ಹಳಿಯಾಳ ತಾಲೂಕಿನ ಇಂದಿರಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿದ ಪೋಷಕರು, ಅಕ್ಕಿ ಮೂಟೆಗಳ ಮೇಲಿನ ಇಲಿ-ಹಲ್ಲಿ ಮಲ, ಕೊಳೆತ ತರಕಾರಿ ಮತ್ತು ಕಳಪೆ ನೈರ್ಮಲ್ಯ ಕಂಡು ಆಘಾತ. ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವುದು ಮತ್ತು ದೂರು ನೀಡಿದರೆ ಟಿಸಿ ಕೊಡುವ ಬೆದರಿಕೆ ಹಾಕುತ್ತಿರುವ ಬಗ್ಗೆ ತಿಳಿದು, ಪೋಷಕರು ಆಕ್ರೋಶ.
ಉತ್ತರ ಕನ್ನಡ(ಜ.10): ಉತ್ತರಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿರುವ ವಸತಿ ಶಾಲೆಯೊಂದರ ಕಳಪೆ ವ್ಯವಸ್ಥೆ ಕಂಡು ಪೋಷಕರೇ ಬೆಚ್ಚಿಬಿದ್ದಿದ್ದಾರೆ. ದಿಢೀರನೇ ಶಾಲೆಗೆ ಭೇಟಿ ಕೊಟ್ಟ ಪೋಷಕರು ಕೊಠಡಿ ಪರಿಶೀಲನೆ ವೇಳೆ ಆಘಾತಕಾರಿ ವಿಷಯ ಬಯಲಾಗಿದ್ದು, ಮಕ್ಕಳ ಭವಿಷ್ಯದ ಜೊತೆ ಶಿಕ್ಷಣ ಸಂಸ್ಥೆ ಚೆಲ್ಲಾಟವಾಡುತ್ತಿರುವುದು ಕಂಡುಬಂದಿದೆ.
ವಸತಿ ಶಾಲೆಯಲ್ಲಿ ಅಕ್ಕಿ ಮೂಟೆಗಳ ಮೇಲೆ ಇಲಿ-ಹಲ್ಲಿಯ ಮಲ!
ಹಳಿಯಾಳ ತಾಲೂಕಿನ ಕೇರವಾಡ ಕ್ರಾಸ್ ಸಮೀಪವಿರುವ ಸಾಂಬ್ರಾಣಿ ಗ್ರಾಮದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಗಂಭೀರ ಅವ್ಯವಸ್ಥೆ ಆರೋಪ ಕೇಳಿಬಂದಿದೆ. 2025–26ನೇ ಶೈಕ್ಷಣಿಕ ಸಾಲಿನ ಪಾಲಕರ ಸಭೆಗೆ ಬಂದಿದ್ದ ಪೋಷಕರು ಶಾಲೆ ಹಾಗೂ ಹಾಸ್ಟೆಲ್ ಪರಿಶೀಲಿಸಿದಾಗ ಬೆಚ್ಚಿಬೀಳುವ ದೃಶ್ಯಗಳು ಕಂಡಿವೆ. ಆಹಾರ ದಾಸ್ತಾನು ಕೊಠಡಿಯಲ್ಲಿದ್ದ ಅಕ್ಕಿ ಮೂಟೆಗಳ ಮೇಲೆ ಇಲಿ, ಹಲ್ಲಿಯ ಮಲ ಕಂಡುಬಂದಿದ್ದು, ನುಸಿ ಹಾಗೂ ಕಸಕಡ್ಡಿಗಳಿಂದ ತುಂಬಿದ ಅಕ್ಕಿಯನ್ನೇ ಮಕ್ಕಳಿಗೆ ಅನ್ನ ಮಾಡಿ ಬಡಿಸಲಾಗುತ್ತಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಕೊಳೆತ ತರಕಾರಿ, ಬಳಸಲು ಯೋಗ್ಯವಲ್ಲದ 5 ಕ್ವಿಂಟಾಲ್ ಗೋಧಿ ಪತ್ತೆ
ವಿದ್ಯಾರ್ಥಿಗಳಿಗೆ ಪೂರೈಕೆಯಾಗುತ್ತಿರುವ ಆಹಾರದ ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಸುಮಾರು 5 ಕ್ವಿಂಟಾಲ್ ಬಳಸಲು ಯೋಗ್ಯವಲ್ಲದ ಗೋಧಿ ಹಾಗೂ ಕೊಳೆತ ತರಕಾರಿಗಳನ್ನು ದಾಸ್ತಾನು ಕೊಠಡಿಯಲ್ಲಿ ಪತ್ತೆಹಚ್ಚಲಾಗಿದೆ. 'ನಮ್ಮ ಮಕ್ಕಳು ಇಂತಹ ನಾರುವ ಆಹಾರವನ್ನೇ ತಿಂದು ಬದುಕುತ್ತಿದ್ದಾರಾ?' ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಕುಡಿಯುವ ನೀರಿನ ಟ್ಯಾಂಕ್‌ಗಳು ಸಹ ಕೊಳಕಾಗಿದ್ದು, ರೋಗರುಜಿನಗಳಿಗೆ ಆಹ್ವಾನ ನೀಡುವಂತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೌಚಾಲಯ ಕ್ಲೀನ್ ಮಾಡಬೇಕು ಇಲ್ಲದಿದ್ರೆ ಟಿಸಿ ಕೊಡುವ ಬೆದರಿಕೆ!
ವಸತಿ ನಿಲಯ ಹಾಗೂ ಶೌಚಾಲಯಗಳನ್ನು ಮಕ್ಕಳಿಂದಲೇ ಸ್ವಚ್ಛ ಮಾಡಿಸಲಾಗುತ್ತಿದೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ. ಈ ಬಗ್ಗೆ ಧ್ವನಿ ಎತ್ತುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಣಿತ ಶಿಕ್ಷಕ ಪ್ರಶಾಂತ್ ಎಂಬುವವರು ಕಿರುಕುಳ ನೀಡುತ್ತಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಸಮಸ್ಯೆ ಬಗ್ಗೆ ಮಾತನಾಡಿದರೆ ಶಾಲೆಯಿಂದ ಹೊರಹಾಕಿ ಟಿಸಿ ನೀಡುವುದಾಗಿ ಶಿಕ್ಷಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಪೋಷಕರು ಸಭೆಯಲ್ಲಿ ಕಿಡಿಕಾರಿದ್ದಾರೆ.
ಪರಿಶೀಲನೆಗೆ ಅಡ್ಡಿಪಡಿಸಿದ ಮೇಲ್ವಿಚಾರಕ: ಪಾಲಕರಿಂದ ಸಭೆ ಬಹಿಷ್ಕಾರ
ಆರಂಭದಲ್ಲಿ ಪೋಷಕರು ಒಳಗಡೆ ಹೋಗಿ ಪರಿಶೀಲನೆ ನಡೆಸಲು ವಸತಿ ನಿಲಯದ ಮೇಲ್ವಿಚಾರಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ಆಕ್ರೋಶಗೊಂಡ ವಿವಿಧ ತಾಲೂಕುಗಳಿಂದ ಬಂದಿದ್ದ ಪಾಲಕರು ಸಭೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಅನಿವಾರ್ಯವಾಗಿ ಪರಿಶೀಲನೆಗೆ ಅವಕಾಶ ನೀಡಿದಾಗ ಶಾಲೆಯ ಅಸಲಿ ಬಣ್ಣ ಬಯಲಾಗಿದೆ. ಪ್ರಾಂಶುಪಾಲರು ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಪೋಷಕರು ಕೇಳುವ ಸ್ಥಿತಿಯಲ್ಲಿರಲಿಲ್ಲ. ತಕ್ಷಣವೇ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ.


