ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಅಪ್ರಾಪ್ತರ ಮದ್ಯಪಾನ, ಗೊತ್ತಿದ್ರೂ ತಪ್ಪು ಮಾಡುತ್ತಿವೆ ಬಾರ್‌ಗಳು!
ಕರ್ನಾಟಕದಲ್ಲಿ ಮದ್ಯಪಾನದ ಕಾನೂನುಬದ್ಧ ವಯಸ್ಸು 21 ಆದರೂ, ಬೆಂಗಳೂರಿನಲ್ಲಿ ಅಪ್ರಾಪ್ತ ವಯಸ್ಕರು ಬಾರ್ ಮತ್ತು ಪಬ್‌ಗಳಲ್ಲಿ ಮದ್ಯ ಸೇವಿಸುತ್ತಿದ್ದಾರೆ. ನಕಲಿ ಗುರುತಿನ ಚೀಟಿಗಳು ಮತ್ತು ಬಾರ್‌ಗಳ ನಿರ್ಲಕ್ಷ್ಯದಿಂದ ಈ ಸಮಸ್ಯೆ ಹೆಚ್ಚುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮದ್ಯದ ಬಗೆಗಿನ ನಿಯಮಗಳು ಕಟ್ಟುನಿಟ್ಟಾದರೂ, ಬೆಂಗಳೂರಿನ ಬಾರ್ ಮತ್ತು ಪಬ್‌ಗಳಲ್ಲಿ ಅಪ್ರಾಪ್ತ ವಯಸ್ಕರು ನಿರಂತರ ಮದ್ಯಪಾನ ಮಾಡುತ್ತಿರುವುದು ಚಿಂತೆ ಉಂಟುಮಾಡಿದೆ. ಉದ್ಯಮದ ವೆಚ್ಚಗಳು ಏರಿದರೂ, ಅಪ್ರಾಪ್ತರ ಮದ್ಯಪಾನ ಸಮಸ್ಯೆ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಂದುವರಿಯುತ್ತಿದೆ. 2024ರಲ್ಲಿ, ನಗರದಲ್ಲಿ ಸುಮಾರು 40 ಕ್ಕೂ ಹೆಚ್ಚು ಬಾರ್‌ಗಳು ಮತ್ತು ಪಬ್‌ಗಳು ಹೆಚ್ಚುತ್ತಿರುವ ಪರವಾನಗಿ ಶುಲ್ಕ ಹಾಗೂ ಇತರ ವೆಚ್ಚಗಳ ಕಾರಣದಿಂದ ಮುಚ್ಚಲ್ಪಟ್ಟವು. ಆದರೆ ಈ ನಡುವೆ, 16-18 ವರ್ಷದ ವಿದ್ಯಾರ್ಥಿಗಳು ನಕಲಿ ಗುರುತಿನ ಚೀಟಿಗಳನ್ನು ಬಳಸಿ ಅಥವಾ ಸರಿಯಾದ ಗುರುತಿನ ಪರಿಶೀಲನೆಯಿಲ್ಲದೆ ಮದ್ಯ ಸೇವನೆ ಮಾಡುತ್ತಿರುವುದು ಕಂಡುಬಂದಿದೆ.
ಕಾನೂನು ಬದ್ಧ ವಯಸ್ಸು 21, ಆದರೆ ಪಾಲನೆ ಎಲ್ಲಿ?
ಕರ್ನಾಟಕದಲ್ಲಿ ಕಾನೂನುಬದ್ಧ ಮದ್ಯಪಾನ ವಯಸ್ಸು 21 ವರ್ಷ, ಆದರೆ ನಗರದಲ್ಲಿ 16-18 ವರ್ಷದವರು ಸಹ ಪಬ್‌ಗಳಲ್ಲಿ ಮದ್ಯ ಸೇವಿಸುತ್ತಿರುವುದು ಸಾಮಾನ್ಯವಾಗಿದೆ. ನಿಯಮ ಪಾಲನೆ ಇಲ್ಲದ ಸ್ಥಳಗಳಲ್ಲಿ, ಬಾರ್‌ಗಳು ಗುರುತಿನ ಚೀಟಿಯನ್ನು ಕೇಳದೆ, ತಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ಕಣ್ಣು ಮುಚ್ಚಿ ವಯಸ್ಸು ನೋಡದೆ ಮದ್ಯ ಕೊಡುತ್ತಿದ್ದಾರೆ.
ನಕಲಿ ಐಡಿ, ಉದ್ದೇಶಪೂರ್ವಕ ನಿರ್ಲಕ್ಷ್ಯ
ಯಲಹಂಕದ 19 ವರ್ಷದ ಯುವಕನೊಬ್ಬ "ನಾನು ನನ್ನ ಫೋನ್‌ನಲ್ಲಿ ಆಧಾರ್ ಕಾರ್ಡ್‌ನ್ನು ಸಂಪಾದಿಸಿ, ಜನ್ಮದಿನಾಂಕ ಬದಲಾಯಿಸಿದೆ. ಒಳಗೆ ಹೋಗೋದು ಸುಲಭವಾಗಿತ್ತು. ಸಿಕ್ಕಿಬೀಳದೆ ಇರೋದು ಕೂಡ ಒಂದು ಥ್ರಿಲ್ಲಿಂಗ್ ಅನುಭವ ಎಂದಿದ್ದಾನೆ. ಇದು ಈ ಹುಡುಗನೊಬ್ಬನ ಮಾತಲ್ಲ ಅನೇಕ ಯುವಕರು ಇದೇ ರೀತಿ ನಕಲಿ ಐಡಿ ಕಾರ್ಡ್ ಹಾದಿ ಹಿಡಿದಿದ್ದಾರೆ. ಕೆಲವರು ತಮ್ಮ ಗುರುತಿನ ಚೀಟಿಗಳಲ್ಲಿ ತಿದ್ದುಪಡಿ ಮಾಡುತ್ತಾರೆ, ಇನ್ನು ಕೆಲವರು ಐಡಿ ಕೇಳದೇ ಸೇವೆ ನೀಡುವ ಸ್ಥಳಗಳಿಗೆ ಹೋಗುತ್ತಾರೆ.
ಹೇಳೋರಿಲ್ಲ ಕೇಳೋರಿಲ್ಲ:
ಹುಳಿಮಾವಿನ 20 ವರ್ಷದ ವಿದ್ಯಾರ್ಥಿ ಹೇಳಿದಂತೆ, "ಪಬ್‌ಗಳು ನಮ್ಮ ಗ್ರಾಹಕರು ಕಾಲೇಜು ಮಕ್ಕಳೇ ಎಂದು ಅರ್ಥ ಮಾಡಿಕೊಂಡು, ಐಡಿ ಕೇಳದೇ ನೇರವಾಗಿ ಸರ್ವ್ ಮಾಡುತ್ತಾರೆ. ಇದು ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ."
ವೈವಿಧ್ಯಮಯ ಅನುಭವಗಳು
ಅರೆಕೆರೆಯ ಮತ್ತೊಬ್ಬ ವಿದ್ಯಾರ್ಥಿ ಹೇಳಿದ್ದಂತೆ, ರೆಸ್ಟೋ-ಬಾರ್‌ಗಳಲ್ಲಿ ತಪಾಸಣೆ ಕಡಿಮೆ, ಆದರೆ ಕ್ಲಬ್‌ಗಳಲ್ಲಿ ಬೌನ್ಸರ್‌ಗಳು ಗಂಭೀರವಾಗಿ ಪರಿಶೀಲನೆ ಮಾಡುತ್ತಾರೆ. ಎಲ್ಲಾ ಕಡೆ ಒಂದೇ ರೀತಿ ಇರುವುದಿಲ್ಲ.
ಕುಟುಂಬದಿಂದಲೇ ಪ್ರಾರಂಭವಾದ ಪ್ರವೃತ್ತಿ
ಕೆಲವೊಮ್ಮೆ ಮದ್ಯಪಾನಕ್ಕೆ ಪ್ರೇರಣೆ ಮನೆಯಲ್ಲೇ ಸಿಗುತ್ತದೆ. "ನಮ್ಮ ಪಾರ್ಟಿಗಳಲ್ಲಿ ಮನೆವರೇ ಕುಡಿಯಲು ಕೊಟ್ಟಿದ್ದು, ಆದ್ದರಿಂದ ಅದು ಸಹಜ ಅನ್ನಿಸಿತು" ಎಂದು 19 ವರ್ಷದ ಯುವಕನೊಬ್ಬ ಒಪ್ಪಿಕೊಂಡಿದ್ದಾನೆ.
"ಪೋಷಕರು ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. 21ರ ವರೆಗೆ ಹೆಚ್ಚು ಮಂದಿ ವಿದ್ಯಾರ್ಥಿಗಳು ಆರ್ಥಿಕವಾಗಿ ಪೋಷಕರ ಮೇಲೆ ಅವಲಂಬಿತರಾಗಿರುತ್ತಾರೆ. ಈ ಕಾರಣದಿಂದ ಪೋಷಕರ ಜವಾಬ್ದಾರಿಯೂ ಇದೆ." ಎಂದು ಅಬಕಾರಿ ಇಲಾಖೆಯ ಜಂಟಿ ಆಯುಕ್ತ ನಾಗರಾಜಪ್ಪ ಟಿ ಅವರ ಅಭಿಪ್ರಾಯಪಟ್ಟಿದ್ದಾರೆ.
ಡಿಜಿಟಲ್ ತಪಾಸಣೆ ಇಲ್ಲ:
ಜುಲೈ 2024 ರಿಂದ ಮಾರ್ಚ್ 2025ರ ವರೆಗೆ 40,000 ಕ್ಕೂ ಹೆಚ್ಚು ತಪಾಸಣೆಗಳು ನಡೆದಿವೆ. ಆದರೆ, ವಯಸ್ಸು ಪರಿಶೀಲಿಸಲು ಯಾವುದೇ ಡಿಜಿಟಲ್ ಅಥವಾ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ. ಇನ್ನು ಅಪ್ರಾಪ್ತರಿಗೆ ಮದ್ಯ ಸೇವೆನೆಗೆ ಅವಕಾಶ ನೀಡಿದರೆ ₹5,000–₹15,000 ದಂಡವಿದೆ. ಆದರೆ ಈ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದ ಉದಾಹರಣೆಗಳು ಕಡಿಮೆ.
ರೆಸ್ಟೋರೆಂಟ್ ಮಾಲೀಕರ ಪ್ರತಿಕ್ರಿಯೆ:
NRAI ಬೆಂಗಳೂರು ಅಧ್ಯಾಯದ ಮುಖ್ಯಸ್ಥ ಚೇತನ್ ಹೆಗ್ಡೆ ಈ ಬಗ್ಗೆ ಮಾತನಾಡಿ, "ಇದು ಕೇವಲ ಕಾನೂನು ಸಮಸ್ಯೆಯಲ್ಲ. ಇದು ಹೊಣೆಗಾರಿಕೆಯ ಕೊರತೆಯೂ ಹೌದು. ತಕ್ಷಣದ ಲಾಭಕ್ಕಾಗಿ ನಿಮ್ಮ ಪರವಾನಗಿ ಮತ್ತು ಭವಿಷ್ಯವನ್ನು ಅಪಾಯಕ್ಕೆ ದೂಡುವುದು ಸರಿ ಅಲ್ಲ." ಎಂದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯೆ ನೀಡಿ, "ಐಡಿ ತಪಾಸಣೆ ಆಯ್ಕೆಗಲ್ಲ. ಯುವಕರ ಗುಂಪು ಬಂದಾಗ, ವಯಸ್ಸು ದೃಢಪಡಿಸೋದು ರೂಢಿ ಆಗಬೇಕು" ಎಂದಿದ್ದಾರೆ.
ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಅಪ್ರಾಪ್ತ ಮದ್ಯಪಾನ ಹಿನ್ನಲೆಯಲ್ಲಿ, ಕಾನೂನು ಜಾರಿ, ಬಾರ್ ಮಾಲೀಕರ ಹೊಣೆಗಾರಿಕೆ, ಪೋಷಕರ ಜವಾಬ್ದಾರಿ ಮತ್ತು ಯುವಕರ ಜಾಗೃತಿಗೆ ಒಟ್ಟಾಗಿ ಕಾರ್ಯ ಮಾಡುವ ಅವಶ್ಯಕತೆ ಇದೆ. ಲಾಭದ ಅರಸಿಕೆಯ ಹಿಂದೆ, ಯುವ ಮನಸ್ಸುಗಳು ನಾಶವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯೂ ಹೌದು.
ವರದಿ: ಟೈಮ್ಸ್ ಆಫ್ ಇಂಡಿಯಾ