ರಾಹುಲ್ ಯಾತ್ರೆ ಭರ್ಜರಿ ಆರಂಭ: ಕಾಂಗ್ರೆಸ್ಸಿಗರಿಂದ ಚುನಾವಣೆಗೆ ರಣಕಹಳೆ
ದೇಶದ ಐಕ್ಯತೆಯ ಸಂದೇಶ, ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ, ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ನಿರ್ಮಾಣ ಸೇರಿದಂತೆ ಹಲವು ಉದ್ದೇಶಗಳು ಐಕ್ಯಗೊಂಡಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷಿ ‘ಭಾರತ ಐಕ್ಯತಾ ಯಾತ್ರೆ’ ಶುಕ್ರವಾರ ಗುಂಡ್ಲುಪೇಟೆ ಮೂಲಕ ಅಧಿಕೃತವಾಗಿ ರಾಜ್ಯ ಪ್ರವೇಶ ಮಾಡಿತು.
ಶ್ರೀಕಾಂತ್ ಎನ್. ಗೌಡಸಂದ್ರ
ಗುಂಡ್ಲುಪೇಟೆ (ಅ.01): ದೇಶದ ಐಕ್ಯತೆಯ ಸಂದೇಶ, ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ, ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ನಿರ್ಮಾಣ ಸೇರಿದಂತೆ ಹಲವು ಉದ್ದೇಶಗಳು ಐಕ್ಯಗೊಂಡಿರುವ ಎಐಸಿಸಿ ನಾಯಕ ರಾಹುಲ್‌ಗಾಂಧಿ ಅವರ ಮಹತ್ವಾಕಾಂಕ್ಷಿ ‘ಭಾರತ ಐಕ್ಯತಾ ಯಾತ್ರೆ’ ಶುಕ್ರವಾರ ಗುಂಡ್ಲುಪೇಟೆ ಮೂಲಕ ಅಧಿಕೃತವಾಗಿ ರಾಜ್ಯ ಪ್ರವೇಶ ಮಾಡಿತು.
ತಮ್ಮ ನೇತಾರನಿಗೆ ರಾಜ್ಯದ ಗಡಿ ಜಿಲ್ಲೆಯಲ್ಲೇ ಅಭೂತಪೂರ್ವ ಸ್ವಾಗತ ನೀಡಿ ಬರಮಾಡಿಕೊಂಡ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಅಮಿತೋತ್ಸಾಹದಲ್ಲಿ ನಾಯಕನ ಜತೆ ಹೆಜ್ಜೆ ಹಾಕಿದರು. ನೆರೆದಿದ್ದ ಅಪಾರ ಸಮೂಹ, ನಾಯಕರ ಉತ್ಸಾಹದಿಂದ ಪುಳಕಿತರಾದಂತೆ ಕಂಡು ಬಂದ ರಾಹುಲ್ ಗಾಂಧಿ ಅವರು ಪ್ರಜಾತಂತ್ರವನ್ನೇ ನಿಷ್ಕಿ್ರಯಗೊಳಿಸಿ ಸೈದ್ಧಾಂತಿಕ ವಿರೋಧಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಆಡಳಿತಾರೂಢ ಪಕ್ಷಕ್ಕೆ ಜನಧ್ವನಿಯ ನಿಜ ಶಕ್ತಿ ಪರಿಚಯಿಸುವ ಈ ಪಾದಯಾತ್ರೆಯನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಠೇಂಕರಿಸಿದರು.
Bharat Jodo Yatra: ಇಂದಿನಿಂದ 21 ದಿನ ಕರ್ನಾಟಕದಲ್ಲಿ ರಾಹುಲ್‌ಗಾಂಧಿ ಐಕ್ಯತಾ ಯಾತ್ರೆ
ಇದೇ ವೇಳೆ ಅಚ್ಚುಕಟ್ಟಾದ ವೇದಿಕೆ ಕಾರ್ಯಕ್ರಮ ಹಾಗೂ ಯಾತ್ರೆಯ ಜತೆಗೆ ‘ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಜೋಡೋ’ ಒಗ್ಗಟ್ಟು ಪ್ರದರ್ಶನದ ಮೂಲಕ ಮುಂದೆ ಎದುರಾಗಲಿರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ‘ಚುನಾವಣಾ ಅಸ್ತ್ರವಾಗಿ’ ಬಳಸಿಕೊಳ್ಳಲು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಯಶಸ್ವಿಯಾದರು. ಜತೆಗೆ, ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯುತ್ತೇವೆ ಎನ್ನುವ ಮೂಲಕ ಚುನಾವಣಾ ಕಹಳೆಯನ್ನೂ ಮೊಳಗಿಸಿದರು.
ಆತ್ಮೀಯ ಸ್ವಾಗತ: ಶುಕ್ರವಾರ ಬೆಳಗ್ಗೆ ತಮಿಳುನಾಡು ಗಡಿ ಮೂಲಕ ರಾಜ್ಯ ಪ್ರವೇಶಿಸಿದ ರಾಹುಲ್‌ಗಾಂಧಿ ತಂಡವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಂಡ ಬಂಡೀಪುರದ ಬಳಿ ರೇಷ್ಮೆ ಶಾಲು ಹೊದಿಸಿ ಆತ್ಮೀಯವಾಗಿ ಬರ ಮಾಡಿಕೊಂಡಿತು. ಬಳಿಕ ವಾಹನದಲ್ಲಿ ಗುಂಡ್ಲುಪೇಟೆವರೆಗೆ ಆಗಮಿಸಿದ ರಾಹುಲ್‌ಗಾಂಧಿ ಅವರು ಅಂಬೇಡ್ಕರ್ ಭವವನದ ಎದುರಿಗಿನ ಬೃಹತ್ ವೇದಿಕೆಯ ಮೇಲೆ ಡಿ.ಕೆ. ಶಿವವಕುಮಾರ್ ಹಾಗೂ ಸಿದ್ದರಾಮಯ್ಯ ಕೈಹಿಡಿದು ನಗಾರಿ ಬಾರಿಸುವ ಮೂಲಕ ರಾಜ್ಯದಲ್ಲಿನ ಯಾತ್ರೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
ಬೆಳಗ್ಗೆ 10 ಗಂಟೆಗೆ ವೇದಿಕೆಗೆ ಆಗಮಿಸಿದ ರಾಹುಲ್‌ಗಾಂಧಿ ಅವರಿಗೆ ಬುಡಕಟ್ಟು ಜನಾಂಗದ ಕಲಾ ತಂಡಗಳ ಕುಣಿತ, ಆದಿವಾಸಿ ಸಾಂಸ್ಕೃತಿಕ ಕಲೆ, ಗೊರವನ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಚಂಡೆಮದ್ದಳೆಯಂತಹ ಕಲಾತಂಡಗಳು ಅದ್ಧೂರಿ ಸ್ವಾಗತ ಕೋರಿದವು. ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿ ಹಾಗೂ ಅವರೊಂದಿಗಿನ 120 ಯಾತ್ರಿಗಳಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
ಧ್ವಜ ಹಸ್ತಾಂತರ: ತಮಿಳುನಾಡು ಶಾಸಕಾಂಗ ಪಕ್ಷದ ನಾಯಕ ಸೆಲ್ವಪೆರುತೆಂಗೈ ಅವರಿಂದ ಯಾತ್ರೆಯ ಧ್ವಜ ಸ್ವೀಕರಿಸಿದ ರಾಹುಲ್‌ಗಾಂಧಿ, ಡಿ.ಕೆ. ಶಿವವಕುಮಾರ್ ಮೂಲಕ ರಾಜ್ಯ ಸೇವಾದಳದ ಅಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡಿದರು. ಇದೇ ವೇಳೆ ಪ್ರಗತಿಪರ ಸಾಹಿತಿ ದೇವನೂರು ಮಹಾದೇವ, ಸ್ವರಾಜ್ ಪಕ್ಷದ ಯೋಗೇಂದ್ರ ಯಾದವ್ ಸಂವಿಧಾನದ ಪ್ರತಿ ಹಾಗೂ ಪೀಠಿಕೆ ನೀಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಡಿಕೆಶಿ, ಸಿದ್ದು ಕೈಜೋಡಿಸಿದ ರಾಹುಲ್: ಸಿದ್ದರಾಮೋತ್ಸವದಲ್ಲಿ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರ ಕೈಹಿಡಿದು ಶಕ್ತಿ ಪ್ರದರ್ಶನ ಮಾಡಿ ಆಲಿಂಗನಕ್ಕೆ ಸನ್ನೆ ಮಾಡಿದ್ದ ರಾಹುಲ್‌ಗಾಂಧಿ ಶುಕ್ರವಾರ ಇಬ್ಬರ ಕೈ ಹಿಡಿದು ನಗಾರಿ ಬಾರಿಸಿದರು. ಜತೆಗೆ ಯಾತ್ರೆಯುದ್ದಕ್ಕೂ ಇಬ್ಬರನ್ನೂ ಪಕ್ಕದಲ್ಲೇ ಇರಿಸಿಕೊಂಡು ಹೆಜ್ಜೆ ಹಾಕಿದರು. ಈ ಮೂಲಕ ಭಾರತ ಜೋಡೋ ಯಾತ್ರೆಯನ್ನು ರಾಜ್ಯ ನಾಯಕರ ಜೋಡೋಗೂ ಬಳಸಿಕೊಂಡರು.
ಭರ್ಜರಿ ಜನಬೆಂಬಲ: ಉಳಿದಂತೆ ಮೇಕೆದಾಟು, ಸಿದ್ದರಾಮೋತ್ಸವ, ಸ್ವಾತಂತ್ರ್ಯ ನಡಿಗೆ ಯಾತ್ರೆಗಳ ಯಶಸ್ಸಿನ ಉತ್ಸಾಹದಲ್ಲಿದ್ದ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಈ ಯಾತ್ರೆಯಲ್ಲೂ ಭಾಗವಹಿಸಿದ್ದರು. 25-30 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರ ಜಯ ಘೋಷಗಳ ನಡುವೆ ರಾಹುಲ್‌ಗಾಂಧಿ ಮೊದಲ ದಿನವೇ ಯಶಸ್ವಿಯಾಗಿ 16 ಕಿ.ಮೀ. ಪಾದಯಾತ್ರೆಯನ್ನೂ ಪೂರೈಸಿದರು.
511 ಕಿ.ಮೀ. ಯಾತ್ರೆ ಪ್ರಾರಂಭ: ಒಟ್ಟು 3,570 ಕಿ.ಮೀ. ಉದ್ದದ ಪಾದಯಾತ್ರೆಯಲ್ಲಿ ಕೇರಳ, ತಮಿಳುನಾಡಿನಲ್ಲಿ 570 ಕಿ.ಮೀ. ಪೂರೈಸಿರುವ ರಾಹುಲ್‌ಗಾಂಧಿ ರಾಜ್ಯದಲ್ಲಿ ಮುಂದಿನ 20 ದಿನಗಳಲ್ಲಿ ಎಂಟು ಜಿಲ್ಲೆಗಳಲ್ಲಿ ಬರೋಬ್ಬರಿ 511 ಕಿ.ಮೀ. ಹೆಜ್ಜೆ ಹಾಕಲಿದ್ದಾರೆ. ಅವರೊಂದಿಗೆ ರಾಜ್ಯದ ಆಯ್ದ ನಾಯಕರೂ ನಡೆಯಲಿದ್ದು, ದೇಶದಲ್ಲಿ ಕೋಮು ಸಂಘರ್ಷ ತೊಡೆದು ಶಾಂತಿ ನೆಲೆಸುವಂತೆ ಮಾಡಲು, ನಿರುದ್ಯೋಗ ನಿವಾರಣೆ, ಸಮಾನತೆ ಸ್ಥಾಪನೆ, ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಲಿದ್ದಾರೆ.
ತಡೆಯಲು ಯಾರಿಗೂ ಸಾಧ್ಯವಿಲ್ಲ: ಈ ವೇಳೆ ಮಾತನಾಡಿದ ರಾಹುಲ್‌ಗಾಂಧಿ, ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡಲು ವಿರೋಧಪಕ್ಷಗಳಿಗೆ ಅವಕಾಶ ಸಿಗುತ್ತಿಲ್ಲ. ಪ್ರಜಾಸತ್ತಾತ್ಮಕ ಸಂಸ್ಥೆಗಳು ವಿರೋಧಪಕ್ಷಗಳ ಪಾಲಿಗೆ ಮುಚ್ಚಿದ್ದು , ಸರ್ಕಾರದ ಹಿಡಿತದಲ್ಲಿರುವ ಮಾಧ್ಯಮಗಳು ವಿಪಕ್ಷಗಳ ಸುದ್ದಿ ಪ್ರಕಟಿಸಲ್ಲ. ಸಂಸತ್‌ನಲ್ಲೂ ಮಾತನಾಡಲು ಅವಕಾಶ ನೀಡುತ್ತಿಲ್ಲ. ಹೊರಗೆ ಧ್ವನಿ ಎತ್ತಿದರೆ ಬಂಧಿಸುತ್ತಿದ್ದಾರೆ. ಹೀಗಾಗಿ ಜನರೊಂದಿಗೆ ಹೆಜ್ಜೆ ಹಾಕುವೊದೊಂದೇ ಪರಿಹಾರ ಎಂದು ಪಾದಯಾತ್ರೆ ಆಯ್ಕೆ ಮಾಡಿಕೊಂಡಿದ್ದೇವೆ. ಇದು ಜನರ ಧ್ವನಿಯಾಗಿದ್ದು, ಇದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಇರುವ ಪ್ರಜಾಸತ್ತಾತ್ಮಕ ಸಂಸ್ಥೆಗಳು ವಿಪಕ್ಷಗಳ ಪಾಲಿಗೆ ಮುಚ್ಚಿವೆ. ಹೀಗಾಗಿ ಜನರ ನೋವು ಆಲಿಸಲು ಅನಿವಾರ್ಯವಾಗಿ ‘ಭಾರತ ಐಕ್ಯತಾ ಯಾತ್ರೆ’ ಹಮ್ಮಿಕೊಂಡಿದ್ದೇವೆ. ಇದು ಜನರ ಧ್ವನಿ. ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ.
- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
Bharat Jodo Yatra: ರಾಹುಲ್ ಪಾದಯಾತ್ರೆಗೆ ಗುಂಡ್ಲುಪೇಟೆ ಸಜ್ಜು: 30 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
ಸಂವಿಧಾನವನ್ನು ಉಳಿಸಲು ಈ ಪಾದಯಾತ್ರೆ ಅನಿವಾರ್ಯವಾಗಿದೆ. ಯಾತ್ರೆ ತಡೆಯಲು ಬಿಜೆಪಿಗರು ಪೋಸ್ಟರ್‌ಗೆ ಮಸಿ ಬಳಿದು, ಹರಿದು ಹಾಕುವ ಕೆಲಸ ಮಾಡುತ್ತಿದ್ದಾರೆ. ಇದು ಮರುಕಳಿಸಿದರೆ ಬಿಜೆಪಿ ಯಾವ ನಾಯಕರೂ ಹೊರಗಡೆ ತಿರುಗಾಡದಂತಹ ಸ್ಥಿತಿ ನಿರ್ಮಿಸುತ್ತೇವೆ.
- ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ
ಈ ಯಾತ್ರೆ ಅಧಿಕಾರಕ್ಕಾಗಿ ಅಲ್ಲ. ಸಂವಿಧಾನ ಉಳಿಸಲು, ನಿರುದ್ಯೋಗ, ಭ್ರಷ್ಟಾಚಾರ, ಹಿಂಸೆ, ದ್ವೇಷಗಳ ವಿರುದ್ಧ ಹೋರಾಡಲು ಹಮ್ಮಿಕೊಂಡಿರುವ ಯಾತ್ರೆ. ರಾಹುಲ್‌ಗಾಂಧಿ ಅವರಿಗೆ 2, ಸೋನಿಯಾ ಗಾಂಧಿ ಅವರಿಗೆ 3 ಬಾರಿ ಪ್ರಧಾನಿ ಆಗಲು ಅವಕಾಶ ಸಿಕ್ಕಿತ್ತು. ಅವರು ಅಧಿಕಾರಕ್ಕಾಗಿ ಆಸೆಪಟ್ಟಿಲ್ಲ
- ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ