ಪ್ರಯಾಣಿಕನೊಬ್ಬ ರಸ್ತೆಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ ಘಟನೆ ಬಗ್ಗೆ ದೂರು ನೀಡಲು ವಿಳಂಬ ಮಾಡಿರುವುದು ಹಾಗೂ ಬಸ್‌ ಚಾಲಕ ಹಾಗೂ ನಿರ್ವಾಹಕ ತೋರಿದ ನಿರ್ಲಕ್ಷ್ಯ, ಕರ್ತವ್ಯಲೋಪ ಪರಿಗಣಿಸಿ ಸಾರಿಗೆ ನಿಗಮ ಹಾಗೂ ಚಾಲಕನು 16.95 ಲಕ್ಷ ರು. ಪರಿಹಾರವನ್ನು ಮೃತನ ಕುಟುಂಬಕ್ಕೆ ನೀಡಬೇಕೆಂದು ಹೈಕೋರ್ಟ್‌ ಆದೇಶಿಸಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು (ನ.14) :  ಪ್ರಯಾಣಿಕನೊಬ್ಬ ರಸ್ತೆಗೆ ಬಿದ್ದು ಗಾಯಗೊಂಡು ಸಾವನ್ನಪ್ಪಿದ ಘಟನೆ ಬಗ್ಗೆ ದೂರು ನೀಡಲು ವಿಳಂಬ ಮಾಡಿರುವುದು ಹಾಗೂ ಬಸ್‌ ಚಾಲಕ ಹಾಗೂ ನಿರ್ವಾಹಕ ತೋರಿದ ನಿರ್ಲಕ್ಷ್ಯ, ಕರ್ತವ್ಯಲೋಪ ಪರಿಗಣಿಸಿ ಸಾರಿಗೆ ನಿಗಮ ಹಾಗೂ ಚಾಲಕನು 16.95 ಲಕ್ಷ ರು. ಪರಿಹಾರವನ್ನು ಮೃತನ ಕುಟುಂಬಕ್ಕೆ ನೀಡಬೇಕೆಂದು ಹೈಕೋರ್ಟ್‌ ಆದೇಶಿಸಿದೆ.

ಇದೇ ವೇಳೆ, ಬಸ್‌ ಪ್ರಯಾಣಿಕ ಅಪಘಾತಕ್ಕೆ ಗುರಿಯಾಗಿ ಗಾಯಗೊಂಡರೆ ಕೂಡಲೇ ಆತನಿಗೆ ವೈದ್ಯಕೀಯ ನೆರವು ಕಲ್ಪಿಸುವುದು ಮತ್ತು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡುವುದು ಬಸ್‌ ಚಾಲಕ ಮತ್ತು ನಿರ್ವಾಹಕನ ಕರ್ತವ್ಯ ಎಂದು ಹೇಳಿದೆ.

ಬೆಂಗಳೂರು: ಪೌರಕಾರ್ಮಿಕರು, ದಲಿತ ಹೆಣ್ಣುಮಕ್ಕಳ ವಿವಾಹಕ್ಕೆ ಬಿಬಿಎಂಪಿಯಿಂದ 1 ಲಕ್ಷ ನೆರವು

ಪ್ರಯಾಣಿಕನೋರ್ವ ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ನಿಗಮಕ್ಕೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಸೇರಿದ ಬಸ್‌ನಿಂದ ನಿಲ್ದಾಣದಲ್ಲಿ ಕಳಗೆ ಇಳಿಯುವಾಗ ಚಾಲಕ ದಿಢೀರ್‌ ಆಗಿ ಬಸ್‌ ಮುಂದಕ್ಕೆ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದ. ಘಟನೆ ಸಂಬಂಧ ದೂರು ನೀಡಲು ನಾಲ್ಕು ದಿನಗಳ ಕಾಲ ವಿಳಂಬ ಮಾಡಿದ ಹಾಗೂ ಬಸ್‌ ಮುಂದೆ ಚಲಾಯಿಸುವಲ್ಲಿ ಚಾಲಕ ಹಾಗೂ ನಿರ್ವಾಹಕ ತೋರಿದ ನಿರ್ಲಕ್ಷ್ಯ, ಕರ್ತವ್ಯ ಲೋಪವನ್ನು ಪರಿಗಣಿಸಿದ ಹೈಕೋರ್ಟ್‌ ಈ ಆದೇಶ ಮಾಡಿದೆ.

ಅಲ್ಲದೆ, ಮೃತಪಟ್ಟ ಪ್ರಯಾಣಿಕನ ಕುಟುಂಬಕ್ಕೆ ಶೇ.6ರಷ್ಟು ಬಡ್ಡಿದರಲ್ಲಿ 16.95 ಲಕ್ಷ ರು. ಪರಿಹಾರ ನೀಡುವಂತೆ ಎನ್‌ಡಬ್ಲ್ಯೂಕೆಆರ್‌ಟಿಸಿಗೆ ಮತ್ತು ಘಟನೆಗೆ ಕಾರಣವಾದ ಬಸ್‌ ಚಾಲಕನಿಗೆ ನಿರ್ದೇಶಿಸಿ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.

ಪ್ರಕರಣದ ವಿವರ:

ಬೀರೇಶ್ವರ್‌ ಹಿರೇನ್‌ ಎಂಬುವವರು 2017ರ ಜ.31ರಂದು ಎನ್‌ಡಬ್ಲ್ಯೂಕೆಆರ್‌ಟಿಸಿಗೆ ಸೇರಿದ ಬಸ್‌ವೊಂದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಜಲಿಯಿಂದ ಕಾರವಾರಕ್ಕೆ ಪ್ರಯಾಣಿಸಿದ್ದರು. ಬಸ್‌ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಬಳಿಗೆ ತಲುಪಿತ್ತು. ಅಲ್ಲಿ ಹಿರೇನ್‌ ಅವರು ಬಸ್‌ನಿಂದ ನೆಲಕ್ಕೆ ಕಾಲೂರುವ ಮುನ್ನವೇ ಚಾಲಕ ದಿಢೀರ್‌ ಆಗಿ ಬಸ್‌ ಮುಂದಕ್ಕೆ ಚಲಾಯಿಸಿದ್ದ. ಇದರಿಂದ ನಿಯಂತ್ರಣ ಕಳೆದುಕೊಂಡ ಹಿರೇನ್‌, ಆಯತಪ್ಪಿ ರಸ್ತೆ ಬದಿಯ ಕಲ್ಲಿನ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಗೆ ದಾಖಲಿಸಿದ್ದರೂ ನಾಲ್ಕು ದಿನಗಳ ನಂತರ ಅವರು ಸಾವನ್ನಪ್ಪಿದ್ದರು.

ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!

ಮೃತನ ಪತ್ನಿ ರಾಧಾರಾಣಿ ಮತ್ತು ಪುತ್ರಿ ಪೂರ್ಣಿಮಾ ಅವರು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕಾರವಾರದ ಮೋಟಾರು ವಾಹನ ಪರಿಹಾರ ಕ್ಲೇಮು ನ್ಯಾಯಾಧಿಕರಣ (ಎಂಎಸಿಟಿ) ವಜಾಗೊಳಿಸಿತ್ತು. ಅದರಿಂದ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.