ಕೆಆರ್‌ಎಸ್ ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಕಾಂಗ್ರೆಸ್ ನಡೆಯನ್ನು ವಿರೋಧಿಸಿ, ಆರ್. ಅಶೋಕ್ ಅವರು ಟಿಪ್ಪುವನ್ನು ನಾಡದ್ರೋಹಿ ಎಂದು ಕರೆದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯನ್ನು ಸ್ಮರಿಸಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯ (ಆ.4): KRS ಜಲಾಶಯಕ್ಕೆ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ ಅಶೋಕ್ ಅವರು, ಇವರು(ಕಾಂಗ್ರೆಸ್), ಟಿಪ್ಪು ಸುಲ್ತಾನ್ ಮೇಲೆ ಅಷ್ಟು ಪ್ರೀತಿ ಇದ್ದರೆ ಕಾಂಗ್ರೆಸ್ ತನ್ನ ಪಕ್ಷದ ಹೆಸರನ್ನೇ ಟಿಪ್ಪು ಸುಲ್ತಾನ್ ಪಾರ್ಟಿ ಎಂದಿಟ್ಟುಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ವೋಟಿಗೋಸ್ಕರ್ ಒಡೆಯರ್ ಅವಮಾನ ಮಾಡಿದೆ:

ಟಿಪ್ಪು ಸುಲ್ತಾನ್ 1799ರಲ್ಲಿ ಮೃತಪಟ್ಟಿದ್ದು, ಕೆಆರ್‌ಎಸ್ ಜಲಾಶಯದ ನಿರ್ಮಾಣ 1911ರಲ್ಲಿ ಆರಂಭವಾಯಿತು. ಬರೋಬ್ಬರಿ 112 ವರ್ಷಗಳ ನಂತರ ಡ್ಯಾಂ ಕಟ್ಟಲಾಗಿದ್ದು, ಟಿಪ್ಪು ಶಂಕುಸ್ಥಾಪನೆ ಮಾಡಿದ್ದರೆ ಆಗಲೇ ಈ ಹೆಸರು ಇಡಬೇಕಿತ್ತಲ್ವ? ಎಂದು ಪ್ರಶ್ನಿಸಿದ ಇವರು, ಡ್ಯಾಂಗೆ ಟಿಪ್ಪು ಹೆಸರು ಹೇಳುತ್ತಿರುವುದು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರಲ್ಲದೇ ಟಿಪ್ಪು ಸುಲ್ತಾನನೊಬ್ಬ ನಾಡದ್ರೋಹಿ, ಪರ್ಶಿಯಾದವನು, ಮತಾಂಧ, ಸಾವಿರಾರು ಹಿಂದೂಗಳನ್ನು ಕೊಂದು ದೇವಾಲಯಗಳನ್ನು ಕೆಡವಿದವನು ಅಂತವನ ಹೆಸರು ಕೆಆರ್‌ಎಸ್ ಗೆ ಇಡಲು ಹೊರಟಿರುವುದು ಕಾಂಗ್ರೆಸ್‌ ಮನಸ್ಥಿತಿಯನ್ನ ತೋರಿಸಿದೆ ಎಂದು ಕಿಡಿಕಾರಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮೈಸೂರಿನ ಮಹಾಶಿಲ್ಪಿ:

ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಹಳೇ ಮೈಸೂರು ಸಾಕಷ್ಟು ಅಭಿವೃದ್ಧಿ ಕಂಡಿತ್ತು.ಕೆಆರ್‌ಎಸ್ ಜಲಾಶಯ ನಿರ್ಮಾಣಕ್ಕೆ ಯಾರ ಮೇಲೂ ತೆರಿಗೆ ಹಾಕಿರಲಿಲ್ಲ. ಆದರೆ ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ 2 ಲಕ್ಷ ಕೋಟಿ ಸಾಲ ಮಾಡಿ, ಜನರ ಮೇಲೆ ತೆರಿಗೆಯ ಬರೆ ಎಳೆದಿದೆ. ಇಂಥ ಮುಖ್ಯಮಂತ್ರಿಯನ್ನ ನಾಲ್ವಡಿ ಹೋಲಿಕೆ ಮಾಡುವುದು ಕೂಡ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ್ದಾರೆ.

ಎರಡು ವರ್ಷ ಎಲ್ಲಿದ್ಯಪ್ಪ ರಾಹುಲ್ ಗಾಂಧಿ? ಅಶೋಕ್ ವ್ಯಂಗ್ಯ:

ರಾಹುಲ್ ಗಾಂಧಿಯವರ ಬಗ್ಗೆಯೂ ಕಿಡಿಕಾರಿದ ಆರ್ ಅಶೋಕ್, ಎರಡು ವರ್ಷ ಎಲ್ಲೋ ಇದ್ದ ರಾಹುಲ್ ಗಾಂಧಿ, ಈಗ ಚುನಾವಣೆಗೋಸ್ಕರ ಕರ್ನಾಟಕಕ್ಕೆ ಬಂದಿದ್ದಾರೆ. 2 ಸಾವಿರ ರೈತ ಆತ್ಮ ೧ಹತ್ಯೆ, ಗರ್ಭಿಣಿಯರ ಸಾವು, ಮೈಕ್ರೋ ಫೈನಾನ್ಸ್‌ನಿಂದ ಸಾವುಗಳಾದವು ಆಗ ಯಾಕೆ ಬರಲಿಲ್ಲ? ಎಂದು ಪ್ರಶ್ನಿಸಿದರು ಮುಂದುವರಿದು, ಕಾಂಗ್ರೆಸ್‌ನ ಚುನಾವಣಾ ಅಕ್ರಮಗಳನ್ನು ಹೋರಾಟವನ್ನು ಭೂತದ ಕೈಯಲ್ಲಿ ಭಗವದ್ಗೀತೆ ಗೆ ಹೋಲಿಸಿದರು. ರಾಹುಲ್ ಗಾಂಧಿ ಅದೇನು ಬಾಂಬ್ ಹಾಕ್ತಾರೋ ಹಾಕಲಿ ನೋಡೋಣ ಎಂದು ಸವಾಲು ಹಾಕಿದ ಆರ್ ಅಶೋಕ್ ಅವರು ಕನಕಪುರ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂಬ ಕಾಂಗ್ರೆಸ್‌ನ ಆರೋಪಗಳನ್ನು ತಳ್ಳಿಹಾಕಿದರು ಇವರು, ನಾಳೆ ವಿಧಾನಸೌಧದ ಮುಂದೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ:

ಸಾರಿಗೆ ನೌಕರರ ಪ್ರತಿಭಟನೆ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ ಆರ್ ಅಶೊಕ್,ನಾನು ಸಾರಿಗೆ ಸಚಿವನಾಗಿದ್ದಾಗ ಅವರ ಬೇಡಿಕೆ ಈಡೇರಿಸಿದ್ದೆ. ಆದರೆ ಕಾಂಗ್ರೆಸ್ ಸರ್ಕಾರ 4 ವರ್ಷದ ಬಾಕಿ ಕೊಡದೆ, ಜನರಿಗೆ ತೊಂದರೆ ಉಂಟುಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ತಕ್ಷಣ ಬೇಡಿಕೆ ಈಡೇರಿಸಲಿ ಎಂದು ಒತ್ತಾಯಿಸಿದ್ದಾರೆ. 'ಸರ್ಕಾರದ ಖಜಾನೆ ಖಾಲಿಯಾಗಿದೆ, ಜನರನ್ನು ಕೊಳ್ಳೆಹೊಡೆಯಲಾಗುತ್ತಿದೆ. ಸರ್ಕಾರಿ ನೌಕರರಿಗೆ ಸಂಬಳವೂ ಸರಿಯಾಗಿ ಸಿಗುತ್ತಿಲ್ಲ' ಎಂದು ಆರೋಪಿಸಿದ್ದಾರೆ.