ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾದ ದಾಖಲೆಗಳು ಅಸ್ಪಷ್ಟವಾಗಿದೆ ಎಂಬ ಕಾರಣಕ್ಕೆ ಅಭ್ಯರ್ಥಿಗೆ ನೇಮಕಾತಿ ಪ್ರಾಧಿಕಾರ ನ್ಯಾಯ ನಿರಾಕರಿಸಲಾಗದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಬೆಂಗಳೂರು ನ(.14) :  ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾದ ದಾಖಲೆಗಳು ಅಸ್ಪಷ್ಟವಾಗಿದೆ ಎಂಬ ಕಾರಣಕ್ಕೆ ಅಭ್ಯರ್ಥಿಗೆ ನೇಮಕಾತಿ ಪ್ರಾಧಿಕಾರ ನ್ಯಾಯ ನಿರಾಕರಿಸಲಾಗದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ ಜಾತಿ ಪ್ರಮಾಣ ಪತ್ರ ಸರಿಯಾಗಿ ಕಾಣುತ್ತಿಲ್ಲ ಎಂಬ ಕಾರಣಕ್ಕೆ ತಮ್ಮನ್ನು ಮೀಸಲು ಕೋಟಾ ಬದಲು ಸಾಮಾನ್ಯ ವರ್ಗದಡಿ ಪರಿಗಣಿಸಿದ್ದ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್‌) ಕ್ರಮ ಪ್ರಶ್ನಿಸಿ ಬೆಂಗಳೂರಿನ ಯಶವಂತಪುರದ ನಿವಾಸಿ ಪಿ.ಆರ್‌. ದೇವರಾಜ್‌ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ.

ಅಪಘಾತದ ದೂರಿಗೆ ವಿಳಂಬ ಮಾಡಿದ ಸಾರಿಗೆ ನಿಗಮ, ಚಾಲಕ, ಕಂಡಕ್ಟರ್‌ಗೆ ₹17 ಲಕ್ಷ ದಂಡ!

ಅಲ್ಲದೆ, ಮೇಲ್ಮನವಿದಾರನ ಜಾತಿ ಪ್ರಮಾಣ ಪತ್ರ ನೈಜತೆ ಅಥವಾ ಮಾನ್ಯತೆ ಬಗ್ಗೆ ಯಾವುದೇ ವಿವಾದವಿಲ್ಲ. ಅದನ್ನು ಮೇಲ್ಮನವಿದಾರ ಕೆಎಂಎಫ್‌ ವೆಬ್‌ಸೈಟ್‌ನಲ್ಲಿ ಸಕಾಲಕ್ಕೆ ಅಪ್‌ಲೋಡ್‌ ಮಾಡಿದ್ದಾರೆ. ಆದರೆ, ಅದು ಅಸ್ಪಷ್ಟವಾಗಿದೆ ಎಂಬುದಷ್ಟೇ ದೂರಾಗಿದೆ. ಅಸ್ಪಷ್ಟವಾಗಿದ್ದಾಗ ನೇಮಕಾತಿ ಪ್ರಾಧಿಕಾರ ಅಭ್ಯರ್ಥಿಯಿಂದ ಮತ್ತೊಮ್ಮೆ ದಾಖಲೆ ಅಪ್‌ಲೋಡ್‌ ಮಾಡಲು ಕೇಳಹುದಿತ್ತು ಅಥವಾ ದಾಖಲೆ ಪರಿಶೀಲನೆಗೆ ಕರೆಯಬಹುದಾಗಿತ್ತು. ಆದ್ದರಿಂದ ಮೇಲ್ಮನವಿದಾರನ ಜಾತಿ/ಸಾಮಾಜಿಕ ಸ್ಥಿತಿಗತಿಯ ಪ್ರಮಾಣ ಪತ್ರವನ್ನು ಎರಡು ವಾರದಲ್ಲಿ ಪರಿಗಣಿಸಬೇಕು. ನಂತರದ ನಾಲ್ಕು ವಾರದಲ್ಲಿ ಸೂಪರ್‌ನ್ಯೂಮರಿ ಹುದ್ದೆ ಸೃಷ್ಟಿಸಿ ಮೇಲ್ಮನವಿದಾರನನ್ನು ಮೀಸಲು ಕೋಟಾದಡಿ ಆಯ್ಕೆಗೆ ಪರಿಗಣಿಸಬೇಕು ಎಂದು ಒಕ್ಕೂಟಕ್ಕೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ::

ಲೆಕ್ಕ ಸಹಾಯಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿ ಕೆಎಂಎಫ್ 2022ರ ಅ.20ರಂದು ಅಧಿಸೂಚನೆ ಹೊರಡಿಸಿತ್ತು. ಮೇಲ್ಮನವಿದಾರ ದೇವರಾಜ್‌ ಜಾತಿ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಕೆಎಂಎಫ್‌ ಅಧಿಕೃತ ವೆಬ್‌ಸೈಟ್‌ಗೆ ಆನ್‌ಲೈನ್‌ ಮೂಲಕ ಅಪ್ಲೋಡ್ ಮಾಡಿದ್ದರು. ಬಳಿಕ ಪರೀಕ್ಷೆಗೆ ಹಾಜರಾಗಿ 114 ಅಂಕ ಪಡೆದಿದ್ದರು. ಆದರೆ, ಅವರು ಅಪ್ಲೋಡ್ ಮಾಡಿದ್ದ ಜಾತಿ ಪ್ರಮಾಣ ಪತ್ರ ಅಸ್ಪಷ್ಟವಾಗಿ ಕಾಣುತ್ತಿತ್ತು ಎಂಬ ಕಾರಣಕ್ಕೆ ಆತನನ್ನು ಮೀಸಲು ಕೋಟಾ ಬದಲು ಸಾಮಾನ್ಯ ಅಭ್ಯರ್ಥಿಯಾಗಿ ಪರಿಗಣಿಸಲಾಗಿತ್ತು. ಆ ಕ್ರಮ ಪ್ರಶ್ನಿಸಿ ಆತ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿತ್ತು. ಇದರಿಂದ ಆತ ವಿಭಾಗೀಯ ಪೀಠದ ಮೊರೆ ಹೋಗಿದ್ದ.

ಕೆಎಂಎಫ್ ಪರ ವಕೀಲರು, ಅಸ್ಪಷ್ಟ ದಾಖಲೆಗಳನ್ನು ತಿರಸ್ಕರಿಸುವುದಾಗಿ ನೇಮಕಾತಿ ಅಧಿಸೂಚನೆಯ ಷರತ್ತಿನಲ್ಲಿ ತಿಳಿಸಲಾಗಿದೆ. ಸಾವಿರಾರು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿರುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಗೆ ಸಮಸ್ಯೆಯಾಗಿದೆ ಎಂಬ ಕಾರಣದಿಂದ ಅದನ್ನು ಸರಿಪಡಿಸಲಾಗದು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ವೃದ್ಧ ಪೋಷಕರ ಆರೈಕೆ ಮಾಡುವ ಜವಾಬ್ದಾರಿ ಮಕ್ಕಳದು: ಹೈಕೋರ್ಟ್‌

ಆ ವಾದ ತಿರಸ್ಕರಿಸಿದ ವಿಭಾಗೀಯ ಪೀಠ, ಉದ್ಯೋಗ ನೇಮಕಾತಿ ಪ್ರಾಧಿಕಾರವು ಸರ್ಕಾರದ ಸಂಸ್ಥೆಯಾಗಿರುತ್ತದೆ. ಉದ್ಯೋಗಕ್ಕಾಗಿ ಹೋರಾಟ ನಡೆಸುವ ವ್ಯಕ್ತಿ ಮೂಲಭೂತ ಹಕ್ಕು ಹೊಂದಿರುತ್ತಾರೆ. ಆತನ ಅರ್ಜಿಯನ್ನು ಸಂವಿಧಾನದ ಅಡಿಯಲ್ಲಿ ಪರಿಗಣಿಸಬೆಕಾಗುತ್ತದೆ. ನೇಮಕಾತಿಯಲ್ಲಿ ಉಂಟಾದ ದೋಷಕ್ಕೆ ನೇಮಕಾತಿ ಪ್ರಾಧಿಕಾರವೇ ಕಾರಣವಾದಾಗ, ಅದನ್ನು ಅದನ್ನು ಸರಿಪಡಿಸಲು ಕಷ್ಟವಾಗುತ್ತದೆ ಎಂಬುದಾಗಿ ವಾದಿಸಲಾಗದು. ನೇಮಕಾತಿಯಲ್ಲಿನ ಅಕ್ರಮವನ್ನು ಸಮಾಜದಲ್ಲಿ ಸರಿಯಾದ ಚಿಂತನೆ ನಡೆಸುವ ಜನ ಅನುಮೋದಿಸುವುದೇ ಇಲ್ಲ. ನೇಮಕಾತಿ ಪ್ರಾಧಿಕಾರ ತನ್ನ ಪೋರ್ಟಲ್‌ಗೆ ಅಪ್‌ಲೋಡ್‌ ಮಾಡಲಾದ ದಾಖಲೆಗಳು ಅಸ್ಪಷ್ಟವಾಗಿದೆ ಎಂಬ ಕಾರಣಕ್ಕೆ ಅಭ್ಯರ್ಥಿಗೆ ನ್ಯಾಯವನ್ನು ನಿರಾಕರಿಸಲಾಗದು. ಅರ್ಹ ಉದ್ಯೋಗ ಆಕಾಂಕ್ಷಿಗಳನ್ನು ನೇಮಕಾತಿಯಿಂದ ದೂರವಿಡುವುದು ಕಲ್ಯಾಣ ರಾಜ್ಯದಲ್ಲಿ ಸಂತೋಷದ ಸಂಗತಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.