ಮೇವಿನ ಕೊರತೆ ತಪ್ಪಿಸಲು ರೈತರಿಗೆ ಶೀಘ್ರ ಮೇವು ಬಿತ್ತನೆ ಕಿಟ್: ಸಚಿವ ಸಂಪುಟ ನಿರ್ಧಾರ
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಮೇವಿನ ಕೊರತೆ ನಿಭಾಯಿಸುವ ಉದ್ದೇಶದಿಂದ ನೀರಿನ ವ್ಯವಸ್ಥೆ ಇರುವ ರೈತರಿಗೆ ಮೇವು ಬಿತ್ತನೆ ಬೀಜದ ಕಿಟ್‌ಗಳನ್ನು ಉಚಿತವಾಗಿ ವಿತರಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಪಶು ಸಂಗೋಪನಾ ಇಲಾಖೆಗೆ 20 ಕೋಟಿ ರು. ಅನುದಾನ ನೀಡಲು ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.
ಬೆಂಗಳೂರು (ಸೆ.5) : ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಮೇವಿನ ಕೊರತೆ ನಿಭಾಯಿಸುವ ಉದ್ದೇಶದಿಂದ ನೀರಿನ ವ್ಯವಸ್ಥೆ ಇರುವ ರೈತರಿಗೆ ಮೇವು ಬಿತ್ತನೆ ಬೀಜದ ಕಿಟ್‌ಗಳನ್ನು ಉಚಿತವಾಗಿ ವಿತರಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ಪಶು ಸಂಗೋಪನಾ ಇಲಾಖೆಗೆ 20 ಕೋಟಿ ರು. ಅನುದಾನ ನೀಡಲು ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.
ಪ್ರಕೃತಿ ವಿಕೋಪದಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಲು ಸೋಮವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆ ಈ ನಿರ್ಧಾರ ಕೈಗೊಂಡಿದೆ.
ಕರ್ನಾಟಕದ 134 ತಾಲೂಕುಗಳ ಬರಪೀಡಿತ, ಜಂಟಿ ಸಮೀಕ್ಷೆ ಬಳಿಕ ಅಧಿಕೃತ ಘೋಷಣೆ
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಸಚಿವರು, ಸದ್ಯದ ಮಟ್ಟಿಗೆ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಮುಂದಿನ ದಿನಗಳಲ್ಲಿ ಕೊರತೆ ಎದುರಾಗಬಹುದೆಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದೆ. ಅಂತಿಮವಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.
ಕೇಂದ್ರಕ್ಕೆ ನಿಯೋಗ
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಸದ್ಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 529 ಕೋಟಿ ರು. ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಯಲ್ಲಿ 600 ಕೋಟಿ ರು. ಅನುದಾನವಿದೆ. ಬರ ತಾಲೂಕುಗಳ ಪಟ್ಟಿಘೋಷಣೆ ಬಳಿಕ ಸಂಪುಟ ಉಪ ಸಮಿತಿಯ ನಿಯೋಗ ಕೂಡ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಬರ ನಿರ್ವಹಣೆ ನೆರವಿಗಾಗಿ ಮನವಿ ಸಲ್ಲಿಸಲಿದೆ. ಇದೇ ವೇಳೆ ರಾಜ್ಯದಲ್ಲಿ ನರೇಗಾ ಯೋಜನೆಯಡಿ ಇರುವ ಪ್ರತಿ ವ್ಯಕ್ತಿಗೆ 100 ದಿನಗಳ ಕನಿಷ್ಠ ಕೂಲಿ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಲು ಒತ್ತಾಯಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸದ್ಯ ಬರ ಸ್ಥಿತಿ ಗುರುತಿಸಲು ಇರುವ ಕೇಂದ್ರ ಸರ್ಕಾರದ ಮಾನದಂಡಗಳನ್ನು ಪರಿಷ್ಕರಿಸಲು ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸಚಿವರ ನಿಯೋಗ ತೆರಳಿದಾಗಲೂ ಸಂಬಂಧಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.
'ಯಾರ ದುಡ್ಡು? ನಿಮ್ಮನೆದಾ ಅಥವಾ ನಮ್ಮನೆ ಹಣವಾ?: ಅಧಿಕಾರಿಗಳ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಗರಂ
13 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಸ್ಯಾಂಪಲ್ ಸರ್ವೆ ಮೂಲಕ ಬರ ತಾಲೂಕುಗಳ ಸಮೀಕ್ಷೆ ನಡೆಸಲಾಗಿದೆ. ಬರ ತಾಲೂಕುಗಳ ಘೋಷಣೆ ಬಳಿಕ ರಾಜ್ಯದಲ್ಲಿ ಮಳೆ ಕೊರತೆಯಿಂದ ಆಗಿರುವ ಒಟ್ಟಾರೆ ಬೆಳೆ ನಷ್ಟದ ಅಂದಾಜು ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು.
- ಕೃಷ್ಣ ಬೈರೇಗೌಡ, ಕಂದಾಯ ಸಚಿವ