ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡ ಚಾಂಪಿಯನ್‌ಶಿಪ್ ಗೆದ್ದ ಸಂಭ್ರಮದಲ್ಲಿ ಬೆಳಗಾವಿಯ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಮಂಜುನಾಥ ಕುಂಬಾರ (25) ಎಂದು ಗುರುತಿಸಲಾಗಿದೆ.
ಬೆಳಗಾವಿ (ಜೂ.4): ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಮೊದಲ ಚಾಂಪಿಯನ್‌ಶಿಪ್ ಗೆದ್ದಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಬೆಳಗಾವಿಯ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಸಂಭ್ರಮಾಚರಣೆ ವೇಳೆ ಅಭಿಮಾನಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಮಂಜುನಾಥ ಕುಂಬಾರ (25) ಮೃತ ದುರ್ದೈವಿ. ಆರ್‌ಸಿಬಿ, ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದ ಮಂಜುನಾಥ. ಆರ್‌ಸಿಬಿ ತಂಡದ ಗೆಲುವಿನ ಸಂತಸದಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಕುಣಿದು ಕುಪ್ಪಳಿಸುತ್ತಿದ್ದ ವೇಳೆಯೇ ಒಮ್ಮಿಂದೊಮ್ಮೆಗೆ ಹೃದಯಾಘಾತವಾಗಿದೆ.
ಈ ಘಟನೆಯಿಂದ ಅವರಾದಿ ಗ್ರಾಮದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಮಂಜುನಾಥ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಗ್ರಾಮದಲ್ಲಿ ನಡೆಯಲಿದೆ. ಸ್ಥಳೀಯರು ಹಾಗೂ ಆರ್‌ಸಿಬಿ ಅಭಿಮಾನಿಗಳು ಈ ದುರಂತಕ್ಕೆ ಕಂಬನಿ ಮಿಡಿದಿದ್ದಾರೆ.
ರಾಜ್ಯಾದ್ಯಂತ ಆರ್‌ಸಿಬಿ ಫ್ಯಾನ್ಸ್ ಸಂಭ್ರಮ:
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಬ್ಬ ಸಂಭ್ರಮ ಮನೆ ಮಾಡಿದೆ. ಬೀದಿಗಳು ಕೆಂಪು ಮತ್ತು ಚಿನ್ನದ ಬಣ್ಣದಲ್ಲಿ ಕಂಗೊಳಿಸುತ್ತಿವೆ. ಅದರಲ್ಲೂ ಬೆಂಗಳೂರಿನ ಎಂ.ಜಿ. ರೋಡ್, ಕೋರಮಂಗಲ, ಮತ್ತು ಇಂದಿರಾನಗರದಲ್ಲಿ ಫ್ಯಾನ್ಸ್ ಈಗಾಗಲೇ ಆಚರಣೆಯಲ್ಲಿ ತೊಡಗಿದ್ದಾರೆ. #RCBVictoryParade, #EeSalaCupNamdu ಟ್ರೆಂಡಿಂಗ್ ಹ್ಯಾಷ್‌ಟ್ಯಾಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸುರಕ್ಷತೆ ಮತ್ತು ಎಚ್ಚರಿಕೆ:
ಬೆಂಗಳೂರು ಪೊಲೀಸರು ಭದ್ರತೆಗಾಗಿ ವಿಶೇಷ ಏರ್ಪಾಡುಗಳನ್ನು ಮಾಡಿದ್ದಾರೆ. ಅಭಿಮಾನಿಗಳು ರಸ್ತೆ ತಡೆಯುವುದು ಅಥವಾ ಅತಿರೇಕದ ಆಚರಣೆಯಿಂದ ದೂರವಿರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
