2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಅಂತಿಮ ಹಂತದಲ್ಲಿದೆ. ಪಾರದರ್ಶಕತೆಗಾಗಿ ಯುಪಿಎಸ್‌ಸಿ ಮಾದರಿಯನ್ನು ಅಳವಡಿಸಲಾಗಿದ್ದು, ಜನವರಿಯಲ್ಲಿ ಸಂದರ್ಶನ ನಡೆಸಲು ಕೆಪಿಎಸ್‌ಸಿ ಸಿದ್ಧತೆ ನಡೆಸುತ್ತಿದೆ.
ಬೆಂಗಳೂರು (ಡಿ.20): ರಾಜ್ಯದ ವಿವಿಧ ಇಲಾಖೆಗಳಲ್ಲಿನ ಖಾಲಿ ಇರುವ 2023-24ನೇ ಸಾಲಿನ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಕ್ಕೆ ಇದೇ ಮೇನಲ್ಲಿ ನಡೆದಿದ್ದ ಮುಖ್ಯ ಪರೀಕ್ಷೆಯ ಪತ್ರಿಕೆಗಳ ಮೌಲ್ಯಮಾಪನ ಭರದಿಂದ ಸಾಗಿದ್ದು, ಜನವರಿಯಲ್ಲಿ ಸಂದರ್ಶನ ನಡೆಸುವ ಸಾಧ್ಯತೆ ಇದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
ಈ ಬಾರಿಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಯುಪಿಎಸ್‌ಸಿ ಮಾದರಿಯನ್ನು ಅಳವಡಿಸಲಾಗಿದೆ. ಪಾರದರ್ಶಕತೆ, ನಿಷ್ಪಕ್ಷಪಾತತಕ್ಕಾಗಿ ತಂತ್ರಜ್ಞಾನ ಸೇರಿದಂತೆ ಅನೇಕ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಈ ತಿಂಗಳೊಳಗೆ ಮೌಲ್ಯಮಾಪನ ಮುಗಿಯಲಿದೆ. ಹೊಸ ವರ್ಷದಲ್ಲಿ ಸಂದರ್ಶನಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕೆಪಿಎಸ್‌ಸಿ ಮೂಲಗಳಿಂದ ತಿಳಿದು ಬಂದಿದೆ.
ನ್ಯಾಯಾಲಯದಲ್ಲಿ ಹಲವಾರು ಅಭ್ಯರ್ಥಿಗಳು ಶೇ.56 ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈಗಾಗಲೇ ಅಧಿಸೂಚನೆ ಹೊರಡಿಸಿರುವ ಗೆಜೆಟೆಡ್ ಪ್ರೊಬೇಷನರ್ಸ್ ಮತ್ತು ಇತರ ಇಲಾಖೆಗಳ ಹುದ್ದೆಗಳಿಗೆ ಶೇ.56ರ ಮೀಸಲಾತಿಯನ್ನು ಅನ್ವಯಿಸಲು ಸರ್ಕಾರ ಅಫಿಡಿವೇಟ್ ಸಲ್ಲಿಸಿದೆ. ಅಧಿಸೂಚನೆ ಹೊರಡಿಸಿರುವ ಹುದ್ದೆಗಳಿಗೆ ಷರತ್ತುಬದ್ಧ ಅನುಮತಿಯನ್ನು ಹೈಕೋರ್ಟ್ ನೀಡಿರುವುದರಿಂದ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಅಡೆ ತಡೆಗಳಿಲ್ಲ. ಹೀಗಾಗಿ, ನೇಮಕಾತಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನ ನಡೆದಿದೆ ಎಂದು ಕೆಪಿಎಸ್‌ಸಿ ತಿಳಿಸಿದೆ.
ಒಟ್ಟು 5,420 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ದು, ಫಲಿತಾಂಶಕ್ಕಾಗಿ ಕಾತರರಾಗಿದ್ದಾರೆ.
- ಮೌಲ್ಯಮಾಪನದಲ್ಲಿ ಯುಪಿಎಸ್‌ಸಿ ಮಾದರಿ ಅಳವಡಿಕೆ.
- ಮೌಲ್ಯಮಾಪಕರಿಗೆ ಬಯೋಮೆಟ್ರಿಕ್ ಗುರುತು ಮತ್ತು ಕೇಂದ್ರಕ್ಕೆ ಬರುವಾಗ ಬಯೋಮೆಟ್ರಿಕ್ ಹಾಜರಾತಿ.
- ಮೌಲ್ಯಮಾಪನ ಕ್ರಮಗಳ ಕುರಿತು ಪ್ರಾಧ್ಯಾಪಕರಿಗೆ ಮಾದರಿ ಉತ್ತರಗಳ ಸಹಿತ ತರಬೇತಿ ಕಾರ್ಯಾಗಾರ.
- ಏಕರೂಪ ಮೌಲ್ಯಮಾಪನಕ್ಕೆ ಒತ್ತು.
- ಪರಿಣಿತ ಅಧ್ಯಾಪಕರಿಂದ ಎರಡೆರೆಡು ಬಾರಿ ಮೌಲ್ಯಮಾಪನ. 15ಕ್ಕಿಂತ ಹೆಚ್ಚು ಅಂಕ ವ್ಯತ್ಯಾಸವಾದರೆ ಮರು ಮೌಲ್ಯಮಾಪನ.
- ಪ್ರತಿ ಅಭ್ಯರ್ಥಿಯ 4 ಸಾಮಾನ್ಯ ಅಧ್ಯಯನ ಪತ್ರಿಕೆಗಳನ್ನು ಮೊದಲ ಮತ್ತು ಎರಡನೇ ಹಂತದಲ್ಲಿ 24 ಜನ ಅಧ್ಯಾಪಕರಿಂದ ಮೌಲ್ಯಮಾಪನ.
- ಇಂಟ್ರಾನೆಟ್ ಬಳಸಿ ಕೆಪಿಎಸ್‌ಸಿ ಆವರಣದಲ್ಲೆ ಮೌಲ್ಯಮಾಪನ.
- ಮೌಲ್ಯಮಾಪಕರು ಕೂಡ ನೋಡಲಾಗದಂತೆ ಅಭ್ಯರ್ಥಿಗಳು ಗಳಿಸಿದ ಒಟ್ಟು ಅಂಕಗಳ ಗೌಪ್ಯತೆ.


