ಮುಂದಿನ 21 ದಿನಗಳ ಕಾಲ ಕರ್ನಾಟಕದ ರಾಜಕೀಯ ಮೇಲಾಟದ ಕೇಂದ್ರ ಬಿಂದುವಾಗಲಿದೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೈಗೊಂಡಿರುವ ‘ಭಾರತ್‌ ಜೋಡೋ’ ಯಾತ್ರೆ! 

ಎಸ್‌.ಗಿರೀಶ್‌ಬಾಬು

ಬೆಂಗಳೂರು (ಸೆ.30): ಮುಂದಿನ 21 ದಿನಗಳ ಕಾಲ ಕರ್ನಾಟಕದ ರಾಜಕೀಯ ಮೇಲಾಟದ ಕೇಂದ್ರ ಬಿಂದುವಾಗಲಿದೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೈಗೊಂಡಿರುವ ‘ಭಾರತ್‌ ಜೋಡೋ’ ಯಾತ್ರೆ! ದೇಶದಲ್ಲಿ ಒಗ್ಗಟ್ಟು ಮೂಡಿಸುವ ಅಭಿಲಾಷೆಯೊಂದಿಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು 20 ದಿನಗಳ ಕಾಲ ಕೇರಳದಲ್ಲಿ ಯಾತ್ರೆ ನಡೆಸಿ ಶುಕ್ರವಾರ ಕರ್ನಾಟಕ ಪ್ರವೇಶಿಸಲಿದ್ದಾರೆ. ಶುಕ್ರವಾರದಿಂದ ಮುಂದಿನ 21 ದಿನಗಳ ಕಾಲ ಕರುನಾಡಿನಲ್ಲಿ ಬೃಹತ್‌ ಯಾತ್ರೆಯನ್ನು ಅವರು ಕೈಗೊಳ್ಳಲಿದ್ದಾರೆ.

ಮೇಲುನೋಟಕ್ಕೆ ಈ ಯಾತ್ರೆ ದೇಶ ಒಗ್ಗೂಡಿಸುವ ಉದ್ದೇಶದ್ದು ಎಂದು ಹೇಳಲಾಗುತ್ತಿದ್ದರೂ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಇರುವ ಕರ್ನಾಟಕದಲ್ಲಿ ಮಾತ್ರ ಆಡಳಿತಾರೂಢ ಬಿಜೆಪಿ ಸರ್ಕಾರದ ಅಪಸವ್ಯಗಳನ್ನು ಪರೋಕ್ಷವಾಗಿ ಜನರ ಮುಂದಿಟ್ಟು ಕಾಂಗ್ರೆಸ್‌ ಪರ ಅಲೆ ಎಬ್ಬಿಸುವ ಉದ್ದೇಶವನ್ನು ಹೊಂದಿದೆ. ಈ ಸೂಚನೆ ಅರಿತಿರುವ ಬಿಜೆಪಿ ಸಹ ಯಾತ್ರೆ ಅವಧಿಯಲ್ಲೇ ಕಾಂಗ್ರೆಸ್‌ನ ಲೋಪದೋಷಗಳನ್ನು ದೊಡ್ಡ ಮಟ್ಟದಲ್ಲೇ ಜನರ ಮುಂದಿಡಲು ಸಿದ್ಧತೆ ನಡೆಸಿದೆ. ತನ್ಮೂಲಕ ಮುಂದಿನ 21 ದಿನಗಳ ಕಾಲ ಯಾತ್ರೆ ನೆಪದಲ್ಲಿ ದೊಡ್ಡ ರಾಜಕೀಯ ಮೇಲಾಟ ನಡೆಯುವುದು ಖಚಿತ ಎಂದೇ ನಿರೀಕ್ಷಿಸಬಹುದು.

ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಕೈ ಪಡೆ ಸಜ್ಜು!

30 ಸಾವಿರ ಜನರ ಸ್ವಾಗತ: ಶುಕ್ರವಾರ ಬೆಳಗ್ಗೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೂಲಕ ಕರುನಾಡು ಪ್ರವೇಶಿಸಲಿರುವ ರಾಹುಲ್‌ ಗಾಂಧಿ ಅವರ ಯಾತ್ರೆಗೆ ಭರ್ಜರಿ ಸ್ವಾಗತ ಕೋರಲು ಕಾಂಗ್ರೆಸ್‌ ಸಂಪೂರ್ಣವಾಗಿ ಅಣಿಯಾಗಿದೆ. ಈ ಯಾತ್ರೆಗಾಗಿಯೇ ಕಳೆದ ಒಂದು ತಿಂಗಳಿನಿಂದ ಸಿದ್ಧತೆ ನಡೆಸಿದ್ದ ಕೆಪಿಸಿಸಿ, ಯಾತ್ರೆ ರಾಜ್ಯದಲ್ಲಿ ಇರುವಷ್ಟುಕಾಲ ಪ್ರತಿಯೊಂದು ದಿನವೂ ನಡೆಯಬೇಕಾದ ಚಟುವಟಿಕೆಗಳ ಕ್ಷಣ ಕ್ಷಣದ ಯೋಜನೆಯನ್ನು ಸಿದ್ಧಪಡಿಸಿದೆ. ಕಾಂಗ್ರೆಸ್‌ ಕಾರ್ಯಕರ್ತರಿಂದ ಹಿಡಿದು ಮೇರು ನಾಯಕರವರೆಗೆ ಪ್ರತಿಯೊಬ್ಬರೂ ಈ ಯಾತ್ರೆಯಲ್ಲಿ ಒಂದಲ್ಲ ಒಂದು ರೀತಿ ಭಾಗಿದಾರರಾಗುವಂತೆ ಯೋಜನೆ ರೂಪಿಸಲಾಗಿದೆ. ಶುಕ್ರವಾರದ ಸ್ವಾಗತಕ್ಕೆ ಸುಮಾರು 30 ಸಾವಿರ ಮಂದಿ ಅಣಿಯಾಗಿದ್ದು, ರಾಹುಲ್‌ ಅವರೊಂದಿಗೆ ಹೆಜ್ಜೆ ಹಾಕಲಿದ್ದಾರೆ.

8 ಜಿಲ್ಲೆ, 511 ಕಿ.ಮೀ.: ಯಾತ್ರೆಯು ರಾಜ್ಯದ ಎಂಟು ಜಿಲ್ಲೆಗಳಲ್ಲಿ 21 ದಿನ ಸುಮಾರು 511 ಕಿ.ಮೀ ಸಂಚರಿಸಲಿದೆ. ಈ ಯಾತ್ರೆಯಲ್ಲಿ ಬೃಹತ್‌ ಕಾರ್ಯಕ್ರಮಗಳು ಒಂದೆರಡು ಮಾತ್ರ ಇರಲಿದ್ದು, ಉಳಿದಂತೆ ಅಸಂಖ್ಯ ಸಂವಾದ, ಜನರೊಂದಿಗೆ ನೇರ ಸಂಪರ್ಕದಂತಹ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳ ಪರೋಕ್ಷ ಉದ್ದೇಶ ಬಿಜೆಪಿ ಸರ್ಕಾರದ ಆಡಳಿತದ ವಿರುದ್ಧ ಜನರ ಭಾವನೆಗಳನ್ನು ಉದ್ದೀಪನಗೊಳಿಸುವುದು. ಈ ಕಾರ್ಯ ರಾಜ್ಯದಲ್ಲಿ ಯಾತ್ರೆಯ ಮೊದಲ ದಿನವಾದ ಶುಕ್ರವಾರವೇ ನಡೆಯಲಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಅವಧಿಯಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟ36 ಜನರ ಕುಟುಂಬಗಳೊಂದಿಗೆ ರಾಹುಲ್‌ ಗಾಂಧಿ ಸಂವಾದ ನಡೆಸಲಿದ್ದಾರೆ. 

ಇದಲ್ಲದೆ, ಜಿಲ್ಲೆಯ ಸೋಲಿಗ ಹಾಗೂ ಆದಿವಾಸಿ ಬುಡಕಟ್ಟು ಜನಾಂಗದ ಜತೆಯೂ ಅವರು ಸಂವಾದ ಮಾಡಲಿದ್ದಾರೆ. ಇಂತಹ ಸಂವಾದಗಳು ಎಲ್ಲಾ ಎಂಟು ಜಿಲ್ಲೆಗಳಲ್ಲೂ ನಡೆಯಲಿವೆ. ಮೈಸೂರಿಗೆ ಯಾತ್ರೆ ಆಗಮಿಸಿದಾಗ ಸಾಹಿತಿ ದೇವನೂರು ಮಹಾದೇವ ಅವರ ನೇತೃತ್ವದಲ್ಲಿ ಸಾಹಿತಿಗಳು ಹಾಗೂ ಬುದ್ಧಿಜೀವಿಗಳೊಂದಿಗೆ ರಾಹುಲ್‌ ಸಂವಾದ ನಡೆಸಲಿದ್ದಾರೆ. ಮಂಡ್ಯಕ್ಕೆ ಆಗಮಿಸಿದಾಗ ಪಾಂಡವಪುರ ಸಕ್ಕರೆ ಕಾರ್ಖಾನೆಗೆ ರಾಹುಲ್‌ ಗಾಂಧಿ ಭೇಟಿ ನೀಡಲಿದ್ದಾರೆ. ಅಲ್ಲದೆ, ಮಂಡ್ಯ ಜಿಲ್ಲೆಯಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಅದೇ ರೀತಿ ಪ್ರತಿಯೊಂದು ಜಿಲ್ಲೆಯ ತುಳಿತಕ್ಕೆ ಒಳಗಾದ ಸಮುದಾಯಗಳನ್ನು ಗುರಿಯಾಗಿಸಿ ಸಂವಾದ ನಡೆಸುವ ಮೂಲಕ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಿರ್ಲಕ್ಷ್ಯ ತೋರಿದ ಸಮುದಾಯ ಹಾಗೂ ವರ್ಗಗಳ ಅಳಲನ್ನು ಆಲಿಸಲಿದ್ದಾರೆ.

ಬಳ್ಳಾರಿಯಲ್ಲಿ ಸಮಾವೇಶ: ಈ ಸಂವಾದಗಳಿಗೆ ಮೇರು ಮುಕುಟವಾಗಿ ಯಾತ್ರೆ ಬಳ್ಳಾರಿ ಪ್ರವೇಶಿಸಿದಾಗ ಬೃಹತ್‌ ಸಾರ್ವಜನಿಕ ಸಮಾವೇಶವನ್ನು ಆಯೋಜಿಸಲಾಗಿದ್ದು, ಲಕ್ಷಾಂತರ ಜನರು ಸೇರುವ ಈ ಸಮಾವೇಶವನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಲಿದ್ದಾರೆ. ರಾಜ್ಯದಲ್ಲಿ ಭಾರತ್‌ ಜೋಡೋ ಕಳೆ ಕಟ್ಟುವಂತೆ ಮಾಡಲು ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೂ ಆಹ್ವಾನ ನೀಡಲಾಗಿದ್ದು, ಈ ಪೈಕಿ ಸೋನಿಯಾ ಗಾಂಧಿ ಅವರು ಸಮಾವೇಶ ಅಥವಾ ಸಂವಾದದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಇನ್ನೂ ಪ್ರಿಯಾಂಕಾ ಗಾಂಧಿ ಅವರು ತಮ್ಮ ಸಹೋದರನೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. 

ಆದರೆ, ಸೋನಿಯಾ ಹಾಗೂ ಪ್ರಿಯಾಂಕಾ ಅವರು ಯಾತ್ರೆಯಲ್ಲಿ ಪಾಲ್ಗೊಳ್ಳುವ ದಿನ ಇನ್ನೂ ನಿರ್ಧಾರವಾಗಿಲ್ಲ. ಯಾತ್ರೆಯಲ್ಲಿ ರಾಜ್ಯದ ಘಟಾನುಘಟಿ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಪ್ರತಿಯೊಬ್ಬರ ನೇರ ಪಾಲ್ಗೊಳ್ಳುವಿಕೆ ಇರುತ್ತದೆ. ಜತೆಗೆ, ಪ್ರತಿ 10 ಕಿ.ಮೀ. ಪಾದಯಾತ್ರೆಯ ಜವಾಬ್ದಾರಿಯನ್ನು ಶಾಸಕರು, ಮಾಜಿ ಶಾಸಕರು ಹಾಗೂ ಹಿರಿಯ ನಾಯಕರಿಗೆ ವಹಿಸಲಾಗಿದೆ. ತನ್ಮೂಲಕ ಇಡೀ ಕಾಂಗ್ರೆಸ್‌ನ ಧೀಶಕ್ತಿ ಮುಂದಿನ 21 ದಿನಗಳ ಕಾಲ ಭಾರತ್‌ ಜೋಡೋ ಯಾತ್ರೆಯ ಯಶಸ್ಸಿಗೆ ವಿನಿಯೋಗವಾಗಲಿದೆ.

ಗುಂಡ್ಲುಪೇಟೆಯಲ್ಲಿ ಭರ್ಜರಿ ಸಮಾವೇಶ
- 30 ಸಾವಿರ ಜನರನ್ನು ಸೇರಿಸಿ ರಾಹುಲ್‌ಗೆ ಸ್ವಾಗತ ರಾರ‍ಯಲಿ
- ಬೃಹತ್‌ ವೇದಿಕೆ ಸಿದ್ಧ: 3 ಸಾವಿರ ಕುರ್ಚಿಗಳ ವ್ಯವಸ್ಥೆ
- ಎಲ್ಲರಿಗೂ ಊಟ, ಉಪಾಹಾರ, ಐಸ್‌ಕ್ರೀಂ, ಬಾಳೆಹಣ್ಣು
- ಯಾತ್ರೆ ಆರಂಭದ ಸ್ಥಳದಲ್ಲಿ ಮೈಸೂರು ಅರಮನೆ ರೀತಿ ಕಮಾನು
- ಬಂಡೀಪುರ, ಗುಂಡ್ಲುಪೇಟೆ ಸುತ್ತ ಎಲ್ಲಾ ಲಾಡ್ಜ್‌ಗಳು ಭರ್ತಿ

ಕರ್ನಾಟಕದಲ್ಲಿ ರಾಹುಲ್‌ ಯಾತ್ರೆ ವೇಳೆ ಬಿಜೆಪಿ ಪೋಸ್ಟರ್‌ ವಾರ್‌

ಇಂದು ಏನೇನು ಕಾರ‍್ಯಕ್ರಮ?
ಬೆಳಗ್ಗೆ 9 ರಾಹುಲ್‌ ಗಾಂಧಿ ನಡಿಗೆ ಗುಂಡ್ಲುಪೇಟೆಗೆ ಆಗಮನ
ಬೆಳಗ್ಗೆ 10 ಅಂಬೇಡ್ಕರ್‌ ಭವನದ ಎದುರು ಬೃಹತ್‌ ಸಮಾವೇಶ
ಬೆಳಗ್ಗೆ 11.30 ಬುಡಕಟ್ಟು ಜನರು, ಆಕ್ಸಿಜನ್‌ ದುರಂತದಲ್ಲಿ ಮೃತರ ಕುಟುಂಬದ ಜೊತೆ ಸಂವಾದ
ಸಂಜೆ 4 ಗುಂಡ್ಲುಪೇಟೆಯಿಂದ ಪಾದಯಾತ್ರೆ ಆರಂಭ
ಸಂಜೆ 7 ಬೇಗೂರು ಹೊರವಲಯದಲ್ಲಿ ವಾಸ್ತವ್ಯ