ಸಚಿವ ಮಹಾದೇವಪ್ಪ ಮತ್ತೆ ಟಿಪ್ಪು ವಿವಾದ ಕೆದಕಿ ಇದೀಗ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆಕಡೆ ಅಲ್ಲಾಹು ಅಕ್ಬರ್, ಈಕಡೆ ಗಂಟೆ ಟನ್ ಟನ್ ಮೂಲಕ ಟಿಪ್ಪು ಸರ್ವಧರ್ಮ ಸಹಿಷ್ಣುವಾಗಿದ್ದರು. ಕೆಆರ್‌ಎಸ್ ಡ್ಯಾಂಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಎಂದು ಸಚಿವ ಮಹಾದೇವಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಡ್ಯ (ಆ.03) ಕಾಂಗ್ರೆಸ್ ಸಚಿವ ಹೆಚ್‌ಸಿ ಮಹದೇವಪ್ಪ ಇದೀಗ ಟಿಪ್ಪು ಹಾಡಿ ಹೊಗಳುವ ಭರದಲ್ಲಿ ಮೈಸೂರು ಒಡೆಯರ ಸಾಧನ ಕಡೆಗಣಿಸಿದ್ದು ಮಾತ್ರವಲ್ಲ ಭಾರಿ ವಿವಾದ ಸೃಷ್ಟಿಸಿದ್ದಾರೆ. ಕೆಆರ್‌ಎಸ್ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಹೆಚ್‌ಸಿ ಮಹದೇವಪ್ಪ ಹೇಳಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಹೆಚ್‌ಸಿ ಮಹದೇವಪ್ಪ, ಟಿಪ್ಪು ವಿಚಾರ ಕೆದಕಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜರ್ಷಿ ನಾಲ್ವಡಿ ಒಡೆಯರ್ ಪುಣ್ಯ ಸ್ಮರಣೆ ದಿನ ಸಚಿವರ ವಿವಾದ

ಕನ್ನಂಬಾಡಿ ಕಟ್ಟೊದಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು. ಕೆಆರ್‌ಎಸ್ ಹೆಬ್ಬಾಗಲಿನಲ್ಲಿ ಟಿಪ್ಪು ಅಡಿಗಲ್ಲು ಇತಿಹಾಸ ಕಾಣಬಹದು ಎಂದಿದ್ದಾರೆ. ಆದರೆ ಇದನ್ನು ಹೇಳಲು ಈಗ ಯಾರಿಗೂ ಧೈರ್ಯ ಇಲ್ಲ ಎಂದು ತಾನು ಅತ್ಯಂತ ಧೈರ್ಯಶಾಲಿಯಾಗಿ ಈ ವಿಚಾರ ಹೇಳುತ್ತಿದ್ದೇನೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಮೈಸೂರು ರಾಜರ್ಷಿ ನಾಲ್ವಡಿ ಒಡೆಯರ್ ಪುಣ್ಯ ಸ್ಮರಣೆ ದಿನದಂದೇ ಸಚಿವ ಹೆಚ್‌ಸಿ ಮಹದೇವಪ್ಪ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟಿಪ್ಪು ಹೊಗಳುವ ಭರದಲ್ಲಿ ಹೆಚ್‌ಸಿ ಮಹದೇವಪ್ಪ ಮೈಸೂರು ಒಡೆಯರ್ ಸಾಧನೆಯನ್ನು ಕಡೆಗಣಿಸಿದ್ದಾರೆ.

ಟಿಪ್ಪು ಧರ್ಮ ಸಹಿಷ್ಣು ಆಗಿದ್ದ ಎಂದ ಸಚಿವ

ಟಿಪ್ಪು ಧರ್ಮ ಸಹಿಷ್ಣು ಆಗಿದ್ದ ಎಂದು ಹೇಳಲು ಸಚಿವ ಹೆಚ್‌ಸಿ ಮಹದೇವಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಟಿಪ್ಪು ಮಸೀದಿ ಪಕ್ಕದಲ್ಲೇ ದೇವಸ್ಥಾನ ಇದೆ. ಈಕಡೆ ಅಲ್ಲಾಹು ಅಕ್ಬರ್, ಆಕಡೆ ಗಂಟೆ ಟನ್ ಟನ್ ಅಂತಾರೆ. ಟಿಪ್ಪು ಎರಡನ್ನು ಕೇಳುತ್ತಿದ್ದರು ಎಂದು ಭಾರಿ ವಿವಾದ ಸೃಷ್ಟಿಸಿದ್ದಾರೆ. ಟಿಪ್ಪು ಸಮಚಿತ್ತರಾಗಿದ್ದರು. ಹೀಗಾಗಿ ಮಸೀದಿ ಪಕ್ಕದಲ್ಲೇ ದೇವಸ್ಥಾನವೂ ಪ್ರತಿ ದಿನದ ಪೂಜೆ ಪುನಸ್ಕಾರಗಳು ನಡೆಯುತ್ತಿತ್ತು ಎಂದು ಹೆಚ್‌ಸಿ ಮಹದೇವಪ್ಪ ಹೇಳಿದ್ದಾರೆ.

ದೇವದಾಸಿ ಪದ್ದತಿ ರದ್ದು ಮಾಡಿದ್ದ ಟಿಪ್ಪು

ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದಿರುವ ಹೆಚ್‌ಸಿ ಮಹದೇವಪ್ಪ ಟಿಪ್ಪು ಭಾರತದಲ್ಲಿದ್ದ ದೇವದಾಸಿ ಪದ್ದತಿ ರದ್ದು ಮಾಡಿ ಹೊಸ ಕ್ರಾಂತಿ ಮಾಡಿದ್ದರು ಎಂದಿದ್ದಾರೆ. ಆ ಕಾಲದಲ್ಲಿ ದೇವದಾಸಿ ಪದ್ದತಿ ರದ್ದು ಮಾಡಿದ ಕೀರ್ತಿ ಟಿಪ್ಪುಗೆ ಸಲ್ಲಲಿದೆ. ಇದು ಶೋಷಿತ ಮಹಿಳೆಯರನ್ನು ಕೂಪಕ್ಕೆ ದೂಡುತ್ತಿದ್ದ ಪದ್ಧತಿಯಾಗಿತ್ತು. ಆದರೆ ಟಿಪ್ಪು ಇದಕ್ಕೆ ಅಂತ್ಯ ಹಾಡಿದ್ದರು ಎಂದಿದ್ದಾರೆ.

ಟಿಪ್ಪು ಸ್ವಾತಂತ್ರ್ಯ ಸೇನಾನಿ ಎಂದ ಸಚಿವ

ಟಿಪ್ಪು ಅತೀ ದೊಡ್ಡ ಸ್ವಾತಂತ್ರ್ಯ ಸೇನಾನಿ ಎಂದು ಹೆಚ್‌ಸಿ ಮಹದೇವಪ್ಪ ಬಣ್ಣಿಸಿದ್ದಾರೆ. ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಟಿಪ್ಪು ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ ಎಂದಿದ್ದಾರೆ. ಇದ್ಯಾವುದನ್ನು ಅರ್ಥ ಮಾಡಿಕೊಳ್ಳದ ಹಲವರು ಸ್ವತಂತ್ರ ಚಳವಳಿಗಳನ್ನ ಟೀಕಿಸುತ್ತಾರೆ ಎಂದಿದ್ದಾರೆ. ಭಾರತ ದೇಶಕ್ಕೆ ಸಿರಿಕಲ್ಚರ್ ರೇಷ್ಮೆ ತಂದಿದ್ದೆ ಟಿಪ್ಪು. ಇಷ್ಟೇ ಅಲ್ಲ, ಮೈಸೂರಿನ ಅರಮನೆ ಇದ್ದಿದ್ದು ಶ್ರೀರಂಗಪಟ್ಟಣದಲ್ಲೇ ಎಂದು ಟಿಪ್ಪು ಹಾಡಿಹೊಗಳಿದ್ದಾರೆ.

ಕರ್ನಾಟಕದಲ್ಲಿ ಟಿಪ್ಪು ವಿವಾದ

ಕರ್ನಾಟಕದಲ್ಲಿ ಟಿಪ್ಪು ಕುರಿತು ಸಾಕಷ್ಟು ವಿವಾದಗಳು ನಡೆದಿದೆ. ಪರ ವಿರೋಧಗಳು, ಚರ್ಚೆಗಳು ನಡೆದಿದೆ. ಟಿಪ್ಪು ಜಯಂತಿ ಸೇರಿದಂತೆ ಹಲವು ಘಟನೆಗಳು ರಾಜ್ಯದಲ್ಲಿ ಭಾರಿ ಆಕ್ರೋಶ, ಪ್ರತಿಭಟನೆಗಳಿಗೂ ಕಾರಣವಾಗಿತ್ತು.