ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಆರೋಗ್ಯ ಸೌಲಭ್ಯದ ಜೊತೆಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ (ಜೂ.14): ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಆರೋಗ್ಯ ಸೌಲಭ್ಯದ ಜೊತೆಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ. ಕ್ಯಾನ್ಸರ್ ಪೀಡಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರಥಮ ಹಂತವಾಗಿ ರಾಜ್ಯದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಪಕ್ಕದಲ್ಲೇ ಕ್ಯಾನ್ಸರ್ ಪೀಡಿತ ವಸತಿ ಶಾಲೆಯನ್ನು ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಖಾಸಗಿ ಎನ್‌ಜಿಓ ಒಂದು ಜೊತೆ ಸಭೆ ನಡೆಸಿ ಯೋಜನೆ ರೂಪಿಸಿದ್ದೇನೆ. ಕಿದ್ವಾಯಿ ಆಸ್ಪತ್ರೆ ಸಮೀಪದಲ್ಲಿ ಖಾಸಗಿ ಕಟ್ಟಡವನ್ನು ನೋಡಲಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಪಡೆದುಕೊಂಡು ಜುಲೈ ಅಂತ್ಯದೊಳಗೆ ಪ್ರಾರಂಭಿಸಲಾಗುವುದು. ಎನ್‌ಜಿಓ ಅವರ ಮಾಹಿತಿ ಪ್ರಕಾರ ಈಗಾಗಲೇ 1,500 ಸಾವಿರ ಮಕ್ಕಳನ್ನು ಗುರುತಿಸಿದ್ದಾರೆ. ಇದಕ್ಕೂ ಹೆಚ್ಚು ಇರಬಹುದು. ಒಂದನೇ ತರಗತಿಯಿಂದ ಹತ್ತನೆ ತರಗತಿಯವರೆಗೆ ಶಿಕ್ಷಣ ನೀಡಲಾಗುವುದು. ವಿಸ್ತರಣೆ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕ್ಯಾನ್ಸರ್ ಪೀಡಿತ ವಸತಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕಿದ್ವಾಯಿ ಆಸ್ಪತ್ರೆಗೆ ಕರೆದೊಯ್ಯಲು ಮಿನಿ ಬಸ್ ಹಾಗೂ ಕಾರಿನ ಸೌಲಭ್ಯ ಕಲ್ಪಿಸಲಾಗುತ್ತದೆ. ಆಟ,ಪಾಠಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎಲ್ಲ ಮಕ್ಕಳಂತೆ ಅವರು ಗೌರವಯುತವಾಗಿ ಬದುಕಬೇಕು ಎಂಬುದು ನನ್ನ ಉದ್ದೇಶ ಎಂದರು.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಒತ್ತು: ಕಟ್ಟಕಡೆಯ ಮಗುವಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಎಲ್ಲ ರೀತಿಯ ಸಹಾಯ ನೀಡುತ್ತಿದೆ. ಪಾಲಕರು ಸದುಪಯೋಗ ಪಡಿಸಿಕೊಂಡು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಸಮೀಪದ ಸೂಳೇಬಾವಿ ಗ್ರಾಮದಲ್ಲಿ ಮಂಗಳವಾರ ಶ್ರೀ ರಾಮಯ್ಯಸ್ವಾಮಿ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಡಿಯಲ್ಲಿ ಜರುಗಿದ ನೂತನ ಶಾಲಾ ಕೊಠಡಿಗಳ ಲೋಕಾರ್ಪಣೆ, ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ, ಸಭಾಭವನ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ, ದಾನಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಹೆಚ್ಚಿಸಲು 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಒಂದು ವರ್ಷ ಅವರಿಗೆ ನಷ್ಟವುಂಟಾಗಿ ಭವಿಷ್ಯ ಹಾಳಾಗುತ್ತದೆ ಎಂಬ ದೃಷ್ಟಿಯಿಂದ ಪರೀಕ್ಷಾ ಶುಲ್ಕ ರದ್ದು ಮಾಡಿ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಉತ್ತೀರ್ಣರಾಗಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು. ಶಾಲೆಗಳಲ್ಲಿ ಮಕ್ಕಳಲ್ಲಿ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಪ್ರತಿದಿನ ಮಕ್ಕಳಿಂದ ಸಂವಿಧಾನ ಪೀಠಿಕೆ ಓದಿಸುವ ಪರಿಪಾಠ ಮಾಡಲಾಗಿದೆ. ಅದನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು ಎಂದ ಅವರು, ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವ ಮೂಲಕ ಶ್ರೀ ರಾಮಯ್ಯಸ್ವಾಮಿ ವಿದ್ಯಾಸಂಸ್ಥೆ ಉತ್ತಮ ಕಾರ್ಯಮಾಡುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
