'ಯಾರ ದುಡ್ಡು? ನಿಮ್ಮನೆದಾ ಅಥವಾ ನಮ್ಮನೆ ಹಣವಾ?: ಅಧಿಕಾರಿಗಳ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಗರಂ
ಮಂಗಳೂರಿನಲ್ಲಿ ಇಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರವಾಸ ಕೈಗೊಂಡಿದ್ದು, ಹಲವು ಸರ್ಕಾರಿ ಕಚೇರಿ ಹಾಗೂ ಕಾಮಗಾರಿ ಪ್ರದೇಶಗಳಿಗೆ ದಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ವೇಳೆ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ಮಂಗಳೂರಿನ ನೂತನ ಡಿಸಿ ಕಚೇರಿ ವೀಕ್ಷಿಸಿ ಸಚಿವರು ಫುಲ್ ಗರಂ ಆಗಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಆ.29): ಮಂಗಳೂರಿನಲ್ಲಿ ಇಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರವಾಸ ಕೈಗೊಂಡಿದ್ದು, ಹಲವು ಸರ್ಕಾರಿ ಕಚೇರಿ ಹಾಗೂ ಕಾಮಗಾರಿ ಪ್ರದೇಶಗಳಿಗೆ ದಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ವೇಳೆ ಹಲವು ವರ್ಷಗಳಿಂದ ಕುಂಟುತ್ತಾ ಸಾಗಿರುವ ಮಂಗಳೂರಿನ ನೂತನ ಡಿಸಿ ಕಚೇರಿ ವೀಕ್ಷಿಸಿ ಸಚಿವರು ಫುಲ್ ಗರಂ ಆಗಿದ್ದಾರೆ.
ನಗರದ ಪಡೀಲ್ ನಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾಧಿಕಾರಿ ಕಚೇರಿಗೆ ಸಚಿವ ಕೃಷ್ಣ ಬೈರೇಗೌಡ(Krishna byregowda) ಭೇಟಿ ನೀಡಿದರು. ಕಳೆದ 5 ವರ್ಷದ ಹಿಂದೆ ಆರಂಭವಾಗಿರುವ ಕಾಮಗಾರಿ ಇದಾಗಿದ್ದು, ಅನುದಾನದ ಕೊರತೆಯಿಂದೆ ಅರ್ಧಕ್ಕೆ ನಿಂತಿದೆ. 5.8 ಎಕರೆ ಜಾಗದಲ್ಲಿ 2.26 ಲಕ್ಷ ಚದರ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಕಟ್ಟಡದ ವಿಸ್ತೀರ್ಣ ಕಂಡು ಬೆರಗಾದ ಕಂದಾಯ ಸಚಿವ, ಲೆಕ್ಕಕಿಂತ ಹೆಚ್ಚಿನ ಖರ್ಚು ಮಾಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾರ ದುಡ್ಡು ನಿಮ್ಮನೆಯ ಹಣವಾ ಅಥವಾ ನಮ್ಮನೆಯಾ ಹಣವಾ ಎಂದು ಪ್ರಶ್ನೆ ಮಾಡಿದ ಅವರು, ತೆರಿಗೆ ಪಾವತಿಸುವವರ ಹಣ ದುರುಪಯೋಗ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿ ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರಿಂಗ್ ಸಲಹೆಗಾರ ಧರ್ಮರಾಜ್, ಪಿಡಬ್ಲ್ಯೂಡಿ ಇಂಜಿನಿಯರ್ ವಿರುದ್ಧ ಗರಂ ಆದರು.
ಅರ್ಧ ಕರ್ನಾಟಕ ಬರಗಾಲ, ಮುಂದೆಯೂ ಮಳೆ ಮುನ್ಸೂಚನೆಯಿಲ್ಲ: ಸಚಿವ ಕೃಷ್ಣಬೈರೇಗೌಡ
ಕಟ್ಟಡ ಪರಿಶೀಲನೆ ಬಳಿಕ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನೂತನ ಜಿಲ್ಲಾಧಿಕಾರಿ ಕಚೇರಿಗೆ ಅನುಮೋದನೆ ನೀಡಲಾಗಿತ್ತು. ಆದ್ರೆ ಕಳೆದ ಬಿಜೆಪಿ ಸರ್ಕಾರದ ಅವದಿಯಲ್ಲಿ ಕಾಮಗಾರಿ ಪೂರ್ತಿಗೊಳಿಸಿಲ್ಲ. ನಾವು ನೀಡಿದ ಅನುಮೋದನೆಯಲ್ಲಿಯೆ ಕಾಮಗಾರಿ ನಡೆಯುತ್ತಿದೆ. ಪ್ರಥಮ ಹಂತದಲ್ಲಿ ಮುಂದಿನ ಆರು ತಿಂಗಳ ಒಳಗೆ ಜಿಲ್ಲಾಧಿಕಾರಿ ಕಚೇರಿ ಶಿಫ್ಟ್ ಮಾಡ್ತೇವೆ. ಜಿಲ್ಲಾಧಿಕಾರಿ ಕಚೇರಿಗೆ ಬೇಕಾದ ಅಗತ್ಯ ಸೌಲಭ್ಯಗಳ ಕಾಮಗಾರಿಗೆ ಟೆಂಡರ್ ಮಾಡ್ತೇವೆ. 2024 ರಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎಲ್ಲಾ ಕಾಮಗಾರಿ ಪೂರ್ತಿಯಾಗುತ್ತೆ. ಬಳಿಕ ಎಲ್ಲಾ ಕಚೇರಿಗಳ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತೆ ಎಂದರು.
ಐದು ವರ್ಷದಿಂದ ಕಾಮಗಾರಿ, ಹೆಚ್ವಾಗ್ತಿದೆ ನಿರ್ಮಾಣ ವೆಚ್ಚ!
2018ರ ಮಾರ್ಚ್ ತಿಂಗಳಲ್ಲಿ ಈ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಇದಕ್ಕಾಗಿ 41 ಕೋಟಿ ರೂ. ಮೊತ್ತದ ಯೋಜನೆ ರೂಪಿಸಿ ನಂತರ 55 ಕೋಟಿ ರೂ. ಮೊತ್ತಕ್ಕೆ ಹೆಚ್ಚಿಸಲಾಯಿತು. 2019ರ ಸೆ.16ಕ್ಕೆ ಪ್ರಥಮ ಹಂತದ ಕಾಮಗಾರಿ ಮುಗಿಯಬೇಕಿತ್ತು. ಒಂದನೇ ಹಂತದ 55 ಕೋಟಿ ರೂ. ಮೊತ್ತದಲ್ಲಿ ಗುತ್ತಿಗೆದಾರರಿಗೆ 51 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ ಬಹುತೇಕ ಕಟ್ಟಡ, ಮೆಲ್ಚಾವಣಿ, ಬಾಗಿಲು, ರೇಲಿಂಗ್ ಕೆಲಸ ಮುಗಿದಿದೆ. ಆದ್ರೆ ಯೋಜನೆ ಪೂರ್ಣಗೊಳಿಸಲು ಎರಡನೇ ಹಂತದಲ್ಲಿ 29 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ, ಸರಕಾರಕ್ಕೆ ಸಲ್ಲಿಸಿದ್ರೂ ಅನುದಾನ ಬಿಡುಗಡೆಯಾಗಿಲ್ಲ. ಇದೀಗ ಹೊಸ ಸರ್ಕಾರ ಬಂದಿದ್ದು, ಕಂದಾಯ ಸಚಿವರು ಜಿಲ್ಲಾಧಿಕಾರಿ ಕಟ್ಟಡದ ಕಾಮಗಾರಿ ವೀಕ್ಷಿಸಿದ್ದಾರೆ. ಅಗತ್ಯಕ್ಕಿಂತ ದೊಡ್ಡದಾಗಿ ಜಿಲ್ಲಾಧಿಕಾರಿ ಕಟ್ಟಡ ನಿರ್ಮಾಣವಾಗ್ತಾ ಇದ್ದು, ಇದಕ್ಕೆ ವಿನ್ಯಾಸಕಾರರು ಹಾಗೂ ಇಂಜೀನಿಯರ್ಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟು 5.8 ಎಕರೆ ಜಾಗದಲ್ಲಿ 2.26 ಲಕ್ಷ ಚದರ ಅಡಿಯ ಮೂರು ಮಹಡಿಗಳ ಕಟ್ಟಡವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಕಂದಾಯ ಇಲಾಖೆ ಸಹಿತ 38 ಇಲಾಖೆಗಳಿಗೆ ಇದರಲ್ಲಿ ಕಚೇರಿ ಇರಲಿದೆ. ನೆಲ ಅಂತಸ್ತಿನಲ್ಲಿ 400 ಮಂದಿ ಸಾಮರ್ಥ್ಯದ ಸಭಾಂಗಣ, 2ನೇ ಮಹಡಿಯಲ್ಲಿ ಎರಡು ಮೀಟಿಂಗ್ ಹಾಲ್, ಡಿಸಿ ಕೋರ್ಟ್ ಹಾಲ್, ಸಂಸದ, ಸಚಿವ, ಶಾಸಕರ ಕಚೇರಿ ಇರಲಿದೆ. ಆದ್ರೆ ಕಟ್ಟಡದ ವಿನ್ಯಾಸ ಅಗತ್ಯಕ್ಕಿಂತ ದೊಡ್ಡದಾಗಿದ್ದು, ವಿಕಾಸ ಸೌಧವನ್ನ ಮೀರಿಸ್ತಾ ಇದೆ ಅಂತ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
ಜನರ ಹಣವನ್ನು ಪೋಲು ಮಾಡಲು ಬೇಕಾಬಿಟ್ಟಿಯಾಗಿ ಈ ಕಾಮಗಾರಿಯನ್ನ ನಡೆಸಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಎರಡು ಹಂತದಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿಯನ್ನ ಮತ್ತೊಂದು ಹಂತಕ್ಕೆ ವಿಸ್ತರಿಸಿ ಈಗ ಅಗತ್ಯ ಕಾಮಗಾರಿ ನಡೆಸಲು ಎಸ್ಟಿಮೇಟ್ ತಯಾರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಹೊಸ ಎಸ್ಟಿಮೇಟ್ ಬಳಿಕ ಟೆಂಡರ್ ಆಗಿ ಕಾಮಗಾರಿ ಮುಗಿಸಲು ಕನಿಷ್ಟ ಇನ್ನು ಒಂದು ವರ್ಷವಾದ್ರೂ ಬೇಕಾಗಬಹುದು ಎಂದು ಸಚಿವರು ಹೇಳಿದ್ದಾರೆ.
ತಾಲೂಕು ಕಚೇರಿಗೂ ದಿಢೀರ್ ಭೇಟಿ: ಪರಿಶೀಲನೆ!
ಮಂಗಳೂರು ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ದಿಢೀರ್ ಭೇಟಿ ನೀಡಿದರು. ಸಾರ್ವಜನಿಕರ ದೂರಿನ ಹಿನ್ನೆಲೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿದ್ದು, ತಾಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೆಕಾರ್ಡ್ ರೂಂ, ಸಬ್ ರಿಜಿಸ್ಟ್ರಾರ್ ಕಚೇರಿ, ಸರ್ವೇ ಕಚೇರಿಗೆ ಭೇಟಿ ನೀಡಿದರು. ರೆಕಾರ್ಡ್ ರೂಂನಲ್ಲಿ ದಾಖಲೆ ಡಿಜಿಟಲೀಕರಣದ ಬಗ್ಗೆ ಮಾಹಿತಿ ಪಡೆದ ಸಚಿವ, ಡಿಜಿಕಲೀಕರಣ ಆಗದ ದಾಖಲೆಗಳ ಶೀಘ್ರ ಡಿಜಿಟಲೀಕರಣಕ್ಕೆ ಸೂಚನೆ ನೀಡಿದರು. ಬಳಿಕ ಭೂ ಮಾಪನ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಭಾರೀ ದೂರಿನ ಹಿನ್ನೆಲೆ ಸಬ್ ರಿಜಿಸ್ಡ್ರಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ ಅವರು, ನೋಂದಾಣಿ ವಿಳಂಬದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರತೀ ಬಾರಿ ಸರ್ವರ್ ಡೌನ್ ಎನ್ನುತ್ತಿರೋ ಕಚೇರಿ ಸಿಬ್ಬಂದಿ ವಿರುದ್ದ ದೂರಿನ ಹಿನ್ನೆಲೆ ಸ್ವತಃ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸರ್ಕಾರದ ಮಟ್ಟದಲ್ಲಿ ಸರ್ವರ್ ಸಮಸ್ಯೆ ಇದ್ಯಾ ಅಂತ ಪ್ರಶ್ನೆ ಮಾಡಿದ ಅವರು, ನಮ್ಮಲ್ಲಿ ಸರ್ವರ್ ಸಮಸ್ಯೆ ಇಲ್ಲ ಅಂತ ಅಧಿಕಾರಿಗಳಿಗೆ ಹೇಳಿದರು. ಇಲ್ಲಿ ನೋಂದಾಣಿ ತಡವಾಗಲು ಕಾರಣ ಏನು ಅಂತ ಪ್ರಶ್ನಿಸಿದಾಗ, ಅಪ್ಲೋಡ್ ಹಾಗೂ ಪೇಮೆಂಟ್ ವೇಳೆ ಹೆಚ್ಚಾಗಿ ಸರ್ವರ್ ಸಮಸ್ಯೆ. ಆದರೆ ಹೊರಗಿನ ನೆಟ್ ವರ್ಕ್ ಕಾರಣಕ್ಕೆ ಸಮಸ್ಯೆ ಅಂತ ಅಧಿಕಾರಿಗಳ ಸಮಾಜಾಯಿಷಿ ನೀಡಿದರು.
ಅಧಿಕಾರಿಗಳು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು: ಸಿಎಂ
ತಾಂತ್ರಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಡಿಸಿಗೆ ಸಚಿವರು ಸೂಚನೆ ನೀಡಿದರು. ಸರ್ಕಾರದ ಮಟ್ಟದಲ್ಲಿ ಸರ್ವರ್ ಸಮಸ್ಯೆ ಇಲ್ಲ, ನಿಮ್ಮ ಸಮಸ್ಯೆ ಸರಿ ಮಾಡಿ. ಜನರು ಹೊರಗೆ ಅಪ್ಲೋಡ್ ಮಾಡುವಾಗ ಸಮಸ್ಯೆ ಇದ್ದರೆ ಅವರಿಗೆ ಮನವರಿಕೆ ಮಾಡಿ ಅಂತ ಸಚಿವರು ಸೂಚನೆ ನೀಡಿದರು. ಸಾರ್ವಜನಿಕರಿಂದಲೂ ತಾಲೂಕು ಕಚೇರಿ ಸಮಸ್ಯೆಗಳ ಬಗ್ಗೆ ಕೃಷ್ಣ ಭೈರೇಗೌಡ ದೂರು ಆಲಿಸಿದರು.