ರಾಹುಲ್ ಗಾಂಧಿ ಅವರ ಚಿತ್ರವನ್ನು ಮಾರ್ಪ್ ಮಾಡಿ ಸ್ಯಾನಿಟರಿ ಪ್ಯಾಡ್‌ನೊಂದಿಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ರತನ್ ರಂಜನ್ ವಿರುದ್ಧ ಎಫ್‌ಐಆರ್ ದಾಖಲು. ಯೂತ್ ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕ ದೇವಿ ದೂರಿನ ಮೇರೆಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು (ಜು.6) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಚಿತ್ರವನ್ನು ಮಾರ್ಪ್ ಮಾಡಿ ಸ್ಯಾನಿಟರಿ ಪ್ಯಾಡ್‌ನೊಂದಿಗೆ ಎಕ್ಸ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ರತನ್ ರಂಜನ್ ಎಂಬುವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯೂತ್ ಕಾಂಗ್ರೆಸ್ ಕಾರ್ಯಕರ್ತೆ ಪ್ರಿಯಾಂಕ ದೇವಿ ಅವರ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆ ಸಂಬಂಧ, ರಾಹುಲ್ ಗಾಂಧಿ ಅವರ ಚಿತ್ರವಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ಬಿಹಾರ ಕಾಂಗ್ರೆಸ್ ಘಟಕವು ಮಹಿಳೆಯರಿಗೆ ಹಂಚಿಕೆ ಮಾಡಿದೆ ಎಂಬ ವಿಚಾರ ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯವನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರಾಹುಲ್ ಗಾಂಧಿ ಅವರ ಚಿತ್ರವನ್ನು ಸ್ಯಾನಿಟರಿ ಪ್ಯಾಡ್‌ನೊಂದಿಗೆ ಟೀಕಿಸಿದ್ದರು. ಬಿಹಾರ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಕಾಂಗ್ರೆಸ್ ಪಕ್ಷವು ಮಹಿಳಾ ಮತದಾರರನ್ನು ಸೆಳೆಯಲು ಈ 'ಗಿಮಿಕ್' ಮಾಡುತ್ತಿದೆ ಎಂದು ನೆಟ್ಟಿಗರು ಆರೋಪಿಸಿ ಟ್ರೋಲ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ರತನ್ ರಂಜನ್ ಅವರ ಪೋಸ್ಟ್ ಅವಹೇಳನಕಾರಿಯೆಂದು ಪರಿಗಣಿಸಿ, ಕಾನೂನು ಕ್ರಮಕ್ಕೆ ಒಳಪಡಿಸಲಾಗಿದೆ. ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
