ಕರ್ನಾಟಕದ 134 ತಾಲೂಕುಗಳ ಬರಪೀಡಿತ, ಜಂಟಿ ಸಮೀಕ್ಷೆ ಬಳಿಕ ಅಧಿಕೃತ ಘೋಷಣೆ
ಕೃಷಿ ಮತ್ತು ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆಯ ನಂತರ ರಾಜ್ಯದ 134 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಬೆಂಗಳೂರು (ಸೆ.04): ರಾಜ್ಯದಲ್ಲಿ ಮುಂಗಾರು ಮಳೆಯ ಅವಧಿಯಲ್ಲಿ ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ಮಳೆಯಿಲ್ಲದೇ ಬರ ಪರಿಸ್ಥಿತಿಯನ್ನು ಎದುರಿಸಿದೆ. ಈ ಹಿನ್ನೆಲೆಯಲ್ಲಿ, ಕೃಷಿ ಮತ್ತು ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆಯ ನಂತರ ರಾಜ್ಯದ 134 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈಸರ್ಗಿಕ ವಿಕೋಪಗಳಿಗೆ ತೀರ್ಮಾನ ತೆಗೆದುಕೊಳ್ಳುವ ಸಂಪುಟ ಉಪ ಸಮಿತಿ ಸಭೆ ಮಾಡಿದೆವು. ಇನ್ನೂ 63 ತಾಲೂಕಿನಲ್ಲಿ ಮತ್ತೆ ಬೆಳೆ ಸಮೀಕ್ಷೆ ಮಾಡಲು ತೀರ್ಮಾನ ಮಾಡಿದ್ದೇವೆ. ಕೇಂದ್ರ ಸರ್ಕಾರದ ಕಡ್ಡಾಯ ಅವಶ್ಯಕತೆ ಪ್ರಕಾರ 63 ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಮಾಡಬೇಕಾಗುತ್ತದೆ. ಆಗಸ್ಟ್ ನಲ್ಲಿ ಸಭೆ ನಡೆಸಿ 134 ತಾಲೂಕಿನಲ್ಲಿ ನಾವು ಬರ ಪರಿಸ್ಥಿತಿ ಕಂಡು ಬಂದಿದೆ ಎಂಬ ತೀರ್ಮಾನಕ್ಕೆ ಬಂದಿದ್ದೆವು. ಈ 134 ತಾಲೂಕಿನಲ್ಲಿ ಜಂಟಿ( ಕೃಷಿ ಮತ್ತು ಕಂದಾಯ ಇಲಾಖೆ) ಸಮೀಕ್ಷೆ ಆದ ಬಳಿಕ ಬರ ಘೋಷಣೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.
ಹುಲಿಗೆ ಆಹಾರವಾದ 7 ವರ್ಷದ ಬಾಲಕ: ಅಪ್ಪ-ಅಮ್ಮನೆದುರೇ ಮಗನನ್ನು ಕೊಂದು ತಿಂದ ವ್ಯಾಘ್ರ
ಹಸುಗಳಿಗೆ ಮೇವಿನ ಕೊರತೆಯಿಲ್ಲ: ಬರ ಘೋಷಣೆ ಬಳಿಕ ಕೇಂದ್ರ ಸರ್ಕಾರಕ್ಕೆ ನೆರವಿಗಾಗಿ ಮನವಿ ಸಲ್ಲಿಸಲಾಗುತ್ತದೆ. ಬರ ಘೋಷಣೆ ಬಳಿಕ ಕುಡಿಯುವ ನೀರಿನ ಕೊರತೆ ಕಂಡು ಬಂದ ವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಯನ್ನು ಕರ್ನಾಟಕ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ನಿಧಿ ಮುಖಾಂತರ ಮಾಡಲಾಗುತ್ತದೆ. ಹಾಲಿ ಪರಿಸ್ಥಿತಿಯಲ್ಲಿ ಹಸುಗಳಿಗೆ ಮೇವಿನ ಕೊರತೆಯಿಲ್ಲ. ಈಗ ಮೇವು ಲಭ್ಯವಿದೆ. ಆದರೆ, ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಆಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ 20 ಕೋಟಿ ರೂ. ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಮೇವು ಬೆಳೆಯಲು ಲಭ್ಯವಿರುವ ರೈತರಿಗೆ ಪಶು ಸಂಗೋಪನೆ ಇಲಾಖೆಯಿಂದ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಒಟ್ಟಾರೆ ಮೂರು ತಿಂಗಳಲ್ಲಿ ಶೇ.26 ಮಳೆ ಕೊರತೆ: ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪುಕೃತಿ ವಿಕೋಪದಿಂದ ಉದ್ಭವಿಸಬಹುದಾದ ಪರಿಸ್ಥಿತಿ ಕುರಿತು ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಮಳೆ ಕೊರತೆ ಮತ್ತು ಬರಗಾಲಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಮಂಡಿಸಲಾಯಿತು. ಅದರಲ್ಲಿ ರಾಜ್ಯದಲ್ಲಿ ಆರಂಭದಲ್ಲಿಯೇ 2023ರ ಮಂಗಾರು ದುರ್ಬಲಗೊಂಡು, ಜೂನ್ ತಿಂಗಳಿನಲ್ಲಿ ಶೇ.56ರಷ್ಟು ಮಳೆ ಕೊರತೆಯಾಗಿತ್ತು. ನಂತರ ಜುಲೈ ತಿಂಗಳಿನಲ್ಲಿ ಉತ್ತಮವಾಗಿ ಮಳೆಯಾದರೂ, ಆಗಸ್ಟ್ ತಿಂಗಳಿನಲ್ಲಿ ಶೇ.73 ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆ ಪ್ರಸಕ್ತ ಮಂಗಾರು ಜೂನ್ 1 ರಿಂದ ಸೆಪ್ಟೆಂಬರ್ 4 ರವರೆಗೆ ವಾಡಿಕೆಯಾಗಿ 711ಮಿ.ಮಿ ಮಳೆಯಾಗಬೇಕಿದ್ದು, ವಾಸ್ತವಿಕವಾಗಿ 526 ಮಿ.ಮೀ ಮಳೆಯಾಗಿದೆ. ಈ ಮೂಲಕ ಒಟ್ಟಾರೆ ಶೇಕಡಾ 26ರಷ್ಟು ಮಳೆ ಕೊರತೆಯಾಗಿದ್ದು, ಬರ ಪರಿಸ್ಥಿತಿ ತಲೆದೋರಿದೆ.
ಜ್ಯೂಸ್ ಎಂದುಕೊಂಡು ಕೀಟನಾಶಕ ಕುಡಿದು ಮಗು: ಚಿಕತ್ಸೆ ಫಲಿಸದೇ ಸಾವು
ಕೇಂದ್ರದ ಮಾರ್ಗಸೂಚಿ ಅನ್ವಯ ಬರ ಘೋಷಣೆ: ರಾಜ್ಯದಲ್ಲಿ ಬರ ಪರಿಸ್ಥಿತಿ ಬಗ್ಗೆ, ನಿಗಾ ಮತ್ತು ನಿರ್ವಹಣೆಗಾಗಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಈವರೆಗೆ 3 ಬಾರಿ ಸಭೆ ನಡೆಸಿ ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಪರಾಮರ್ಶಿಸಿದೆ. ಕೇಂದ್ರ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಮಂತ್ರಾಲಯದ ಪರಿಷ್ಕೃತ ಬರ ಕೈಪಿಡಿ 2020ರಲ್ಲಿ ಸೂಚಿಸಲಾಗಿರುವ, ಕಡ್ಡಾಯ ಮಾನದಂಡಗಳಾದ ಮಳೆ ಕೊರತೆ (ಶೇಕಡಾ-60), ಸತತ 3 ವಾರಗಳ ಶುಷ್ಕ ವಾತಾವರಣ ಹಾಗೂ ಇತರೆ ತತ್ಪರಿಣಾಮ ಮಾನದಂಡಗಳ (ಉಪಗ್ರಹ ಆಧಾರತ ಬೆಳೆ ಸೂಚ್ಯಂಕ, ತೇವಾಂಶ ಕೊರತೆ ಹಾಗೂ ಜಲ ಸಂಪನ್ಮೂಲ ಸೂಚ್ಯಂಕ) ಅನ್ವಯ, ರಾಜ್ಯದಲ್ಲಿ ಬರ ಪರಿಸ್ಥಿತಿ ಕಂಡುಬಂದಿರುವ 113 ತಾಲೂಕುಗಳನ್ನು ಕ್ಷೇತ್ರ ಪರಿಶೀಲನೆ ಹಾಗೂ ದೃಢೀಕರಣಕ್ಕಾಗಿ (Ground Truthning) ಜಂಟಿ ಸಮೀಕ್ಷೆ ಕೈಗೊಂಡು ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು.
ವಾರದೊಳಗೆ ಗ್ರೌಂಡ್ ಟ್ರೂತ್‌ನಿಂಗ್ ವರದಿ ಸಲ್ಲಿಸಲು ಗಡುವು: ಇನ್ನು ರಾಜ್ಯದಲ್ಲಿ 113 ತಾಲೂಕುಗಳ ಪೈಕಿ ಜಂಟಿ ಸಮೀಕ್ಷೆಯಲ್ಲಿ ಮಾರ್ಗಸೂಚಿ ಅನ್ವಯ 62 ತಾಲೂಕುಗಳ ಬರ ಘೋಷಣೆಗೆ ಅರ್ಹವಾಗಿದೆ. ಆದರೆ, ಜಂಟಿ ಸಮೀಕ್ಷೆಯ ನಂತರ ಬೆಳೆ ಪರಿಸ್ಥಿತಿ ಮತ್ತೆ ಕುಸಿದಿದೆ ಎಂದು ವರದಿಗಳು ಬಂದಿರುತ್ತವೆ. ಹಾಗಾಗಿ ಉಳಿದ 51 ತಾಲೂಕುಗಳಲ್ಲಿ ಮತ್ತೊಮ್ಮೆ ಜಂಟಿ ಸಮೀಕ್ಷೆಗೆ ಒಳಪಡಿಸಲು ತೀರ್ಮಾನಿಸಿದೆ. ಸೆ.02ರ ಅಂತ್ಯಕ್ಕೆ ಅರ್ಹವಾಗಿರುವ 83 ತಾಲೂಕುಗಳಲ್ಲಿ Ground Truthingಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ತೀರ್ಮಾನಿಸಲಾಯಿತು. ಒಟ್ಟಾರೆ 51 ಮತ್ತು 83 ತಾಲೂಕುಗಳಲ್ಲಿ Ground Truthing ಮುಗಿಸಿ ಒಂದು ವಾರದೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ನಂತರ 134 ತಾಲೂಕುಗಳಲ್ಲಿ ಜಂಟಿ ಸಮೀಕ್ಷೆ ವರದಿ ಆಧಾರದ ಅನುಸಾರ ಬರ' ಘೋಷಣೆ ಮಾಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.