ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಊಹಾಪೋಹಗಳ ನಡುವೆ, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ದಿಢೀರ್ ಭೇಟಿ ನೀಡಿದ್ದಾರೆ. ದೆಹಲಿ ಸಭೆಯು ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ್ದು ಎಂದು ಅವರು ಮತ್ತೊಮ್ಮೆ ಹೇಳಿದ್ದಾರೆ.

ಬೆಂಗಳೂರು (ಮೇ.27): ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಸಸ್ಪೆನ್ಸ್ ಕ್ಲೈಮ್ಯಾಕ್ಸ್ ಹಂತ ತಲುಪಿರುವ ಬೆನ್ನಲ್ಲೇ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬುಧವಾರ ದಿಢೀರನೆ ಬೆಂಗಳೂರಿಗೆ ಆಗಮಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಊಹಾಪೋಹಗಳ ನಡುವೆಯೇ ರಾಜ್ಯಕ್ಕೆ ಬಂದಿಳಿದಿರುವ ಸುರ್ಜೇವಾಲ ಅವರ ನಡೆ ತೀವ್ರ ಕುತೂಹಲ ಮೂಡಿಸಿದ್ದು, ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಹತ್ತು ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.

Add Asianetnews Kannada as a Preferred SourcegooglePreferred

ದೆಹಲಿಯಿಂದ ಇಂಡಿಗೋ ವಿಮಾನದ ಮೂಲಕ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIAB) ರಣದೀಪ್ ಸಿಂಗ್ ಸುರ್ಜೇವಾಲ ಬಂದಿಳಿದರು. ವಿಶೇಷವೆಂದರೆ, ಸುರ್ಜೇವಾಲ ಅವರ ಜೊತೆಯಲ್ಲಿ ರಾಜ್ಯದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ, ಹಿರಿಯ ನಾಯಕರಾದ ಎಂ.ಆರ್. ಸೀತಾರಾಂ ಮತ್ತು ಎಐಸಿಸಿ ಕಾರ್ಯದರ್ಶಿ ನಾಸಿರ್ ಹುಸೇನ್ ಕೂಡ ವಿಮಾನದಲ್ಲಿ ಆಗಮಿಸಿದರು.

ವಿಮಾನ ನಿಲ್ದಾಣದಿಂದ ನೇರವಾಗಿ ಕಾರಿನ ಮೂಲಕ ಬೆಂಗಳೂರು ಸಿಟಿಯತ್ತ ಮುಖ ಮಾಡಿದ ಸುರ್ಜೇವಾಲ, ಮೊದಲು ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಆಗಮಿಸಿದರು. ಅಲ್ಲಿ ಇಂದು ಹಲವು ಕಾಂಗ್ರೆಸ್ ಶಾಸಕರನ್ನು ಭೇಟಿಯಾಗಿ ಗುಪ್ತ ಸಮಾಲೋಚನೆ ನಡೆಸಿದರು. ಆ ಬಳಿಕ ಹೋಟೆಲ್‌ನಿಂದ ಹೊರಡುವಾಗ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಕೇವಲ ಕೈಮುಗಿದು ನೇರವಾಗಿ ಕೆಪಿಸಿಸಿ ಕಚೇರಿಗೆ ತಲುಪಿದರು.

ಸಿಎಂ ರಾಜೀನಾಮೆ ಪ್ರಶ್ನೆಗೆ ಸುರ್ಜೇವಾಲ ಉತ್ತರ: "ನಿನ್ನೆ ಸುದೀರ್ಘ ಸಭೆ ನಡೆದಿರುವುದು ನಿಜ!"

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳು ಸಿಎಂ ಸಿದ್ದರಾಮಯ್ಯ ಅವರ ಸಂಭಾವ್ಯ ರಾಜೀನಾಮೆ ಕುರಿತು ಕೇಳಿದ ನೇರ ಪ್ರಶ್ನೆಗೆ ಉತ್ತರಿಸಿದ ಸುರ್ಜೇವಾಲ, ನಿನ್ನೆ ದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಯನ್ನು ಒಪ್ಪಿಕೊಂಡರಾದರೂ, ವಿಷಯವನ್ನು ಚುನಾವಣೆಗಳ ಕಡೆಗೆ ತಿರುಗಿಸುವ ಪ್ರಯತ್ನ ಮಾಡಿದರು.

ನಿನ್ನೆ ದೆಹಲಿಯಲ್ಲಿ ಒಂದು ಸುದೀರ್ಘ ಸಭೆ ನಡೆದಿರುವುದು ನಿಜ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ನಾಯಕರಾದ ರಾಹುಲ್ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರ ಉಪಸ್ಥಿತಿಯಲ್ಲಿ ಈ ಸಭೆ ನಡೆದಿದೆ ಎಂದರು.

ಮುಂಬರುವ ರಾಜ್ಯಸಭಾ ಚುನಾವಣೆ ಹಾಗೂ ವಿಧಾನ ಪರಿಷತ್ತಿನ 7 ಸ್ಥಾನಗಳ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಕುರಿತು ನಾವು ಸುದೀರ್ಘವಾಗಿ ಚರ್ಚಿಸಿದ್ದೇವೆ. ಬೇರೆ ಬೇರೆ ಹೆಸರುಗಳನ್ನು ಪರಿಶೀಲಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರ ಕಡೆಯಿಂದಲೂ ಕೆಲವು ಹೆಸರುಗಳು ಬಂದಿವೆ, ಕೆಪಿಸಿಸಿ ಅಧ್ಯಕ್ಷರ ಕಡೆಯಿಂದಲೂ ಹೆಸರುಗಳು ಬಂದಿವೆ. ಕೆ.ಸಿ. ವೇಣುಗೋಪಾಲ್ ಅವರು ಈಗಾಗಲೇ ಹೇಳಿರುವಂತೆ ಸಭೆಯಲ್ಲಿ ಬೇರೆ ಯಾವುದೇ ಅಧಿಕೃತ ಚರ್ಚೆ ಆಗಿಲ್ಲ ಎಂದು ಹೇಳಿದರು.

ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಕರ್ನಾಟಕದ ಹಿತಕ್ಕಾಗಿ ನಿರ್ಧಾರ: ಸಸ್ಪೆನ್ಸ್ ಇಟ್ಟ ಸುರ್ಜೇವಾಲ!

ಮುಂದಿನ ನಾಯಕತ್ವದ ನಿರ್ಧಾರಗಳ ಕುರಿತು ಮಾತನಾಡುತ್ತಾ ಸುರ್ಜೇವಾಲ ಅವರು ಅತ್ಯಂತ ಗಂಭೀರವಾದ ರಾಜಕೀಯ ಸಂದೇಶವೊಂದನ್ನು ರವಾನಿಸಿದರು. 'ಮುಂದಿನ ದಿನಗಳಲ್ಲಿ ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ನಾವೇ ನಿಮಗೆ ತಿಳಿಸುತ್ತೇವೆ. ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ಕರ್ನಾಟಕದ ಹಿತಾಸಕ್ತಿಗಾಗಿಯೇ ಹೊರತು ಯಾವುದೇ ವೈಯಕ್ತಿಕ ಲಾಭಕ್ಕಾಗಿ ಅಲ್ಲ. ಕರ್ನಾಟಕದ ಹಿತ ಕಾಯುವುದೇ ನಮ್ಮ ಮೊದಲ ಆದ್ಯತೆ. ಹೈಕಮಾಂಡ್‌ನಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರೂ ಕರ್ನಾಟಕದವರೇ ಇದ್ದಾರೆ, ರಾಹುಲ್ ಗಾಂಧಿ ಅವರಿಗೂ ಕರ್ನಾಟಕದ ಮೇಲೆ ಅಪಾರ ಪ್ರೀತಿ ಇದೆ" ಎಂದರು.

ಊಹಾಪೋಹಗಳಿಗೆ ಕಿವಿಗೊಡಬೇಡಿ: "ನಮ್ಮ ಕಾಂಗ್ರೆಸ್ ಪಕ್ಷ ಅತ್ಯಂತ ಸದೃಢವಾಗಿದೆ. ಪಕ್ಷದ ನಾಯಕತ್ವದ ವಿಚಾರದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೈಕಮಾಂಡ್ ಅಷ್ಟೇ ಸದೃಢವಾಗಿದೆ. ಆದ್ದರಿಂದ ಸದ್ಯ ಮಾಧ್ಯಮಗಳಲ್ಲಿ ಬರುತ್ತಿರುವ ಯಾವುದೇ ರೀತಿಯ ಊಹಾಪೋಹಗಳಿಗೆ ಯಾರೂ ಎಡೆಮಾಡಿಕೊಡಬಾರದು" ಎಂದು ಹೇಳುವ ಮೂಲಕ ಸಿಎಂ ಬದಲಾವಣೆಯ ಚರ್ಚೆಗೆ ನಿಗೂಢವಾಗಿಯೇ ಸುರ್ಜೇವಾಲ ತೆರೆ ಎಳೆಯಲು ಯತ್ನಿಸಿದರು.