ರಾಜ್ಯದಲ್ಲಿ ಅಕಾಲಿಕ ಮಳೆಗೆ ಬೆಳೆ ಹಾನಿ, ರೈತರು ತತ್ತರ!
ಉತ್ತರ ಕರ್ನಾಟಕದ ಬಹುಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಹಲವೆಡೆ ಹಳ್ಳಕೊಳ್ಳಗಳ ನೀರು ಸಾವಿರಾರು ಎಕರೆ ಕೃಷಿ ಭೂಮಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
ಬೆಂಗಳೂರು (ಮೇ.21): ಉತ್ತರ ಕರ್ನಾಟಕದ ಬಹುಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಹಲವೆಡೆ ಹಳ್ಳಕೊಳ್ಳಗಳ ನೀರು ಸಾವಿರಾರು ಎಕರೆ ಕೃಷಿ ಭೂಮಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಇದೀಗ ಸುರಿದಿರುವ ಅಕಾಲಿಕ ಮಳೆಯಿಂದಾಗಿ ಇನ್ನೇನು ಫಸಲಿನ ನಿರೀಕ್ಷೆಯಲ್ಲಿದ್ದ ನೂರಾರು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೊಪ್ಪಳ ತಾಲೂಕಿನ ಮುದ್ಲಾಪುರ ಬಳಿಯಲ್ಲಿರುವ ಹಿರೇಹಳ್ಳ ಜಲಾಶಯದಿಂದ ಈಗ 17250 ಕ್ಯುಸೆಕ್ ನೀರು ಹಳ್ಳಕ್ಕೆ ಬಿಟ್ಟಿರುವುದರಿಂದ ಡ್ಯಾಂ ಸಮೀಪದ 15ಕ್ಕೂ ಹಳ್ಳಿಗಳ ಸಾವಿರಾರು ಎಕರೆ ಜಮೀನು ಜಲಾವೃತವಾಗಿದೆ.
ಕಬ್ಬು, ಬಾಳೆ, ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಜಿಲ್ಲೆಯ ಮಂಗಳಾಪುರ ಬಳಿ ಇರುವ ಬ್ರಿಡ್ಜ್ ಕಮ್ ಬ್ಯಾರೇಜ್ ಗೇಟ್‌ಗಳನ್ನು ತೆರೆಯದ್ದರಿಂದ ಅದರ ಹಿನ್ನೀರು ರೈತರ ಜಮೀನಿಗೆ ನುಗ್ಗಿದ್ದು, ರೈತರ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಜೊತೆಗೆ 20ಕ್ಕೂ ಹೆಚ್ಚು ಪಂಪ್‌ಸೆಟ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 6374 ಎಕರೆಗೂ ಅಧಿಕ ಭತ್ತ, ಅಡಿಕೆ, ತೆಂಗು, ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ಎಲೆ ಬಳ್ಳಿ ಸೇರಿ ಬೆಳೆ, ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಹಾನಿ ಪ್ರಮಾಣವು ಹೆಚ್ಚುತ್ತಲೇ ಇದೆ.
ಅನ್ನದಾತರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ ವರುಣ: ಮಳೆ ಹಾನಿ ಪ್ರದೇಶಕ್ಕೆ ಡಿಸಿ ಭೇಟಿ
ಹಾವೇರಿ ಜಿಲ್ಲೆಯಲ್ಲಿ ವರದಿ, ಕುಮುದ್ವತಿ ಸೇರಿದಂತೆ ಜಿಲ್ಲೆಯ ನದಿಗಳು ಅಪಾಯ ಮಟ್ಟಲ್ಲಿ ಹರಿಯುತ್ತಿದ್ದು ಹೊಲಗಳೆಲ್ಲ ನೀರಿನಲ್ಲಿ ನಿಂತಿವೆ. ಒಟ್ಟಾರೆ 370 ಹೆಕ್ಟೇರ್ ಕೃಷಿ, 77 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ, ಭತ್ತ, ಮೆಣಸಿನ ಬೆಳೆಗೆ ಹೆಚ್ಚು ಹಾನಿ ಸಂಭವಿಸಿದೆ. ಬಳ್ಳಾರಿ- ವಿಜಯನಗರ ಜಿಲ್ಲೆಯಲ್ಲಿ 350 ಎಕರೆ ಕೃಷಿ ಮತ್ತು 66 ಎಕರೆ ತೋಟಗಾರಿಕೆ ಬೆಳೆ ಹಾನಿಗೀಡಾಗಿದೆ. ಭತ್ತ, ಬಾಳೆ, ಕಲ್ಲಂಗಡಿ ಬೆಳಗೆ ಅಪಾರ ಹಾನಿ ಸಂಭವಿಸಿದೆ. ಇನ್ನು ಗದಗ ಜಿಲ್ಲೆಯಲ್ಲೂ ಹಿರೇಹಳ್ಳಿ ತುಂಬಿ ಹರಿಯುತ್ತಿದ್ದು ನೂರಾರು ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ.
ಕೋಲಾರ ಜಿಲ್ಲೆಯಲ್ಲಿ ಮಳೆ: ಮಾವು ಸೇರಿ ಹಲವು ಬೆಳೆಗಳ ನಾಶ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನ ಸುರಿದ ಮಳೆಗೆ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸೇರಿ 1813 ಹೆಕ್ಟೇರ್‌ನಷ್ಟುಬೆಳೆ ಹಾನಿಯಾಗಿದೆ. ಈ ಪೈಕಿ 1690 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿರುವುದು ವರದಿಯಾಗಿದೆ. ಇದರಲ್ಲಿ 372 ಹೆಕ್ಟೇರ್ ಭತ್ತ, 1248 ಹೆಕ್ಟೇರ್ ಮುಸುಕಿನ ಜೋಳ ಬೆಳೆ ನೀರು ಪಾಲಾಗಿದೆ. 123.29 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಮಳೆಯಿಂದ 58 ಎಕರೆ ಪ್ರದೇಶದಲ್ಲಿನ ಬಾಳೆ ಮತ್ತು ಎಲೆಬಳ್ಳಿಗಳು ಹಾನಿಗೊಳಗಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಹೊಲಗದ್ದೆಗಳಲ್ಲಿ ಮಳೆ ನೀರು ನಿಂತಿರುವುದರಿಂದ ಮೆಣಸೀನಕಾಯಿ, ಟೋಮೋಟೋ, ಕೊತ್ತಂಬರಿ ಸೊಪ್ಪು ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಹಾನಿಗೀಡಾಗಿವೆ.