ರಾಯಚೂರಿನ ಗೋನಾಳ ಗ್ರಾಮದ ಶಾಲೆಯೊಂದರಲ್ಲಿ ಪ್ರಭಾರಿ ಮುಖ್ಯ ಶಿಕ್ಷಕನೊಬ್ಬ ಕುಡಿದು ತೂರಾಡಿದ್ದಕ್ಕಾಗಿ ಅಮಾನತುಗೊಂಡಿದ್ದಾರೆ. ವಿದ್ಯಾರ್ಥಿಗಳ ಮುಂದೆಯೇ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಗ್ರಾಮಸ್ಥರ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

ರಾಯಚೂರು (ಜುಲೈ.25): ಶಾಲಾ ಅವಧಿಯಲ್ಲಿ ಕುಡಿದು ವಿದ್ಯಾರ್ಥಿಗಳ ಮುಂದೆಯೇ ತೂರಾಡಿದ್ದಲ್ಲದೇ, ಕರ್ತವ್ಯದ ಸಮಯದಲ್ಲಿ ನಿದ್ದೆಗೆ ಜಾರಿದ ಹಿನ್ನೆಲೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಅಂಬಾದೇವಿ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ನಿಂಗಪ್ಪ ಅವರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.

ಶಿಕ್ಷಕ ಮದ್ಯಪಾನ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸಿಂಧನೂರು ಬಿಇಒ ಈ ಆದೇಶ ಹೊರಡಿಸಿದ್ದಾರೆ. ನಿಂಗಪ್ಪ ಅವರ ಕರ್ತವ್ಯಲೋಪ, ದುರ್ನಡತೆ ಮತ್ತು ಬೇಜವಾಬ್ದಾರಿತನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಶಿಕ್ಷಕನ ವಿಡಿಯೋ ವೈರಲ್ ಆಗುತ್ತಿದ್ದ ಎಚ್ಚೆತ್ತ ಶಿಕ್ಷಣ ಇಲಾಖೆ:

ಗ್ರಾಮಸ್ಥರು ಈ ಶಿಕ್ಷಕನ ವಿರುದ್ಧ ಹಲವು ಬಾರಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಶಿಕ್ಷಕನ ಈ ಅನುಚಿತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. ವಿದ್ಯಾರ್ಥಿಗಳ ಮುಂದೆಯೇ ಕುಡಿದು ತೂರಾಡುವ ಮೂಲಕ ಶಿಕ್ಷಕನೊಬ್ಬ ತನ್ನ ಕರ್ತವ್ಯವನ್ನು ಮರೆತಿರುವುದು ಶಿಕ್ಷಣ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಗ್ರಾಮಸ್ಥರು ಕಿಡಿ:

ಶಿಕ್ಷಕ ನಿಂಗಪ್ಪ ಮಕ್ಕಳ ಮುಂದೆಯೇ ದಿನನಿತ್ಯ ಕುಡಿದು ತೂರಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಗ್ರಾಮಸ್ಥರು, ಈ ಬಾರಿ ದೂರು ನೀಡದೇ ಕುಡಿದು ತೂರಾಡಿದ ವಿಡಿಯೋವನ್ನೇ ಸೋಷಿಯಲ್ ಮೀಡಿಯಾದಲ್ಲೇ ಶೇರ್ ಮಾಡಿ ಶಿಕ್ಷಣ ಇಲಾಖೆಗೆ ಬಿಸಿ ಮುಟ್ಟಿಸಿದ್ದರು. ಹೀಗಾಗಿ ಶಿಕ್ಷಣ ಇಲಾಖೆ ತಕ್ಷಣವೇ ಕ್ರಮ ಕೈಗೊಂಡಿದೆ.