ಐಪಿಎಲ್ 2025 ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ಇಂದು ಸಂಜೆ 5 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆ ನಡೆಯಲಿದೆ. ಆದರೆ, ಕ್ರೀಡಾಂಗಣಕ್ಕೆ ಉಚಿತ ಪ್ರವೇಶದ ಬದಲು ಟಿಕೆಟ್ ಹಾಗೂ ಪಾಸ್ ವಿತರಣೆ ಮಾಡಲು ಕೆಎಸ್‌ಸಿಎ ನಿರ್ಧರಿಸಿದೆ.
ಬೆಂಗಳೂರು (ಜೂ.04): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 18ನೇ ಸೀಸನ್‌ನಲ್ಲಿ ಐಪಿಎಲ್ 2025ರ ಟ್ರೋಫಿಯನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗೆದ್ದುಕೊಂಡಿದೆ. ಆದರೆ, ಇದೀಗ ಬೆಂಗಳೂರಿಗೆ ಕಪ್ ಗೆದ್ದಿರುವ ತಂಡ ವಾಪಸ್ ಬರುತ್ತಿದ್ದು, ಇಂದು ಸಂಜೆ 5 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ನೀಡಲು ಮುಂದಾಗಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್‌ಸಿಎ) ಇದೀಗ ಕ್ರೀಡಾಂಗಣಕ್ಕೆ ಬರುವ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್ ಹಾಗೂ ಪಾಸ್ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಆರ್‌ಸಿಬಿ ವಿಜಯೋತ್ಸವವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡುತ್ತಿರುವ ಮುನ್ಸೂಚನೆಯನ್ನು ಸ್ವತಃ ಆಟಗಾರ ವಿರಾಟ್ ಕೊಹ್ಲಿ ಅವರೇ ಅನೌನ್ಸ್ ಮಾಡಿದ್ದರು. ಆರ್‌ಸಿಬಿಗಾಗಿ ಹೋರಾಡಿದ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಹಾಗೂ ನಾನು ನಾಳೆ ಬಂಗಳೂರಿಗೆ ಬರುತ್ತೇವೆ. ಅಲ್ಲಿ ಅಭಿಮಾನಿಗಳಿಗೆ ಈ ಕಪ್ ಸಮರ್ಪಿಸಿ ವಿಜಯೋತ್ಸವ ಸಂಭ್ರಮಾಚರಣೆ ಮಾಡುತ್ತೇವೆ ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಕೆಎಸ್‌ಸಿಎ ವತಿಯಿಂದ ಆರ್‌ಸಿಬಿ ಅಭಿಮಾನಿಗಳ ವಿಜಯೋತ್ಸವಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 35 ಸಾವಿರ ಆಸನದ ವ್ಯವಸ್ಥೆಯಿದೆ. ಆದರೆ, ಆರ್‌ಸಿಬಿ ವಿಜಯೋತ್ಸವಕ್ಕೆ ಬರುವ ಅಭಿಮಾನಿಗಳ ಸಂಖ್ಯೆ 1 ಲಕ್ಷಕ್ಕೂ ಅಧಿಕವಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಆರ್‌ಸಿಬಿ ಅಭಿಮಾನಿಗಳಿಗೆ ಟಿಕೆಟ್ ಅಥವಾ ಪಾಸ್ ವಿತರಣೆ ಮಾಡಲು ನಿರ್ಧರಿಸಿದೆ. ಈ ಮೂಲಕ ನಿಗದಿತ ಅಭಿಮಾನಿಗಳಿಗೆ ಮಾತ್ರ ವಿಜಯೋತ್ಸವ ಆಚರಣೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಇಲ್ಲಿದೆ ಪಾಸ್ ಪಡೆಯುವ ವೆಬ್ ವಿಳಾಸ: shop.royalchallengers.com ಇಲ್ಲಿ ಕ್ಲಿಕ್ ಮಾಡಿ ಪಾಸ್ ಪಡೆದು ಒಳಗೆ ಹೋಗಿ..
ಗುಜರಾತ್‌ನ ಅಹಮದಾಬಾದ್‌ನಿಂದ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರುವ ಆರ್‌ಸಿಬಿ ಆಟಗಾರರು, ಅಲ್ಲಿಂದ ಸೀದಾ ಹೋಟೆಲ್‌ಗೆ ತೆರಳಿ ಸ್ವಲ್ಪ ಕಾಲ ವಿಶ್ರಾಂತಿ ಪಡೆಯುತ್ತಾರೆ. ನಂತರ ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರದಿಂದ ಆಯೋಜನೆ ಮಾಡಿರುವ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರದ ಗೌರವವನ್ನು ಸ್ವೀಕರಿಸಿ ನಂತರ ಅಲ್ಲಿಂದ ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳುತ್ತಾರೆ. ಅಲ್ಲಿ ವಿಜಯೋತ್ಸವ ನಡೆಯಲಿದೆ ಎಂದು ತಿಳಿದುಬಂದಿದೆ. ಆದರೆ, ಈ ನಡುವೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ತೆರೆದ ವಾಹನದಲ್ಲಿ ವಿಜಯೋತ್ಸವ ಪರೇಡ್ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದ್ದು, ಕೊನೇ ಕ್ಷಣದಲ್ಲಿ ಭದ್ರತೆ ಕೊರತೆಯಾಗಬಹುದು ಎಂಬ ನಿಟ್ಟಿನಲ್ಲಿ ವಿಜಯೋತ್ಸವ ಪರೇಡ್ ಅನ್ನು ರದ್ದುಗೊಳಿಸಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ಪರೇಡ್ ಜೂನ್ 4, 2025ರಂದು ಮಧ್ಯಾಹ್ನ 3:30ಕ್ಕೆ ವಿಧಾನಸೌಧದಿಂದ ಆರಂಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ. ಆದರೆ, ಈ ಕಾರ್ಯಕ್ರಮಕ್ಕೆ ಅನುಮತಿ, ಸಮಯ ನಿಗದಿ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಇಂದು ಸಿಎಂ ಗೃಹಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಬಳಿಕ ಸಮಯ ನಿಗದಿಯಾಗುವ ಸಾಧ್ಯತೆ ಇದೆ. ಬೆಳಗ್ಗೆ 10 ಗಂಟೆಯ ನಂತರ ತಿಳಿಸುವ ಸಾಧ್ಯತೆಯಿದೆ.
ಅಭಿಮಾನಿಗಳು ಈ ವಿಜಯೋತ್ಸವದಲ್ಲಿ ಭಾಗಿಯಾಗಲು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಪೊಲೀಸ್ ಇಲಾಖೆಯ ಅನುಮತಿಯ ಕೊರತೆಯಿಂದಾಗಿ ಪರೇಡ್‌ನ ಆಯೋಜನೆಯ ಬಗ್ಗೆ ಗೊಂದಲ ಉಂಟಾಗಿದೆ. ಪೊಲೀಸ್ ಇಲಾಖೆಯು ಭದ್ರತೆ ಮತ್ತು ಸಂಚಾರ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರಗಳಿಗಾಗಿ, ಆರ್‌ಸಿಬಿ ತಂಡದ ಅಧಿಕೃತ ಘೋಷಣೆಗಾಗಿ ಕಾಯಲಾಗುತ್ತಿದೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಸಿಎಂ ಅಭಿನಂದನೆ ಸಲ್ಲಿಸುತ್ತಾರೆ. ಆರ್‌ಸಿಬಿ ತಂಡದ ಆಟಗಾರರು ನೇರವಾಗಿ ಬಸ್‌ನಲ್ಲಿ ಬರುತ್ತಾರೆ. ವಿಧಾನಸೌದಕ್ಕೆ ಆಟಗಾರರು ಆಗಮಿಸುತ್ತಾರೆ. ಇಲ್ಲಿಗೆ ಬಸ್ ನಲ್ಲಿ ಬಂದು ಬಸ್ ನಲ್ಲಿ ಕ್ರೀಡಾಂಗಣಕ್ಕೆ ಹೋಗುತ್ತಾರೆ. ಅಲ್ಲಿ ಕಾರ್ಯಕ್ರಮ ಇರುತ್ತದೆ. ಆದರೆ, ಒಪನ್ ಬಸ್ ನಲ್ಲಿ ವಿಧಾನಸೌಧಕ್ಕೆ ಹೋಗಲ್ಲ. ಅವರು ಬಂದಿರುವ ಬಸ್‌ನಿಂದಲೇ ನೇರವಾಗಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗ್ತಾರೆ. ಅಲ್ಲಿ ಅವರು ಕಾರ್ಯಕ್ರಮ ನೋಡಿಕೊಳ್ತಾರೆ. ಭದ್ರತೆ ಹಾಗೂ ಟ್ರಾಫಿಕ್ ಮ್ಯಾನೇಜ್ ಮೆಂಟ್ ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಆರ್‌ಸಿಬಿ ವಿಜಯೋತ್ಸವದ ಕುರಿತು:
1) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 5 ರಿಂದ 6 ರವರೆಗೆ ಆರ್‌ಸಿಬಿ ತಂಡಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. 2) ಟಿಕೆಟ್ / ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಸೀಮಿತವಾಗಿದೆ. 3) ವಿಜಯೋತ್ಸವ ಮೆರವಣಿಗೆ ಇರುವುದಿಲ್ಲ. 4) ಸೀಮಿತ ಪಾರ್ಕಿಂಗ್ ಇರುವುದರಿಂದ, ಸಾರ್ವಜನಿಕರು ಮೆಟ್ರೋ ಮತ್ತು ಇತರ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಲಾಗಿದೆ. 5) ಸಾರ್ವಜನಿಕರು ಮಧ್ಯಾಹ್ನ 3 ರಿಂದ ರಾತ್ರಿ 8 ರವರೆಗೆ ಸಿಬಿಡಿ ಪ್ರದೇಶವನ್ನು ತಪ್ಪಿಸಲು ಸೂಚಿಸಲಾಗಿದೆ.
