Asianet Suvarna News Asianet Suvarna News

ವೃದ್ಧ ಪೋಷಕರ ಆರೈಕೆ ಮಾಡುವ ಜವಾಬ್ದಾರಿ ಮಕ್ಕಳದು: ಹೈಕೋರ್ಟ್‌

ಜೀವನದ ಸಂಧ್ಯಾಕಾಲದಲ್ಲಿರುವ ಪೋಷಕರನ್ನು ಆರೈಕೆ ಮಾಡುವ ಜವಾಬ್ದಾರಿಯನ್ನು ಕಾನೂನು, ಧರ್ಮ ಮತ್ತು ನೈತಿಕತೆಯು ಮಕ್ಕಳ ಮೇಲೆ ಹೇರುತ್ತದೆ. ಪೋಷಕರ ಆಸ್ತಿಯನ್ನು ಮಕ್ಕಳು ಉಡುಗೊರೆಯಾಗಿ ಪಡೆದಾಗ ಈ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

Childrens responsibility to take care of elderly parents says karnataka highcourt rav
Author
First Published Nov 13, 2023, 5:00 AM IST

ಬೆಂಗಳೂರು (ನ.13):  ಜೀವನದ ಸಂಧ್ಯಾಕಾಲದಲ್ಲಿರುವ ಪೋಷಕರನ್ನು ಆರೈಕೆ ಮಾಡುವ ಜವಾಬ್ದಾರಿಯನ್ನು ಕಾನೂನು, ಧರ್ಮ ಮತ್ತು ನೈತಿಕತೆಯು ಮಕ್ಕಳ ಮೇಲೆ ಹೇರುತ್ತದೆ. ಪೋಷಕರ ಆಸ್ತಿಯನ್ನು ಮಕ್ಕಳು ಉಡುಗೊರೆಯಾಗಿ ಪಡೆದಾಗ ಈ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ತಂದೆಯಿಂದ ಆಸ್ತಿಯನ್ನು ಉಡುಗೊರೆಯಾಗಿ ಪಡೆದ ನಂತರ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದ ಪುತ್ರಿ ಮತ್ತು ಅಳಿಯನ ವರ್ತನೆ ಗಮನಿಸಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

 

ನೌಕರನ ರಾಜೀನಾಮೆ ವಾಪಸ್ ಹಕ್ಕು ಪತ್ನಿಗಿಲ್ಲ: ಹೈಕೋರ್ಟ್

ತಂದೆಯಿಂದ ಆಸ್ತಿಯನ್ನು ಗಿಫ್ಟ್‌ ಡೀಡ್‌ (ಉಡುಗೊರೆ ಕ್ರಯ) ಆಗಿ ಪಡೆದಿರುವುದನ್ನು ಅಮಾನ್ಯಗೊಳಿಸಿದ್ದ ತುಮಕೂರು ವಲಯದ ‘ಪೋಷಕರ ಕಲ್ಯಾಣ ಮತ್ತು ಹಿರಿಯ ನಾಗರಿಕರ ನಿರ್ವಹಣೆ ಕಾಯ್ದೆಯಡಿಯ ನ್ಯಾಯಾಧಿಕರಣ’ದ ಉಪ ವಿಭಾಗಾಧಿಕಾರಿಯ ಆದೇಶ ಮತ್ತು ಅದನ್ನು ಎತ್ತಿಹಿಡಿದಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠದ ತೀರ್ಪನ್ನು ವಿಭಾಗೀಯ ಪೀಠ ಪುರಸ್ಕರಿಸಿದೆ.

ವಯಸ್ಸಾದ ತಂದೆ ಮತ್ತು ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಹೊಣೆಗಾರಿಕೆಯಾಗಿದೆಯೇ ಹೊರತು ದಯೆ-ದಾನದ ವಿಚಾರವಲ್ಲ. ವೃದ್ಧಾಪ್ಯ ತಂದೆ-ತಾಯಿಯನ್ನು ಆರೈಕೆ ಮಾಡುವುದು ಮಕ್ಕಳ ಶಾಸನಬದ್ಧ ಜವಾಬ್ದಾರಿ. ‘ರಕ್ಷಂತಿ ಸ್ಥಾವಿರೇ ಪುತ್ರ’ ಎಂದು ಸಹಸ್ರಾರು ವರ್ಷಗಳಿಂದ ಈ ದೇಶದ ಧರ್ಮಗ್ರಂಥಗಳು ಸಾರುತ್ತವೆ. ಜೀವನ ಸಂಧ್ಯಾಕಾಲದಲ್ಲಿರುವ ತಂದೆ-ತಾಯಿಯನ್ನು ಮಕ್ಕಳು ನೋಡಿಕೊಳ್ಳುವುದೇ ಧರ್ಮ ಎನ್ನುವುದೇ ಅದರ ಅರ್ಥ ಎಂದು ಹೈಕೋರ್ಟ್‌ ಉಲ್ಲೇಖಿಸಿತು.

ಈ ಪ್ರಕರಣದಲ್ಲಿ ಪುತ್ರಿ ಪೋಷಕರ ಆಸ್ತಿಯನ್ನು ಉಡುಗೊರೆಯಾಗಿ ಪಡೆದುಕೊಂಡ ನಂತರ ಅವರನ್ನು ಆರೈಕೆ ಮಾಡಿಲ್ಲ. ಅಷ್ಟೇ ಅಲ್ಲ ಪೋಷಕರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿರುವುದು ಬಹಳ ನೋವಿನ ಸಂಗತಿ. ಪೋಷಕರಿಗೆ ಮಕ್ಕಳು ಕಿರುಕುಳ ನೀಡುವ ಹಲವು ಪ್ರಕರಣಗಳು ಅನೇಕ ಕಾರಣಗಳಿಂದ ಬೆಳಕಿಗೆ ಬರುವುದೇ ಇಲ್ಲ. ಈ ರೀತಿಯ ಹಲವು ಪ್ರಕರಣಗಳನ್ನು ನ್ಯಾಯಾಲಯ ಗಮನಿಸುತ್ತಿರುವುದು ಹೃದಯ ಭಾರವಾಗುವ ವಿಚಾರ. ಇದು ಸ್ವೀಕಾರಾರ್ಹ ಹಾಗೂ ಒಪ್ಪುವಂತಹ ಬೆಳವಣಿಗೆಯಲ್ಲ. ಇಂತಹ ವಿಷಯಗಳಲ್ಲಿ ನ್ಯಾಯಾಲಯಗಳು, ಅಧಿಕಾರಿಗಳು ಮತ್ತು ನ್ಯಾಯಮಂಡಳಿಗಳು ಹೆಚ್ಚಿನ ಜಾಗರೂಕತೆಯಿಂದ ಮತ್ತು ಕಟ್ಟುನಿಟ್ಟಾಗಿ ನಿರ್ವಹಿಸಬೇಕಾಗುತ್ತದೆ ಎಂದು ವಿಭಾಗೀಯ ಪೀಠ ನುಡಿದಿದೆ.

ಪ್ರಕರಣದ ವಿವರ:

ತುಮಕೂರಿನ ಗುಬ್ಬಿ ತಾಲೂಕಿನ ಬಸವಪಟ್ಟಣದ ಆರ್‌. ಕವಿತಾ ಅವರಿಗೆ ತಂದೆ ರಾಜಶೇಖರಯ್ಯ ತಮ್ಮ ಆಸ್ತಿಯನ್ನು 2018ರ ಸೆ.28ರಂದು ಉಡುಗೊರೆಯಾಗಿ ನೀಡಿದ್ದರು. ಆದರೆ, ಕೆಲ ದಿನಗಳ ನಂತರ ಪೋಷಕರ ಕಲ್ಯಾಣ ಮತ್ತು ಹಿರಿಯ ನಾಗರಿಕರ ನಿರ್ವಹಣಾ ಕಾಯ್ದೆ-2007ರ ನಿಬಂಧನೆಗಳ ಅಡಿಯಲ್ಲಿ ಉಪ ವಿಭಾಗಾಧಿಕಾರಿ ಮುಂದೆ ಅರ್ಜಿ ಸಲ್ಲಿಸಿದ್ದ ರಾಜಶೇಖರಯ್ಯ ಅವರು, ಆಸ್ತಿಯನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಮನೆ ನಿರ್ಮಾಣಕ್ಕೆ 10 ಲಕ್ಷ ರು. ಹಣ ತೆಗೆದುಕೊಂಡಿದ್ದಾರೆ. ತಮ್ಮ ಸಾಲ ತೀರಿಸಲು ಜಮೀನು ಆಸ್ತಿ ಮಾರಲು ಒತ್ತಾಯಿಸಿದ್ದರು ಎಂದು ಆಕ್ಷೇಪಿಸಿದ್ದರು.

ಸುಳ್ಳು ಅಟ್ರಾಸಿಟಿ ಕೇಸಿಂದ ನೈಜ ಸಂತ್ರಸ್ತರಿಗೆ ತೊಂದರೆ: ಹೈಕೋರ್ಟ್‌

ಅದನ್ನು ಅಲ್ಲಗಳೆದಿದ್ದ ಕವಿತಾ, ತಂದೆ ರಾಜಶೇಖರಯ್ಯ ಮತ್ತು ತಾಯಿ ನಿರ್ಮಲಾ ಅವರನ್ನು ತಾವೇ ಆರೈಕೆ ಮಾಡುತ್ತಿದ್ದೇವೆ. ತಂದೆಯ ವೈದ್ಯಕೀಯ ಚಿಕಿತ್ಸೆಗಾಗಿ 30 ಲಕ್ಷ ರು. ಹಣವನ್ನು ಖರ್ಚು ಮಾಡಿದ್ದೇವೆ ಎಂದು ತಿಳಿಸಿದ್ದರು. ಆದರೆ, ಪೋಷಕರನ್ನು ನೋಡಿಕೊಳ್ಳುವುದಾಗಿ ಹೇಳುವಆಸ್ತಿ ಉಡುಗೊರೆ ಕ್ರಯದ ಷರತ್ತನ್ನು ಒಪ್ಪಿದ್ದ ಕವಿತಾ, ಬಳಿಕ ರಾಜಶೇಖರಯ್ಯ ಮೇಲೆ ಹಲ್ಲೆ ನಡೆಸಿ, ಪತ್ನಿ ನಿರ್ಮಲಾ ಸಹಿತ ಮನೆಯಿಂದ ಹೊರಹಾಕಿದ್ದನ್ನು ಗಮನಿಸಿದ್ದ ಉಪ ವಿಭಾಗಾಧಿಕಾರಿಯು ಆಸ್ತಿ ಉಡುಗೊರೆ ಕ್ರಯವನ್ನು 2021ರ ಫೆ.24ಂದು ಅಮಾನ್ಯಗೊಳಿಸಿದ್ದರು. ಈ ಆದೇಶ ಪ್ರಶ್ನಿಸಿ ಕವಿತಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದು, ಅದನ್ನು ಏಕ ಸದಸ್ಯ ನ್ಯಾಯಪೀಠ 2021ರ ಸೆ.10ರಂದು ವಜಾಗೊಳಿಸಿತ್ತು. ಇದರಿಂದ ಕವಿತಾ ದಂಪತಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

Follow Us:
Download App:
  • android
  • ios