ಭರ್ತಿ

ತಮಿಳುನಾಡಿನ(Tamil Nadu) ಕೊಂಗಳ್ಳಿ ಬೆಟ್ಟ, ತಲೆಮಲೈ, ಚಿಕ್ಕಳ್ಳಿ ಭಾಗದಲ್ಲಿ ಧಾರಾಕಾರ ಮಳೆ ಪರಿಣಾಮ ಚಾಮರಾಜನಗರ ಜಿಲ್ಲೆಯ ಚಿಕ್ಕಹೊಳೆ ಜಲಾಶಯ ಶನಿವಾರ ರಾತ್ರಿ ಕೋಡಿ ಬಿದ್ದಿದೆ. 74 ಅಡಿ ಸಾಮರ್ಥ್ಯದ ಈ ಜಲಾಶಯ 2010ರ ಬಳಿಕ ಸಂಪೂರ್ಣ ಭರ್ತಿಯಾಗಿರಲಿಲ್ಲ. ಆದರೆ, ದಶಕದ ಮಹಾಮಳೆಗೆ ಅವಳಿ ಜಲಾಶಯಗಳೆಂದೆ ಕರೆಯುವ ಸುವರ್ಣಾವತಿ ಮತ್ತು ಚಿಕ್ಕಹೊಳೆ ಡ್ಯಾಂ ಮೈದುಂಬಿದ್ದು, ಭವಿಷ್ಯದ ನೀರಿನ ಕೊರತೆ ನೀಗಿಸುವ ನಿರೀಕ್ಷೆ ಮೂಡಿಸಿದೆ.

ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗಿವೆ. ಜಲಾಶಯದ 33 ಕ್ರೇಸ್ಟ್‌ ಗೇಟ್‌ಗಳ ಪೈಕಿ 28 ಗೇಟ್‌ಗಳಿಂದ 1,09, 881 ಕ್ಯುಸೆಕ್‌ ನೀರು ನದಿಗೆ ಹರಿಬಿಡಲಾಯಿತು. ಹಂಪಿಯ ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ರಾಮ-ಲಕ್ಷ್ಮಣರ ದೇಗುಲ, ಚಕ್ರತೀರ್ಥ, ಕೋಟಿಲಿಂಗ, ಕಂಪಭೂಪ ಮಾರ್ಗ ಸೇರಿದಂತೆ ಹಂಪಿ ಕೆಲ ಸ್ಮಾರಕಗಳು ಜಲಾವೃತವಾಗಿವೆ. ಹಂಪಿಯಲ್ಲಿ ಬೋಟ್‌ಗಳನ್ನು ಹಾಕಲು ನಿರ್ಬಂಧ ಹಾಕಲಾಗಿದ್ದು, ಪ್ರವಾಸಿಗರು ಸುರಕ್ಷಿತವಾಗಿರಲು ಸೂಚಿಸಲಾಗಿದೆ.
 

Follow Us:
Download App:
  • android
  • ios