NEET, CET ನಂತರ ಪಿಯು ಫಲಿತಾಂಶ ಪ್ರಕಟ..?
ವೈದ್ಯ ಹಾಗೂ ದಂತ ವೈದ್ಯಕೀಯ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ದೇಶಾದ್ಯಂತ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಹಾಗೂ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಕುರಿತು ಚಿಂತನೆ ನಡೆದಿದೆ.
ಬೆಂಗಳೂರು(ನ.03): ವೈದ್ಯ ಹಾಗೂ ದಂತ ವೈದ್ಯಕೀಯ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ದೇಶಾದ್ಯಂತ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಹಾಗೂ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇಲಾಖೆಯಲ್ಲಿನ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ ನಗರದ ಡಿಎಸ್‌ಇಆರ್‌ಟಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಸಂವೇದನಾ’ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ತಿಳಿಸಿದ್ದಾರೆ.
ನೀಟ್ ಎಸ್‌ಎಸ್: ಕೊಪ್ಪಳದ ಮಂಜುನಾಥ್ ದೇಶಕ್ಕೇ ಪ್ರಥಮ!
ಮಧುಗಿರಿಯ ನಾಗರಾಜ್ ಎಂಬುವವರು ಕರೆ ಮಾಡಿ, ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳು ಸಿದ್ಧತೆ ನಡೆಸುತ್ತಿರುವ ನಡುವೆಯೇ ಪಿಯುಸಿ ಫಲಿತಾಂಶ ಪ್ರಕಟಿಸುವುದರಿಂದ ವಿದ್ಯಾರ್ಥಿಗಳ ಮೇಲೆ ಮಾನಸಿಕವಾಗಿ ಪರಿಣಾಮ ಬೀರಲಿದೆ. ನೀಟ್ ಪರೀಕ್ಷೆ ಮುಗಿದ ಬಳಿಕ ಪಿಯುಸಿ ಫಲಿತಾಂಶ ಪ್ರಕಟಿಸಿದರೆ, ವಿದ್ಯಾರ್ಥಿಗಳ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು. ಈ ಮನವಿಗೆ ಸಚಿವರು ಮೇಲಿನ ಭರವಸೆ ನೀಡಿದ್ದಾರೆ.
ಸ್ಯಾಟ್ ಮಾಹಿತಿ ಸರಳೀಕರಣ:
ವಿದ್ಯಾರ್ಥಿಗಳ ಸಾಧನಾ ಟ್ರ್ಯಾಕಿಂಗ್ ವ್ಯವಸ್ಥೆ (ಸ್ಯಾಟ್)ಯಲ್ಲಿ ವಿದ್ಯಾರ್ಥಿಗಳ ಹಾಜರಾತಿ, ಬಿಸಿಯೂಟ, ವಿವಿಧ ಸೌಲಭ್ಯಗಳ ವಿತರಣೆ ಮಾಹಿತಿಯನ್ನು ಪ್ರತಿದಿನ ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡುವ ವಿಧಾನವನ್ನು ಸರಳೀಕರಣಗೊಳಿಸುವುದಾಗಿ ಅರ್ಚನಾ ಎಂಬುವವರ ಮನವಿಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.
ವಿದ್ಯಾರ್ಥಿ-ಶಿಕ್ಷಕರ ಅನುಪಾತ 50:1ಕ್ಕೆ ಮನವಿ:
ಸರ್ಕಾರಿ ಶಾಲೆಗಳಲ್ಲಿ ಸದ್ಯ ವಿದ್ಯಾರ್ಥಿ- ಶಿಕ್ಷಕರ ಅನುಪಾತ 70:1 ಇದೆ. ಗುಣಮಟ್ಟದ ಶಿಕ್ಷಣ ನೀಡಲು 50:1 ಇಳಿಸಬೇಕೆಂಬ ಉಡುಪಿ ಜಿಲ್ಲೆ ಬೈಂದೂರಿನ ನಾಗರಾಜ್ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಅನುಪಾತ ಕಡಿಮೆ ಮಾಡುವುದರಿಂದ ಹೆಚ್ಚಳವಾಗುವ ಶಿಕ್ಷಕರ ಸಂಖ್ಯೆ, ಕೊಠಡಿ ಮತ್ತು ಕಟ್ಟಡಗಳ ಪ್ರಮಾಣ ಹಾಗೂ ಆರ್ಥಿಕ ವೆಚ್ಚವನ್ನು ಅಂದಾಜಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದಾರೆ.
ಸಿಎಲ್ 15ಕ್ಕೆ ಹೆಚ್ಚಿಸಿ:
ರಾಜ್ಯ ಸರ್ಕಾರ ನಾಲ್ಕನೇ ಶನಿವಾರವನ್ನು ಕೂಡ ಸರ್ಕಾರಿ ರಜೆ ಎಂದು ಘೋಷಿಸಿದ ಬಳಿಕ ಸರ್ಕಾರಿ ನೌಕರರ ಸಾಂದರ್ಭಿಕ ರಜೆ (ಸಿಎಲ್) ಯನ್ನು 15ರಿಂದ 10ಕ್ಕೆ ಇಳಿಸಿದೆ. ಆದರೆ, ಶಿಕ್ಷಕರು ಈ ಎರಡೂ ದಿನಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಎಂದಿನಂತೆ 15 ರಜೆ ನೀಡಬೇಕೆಂಬ ಮನವಿಗೆ ಸ್ಪಂದಿಸಿದ ಸಚಿವರು, ಈ ಕೂಡಲೇ ಕ್ರಮ ಕೈಗೊಳ್ಳುವುದಾದಿ ಹೇಳಿದ್ದಾರೆ.
ಒಂದೂವರೆ ತಿಂಗಳಲ್ಲಿ ಬ್ಯಾಟರಿ:
ಕಳೆದ 2016ರಲ್ಲಿ ಶಾಲೆಗಳಿಗೆ ವಿತರಿಸಿರುವ ಕಂಪ್ಯೂಟರ್ ಹಾಗೂ ಯುಪಿಎಸ್ ಬ್ಯಾಟರಿ ಹಾಳಾಗಿದೆ. ಇದರಿಂದ ಕಂಪ್ಯೂಟರ್ ಇದ್ದೂ ಇಲ್ಲದಂತಾಗಿದೆ ಎಂಬ ಶಿಕ್ಷಕರ ದೂರಿಗೆ ಪ್ರತಿಕ್ರಿಯಿಸಿದ ಸಚಿವರು, ಬ್ಯಾಟರಿ ವಿತರಣೆ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಮುಂದಿನ ಒಂದೂವರೆ ತಿಂಗಳೊಳಗೆ ಬ್ಯಾಟರಿಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಆಯುಕ್ತ ಡಾ.ಕೆ.ಜಿ. ಜಗದೀಶ್, ನಿರ್ದೇಶಕರಾದ ಕೆ.ಎಸ್. ಮಣಿ ಮತ್ತು ಎಂ.ಪಿ. ಮಾದೇಗೌಡ, ಡಿಎಸ್‌ಇಆರ್‌ಟಿ ನಿರ್ದೇಶಕ ಗೋಪಾಲಕೃಷ್ಣ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬೇಸಿಗೆ ಸಂಭ್ರಮಕ್ಕೆ ಮರು ಚಾಲನೆ
ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವುದಕ್ಕಾಗಿ ಆರಂಭಿಸಿದ್ದ ‘ಬೇಸಿಗೆ ಸಂಭ್ರಮ’ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡುವಂತೆ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಫೋನ್ ಇನ್ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಬೇಸಿಗೆ ರಜೆಯಲ್ಲಿಯೂ ಕೆಲವು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಿಸಲಾಗುತ್ತಿದೆ. ಅದರಂತೆ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಭಿರುಚಿ, ಆಟೋಟ, ಸೃಜನಶೀಲತೆ ಮತ್ತು ಕಲಿಕಾ ಮನೋಭಾವ ಉಂಟು ಮಾಡುವುದಕ್ಕಾಗಿ ಆರಂಭಿಸಿದ್ದ ‘ಬೇಸಿಗೆ ಸಂಭ್ರಮ’ವನ್ನು ಮರು ಆರಂಭಿಸುವಂತೆ ಸೂಚಿಸಿದ್ದಾರೆ.
ದ್ವಿತಿಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ.