* ಧಾರ್ಮಿಕ ಮುಖಂಡ, ಪತ್ರಕರ್ತರ ಚಲನವಲನಗಳತ್ತ ಸಿಐಡಿ ಕಣ್ಣು* ಪಿಎಸೈ ಅಕ್ರಮ: ಧಾರ್ಮಿಕ ಮುಖಂಡ, ಪತ್ರಕರ್ತರೂ ಶಾಮೀಲು?* ನೇಮಕಾತಿ ಜೊತೆಗೆ ಪೊಲೀಸ್ ವರ್ಗಾವಣೆಯಲ್ಲೂ ದಳ್ಳಾಳಿಕಾರ್ಯ
ಆನಂದ್ ಎಂ. ಸೌದಿ
ಯಾದಗಿರಿ(ಮೇ.07): 545 ಪಿಎಸೈ(ಸಿವಿಲ್) ನೇಮಕ ಅಕ್ರಮದಲ್ಲೀಗ ಕಲ್ಯಾಣ ಕರ್ನಾಟಕ ಭಾಗದ ಧಾರ್ಮಿಕ ಮುಖಂಡ ಹಾಗೂ ಇಬ್ಬರು ಪತ್ರಕರ್ತರೂ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿರುವ ಶಂಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಇವರ ಚಲನವಲನಗಳ ಬಗ್ಗೆಯೂ ಸಿಐಡಿ ಅಧಿಕಾರಿಗಳ ತಂಡ ಹದ್ದಿನ ಕಣ್ಣಿಟ್ಟಿದೆ ಎನ್ನಲಾಗಿದೆ.
‘ಕನ್ನಡಪ್ರಭಕ್ಕೆ’ ಲಭ್ಯ ಮೂಲಗಳ ಪ್ರಕಾರ, ನೇಮಕಾತಿ ಆಕಾಂಕ್ಷಿ ‘ಗಿರಾಕಿ’ಗಳನ್ನು ಹುಡುಕಿ, ಅಂಥವರನ್ನು ಈ ಅಕ್ರಮದ ಪ್ರಮುಖ ಆರೋಪಿಗಳಾದ ದಿವ್ಯಾ ಹಾಗರಗಿ ಹಾಗೂ ರುದ್ರಗೌಡಗೆ ಪರಿಚಯಿಸಿ ವ್ಯವಹಾರ ಕುದುರಿಸಿ, ಇದರಲ್ಲಿ ಕಮೀಶನ್ ಪಡೆಯುತ್ತಿದ್ದರು. ನೇಮಕಾತಿ ಅಷ್ಟೇ ಅಲ್ಲದೆ ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿಯೂ ಮೂಗು ತೂರಿಸುತ್ತಿದ್ದ ಇವರು ದಳ್ಳಾಳಿಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸಿಎಂ, ಗೃಹ ಸಚಿವರ ಬಂಧಿಸಿ: ಪ್ರಿಯಾಂಕ್
ಕಲ್ಯಾಣ ಕರ್ನಾಟಕ ಭಾಗದ ಪ್ರಬಲ ಧಾರ್ಮಿಕ ಮುಖಂಡನೊಬ್ಬನ ಮಾತಿಗೆ ಮನ್ನಣೆ ಜೊತೆಗೆ, ಮಾಧ್ಯಮದ ಹೆಸರು ಹೇಳಿಕೊಂಡು ಠೀವಿಯಿಂದ ತಿರುಗಾಡುತ್ತಿದ್ದ ಇಬ್ಬರು ಪತ್ರಕರ್ತರ ಬಗ್ಗೆ ಸಿಐಡಿ ವಿಚಾರಣೆ ವೇಳೆ ಕೆಲವರು ಬಾಯ್ಬಿಟ್ಟಿದ್ದಾರೆ. ಇದಕ್ಕೆ ಪೂರಕ ಸಾಕ್ಷ್ಯಾಧಾರಗಳ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಇವರ ವಿಚಾರಣೆ ನಡೆಸುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಪಿಎಸೈ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಈವರೆಗೆ ಅಭ್ಯರ್ಥಿಗಳು, ಮಧ್ಯವರ್ತಿಗಳು, ರಾಜಕೀಯ ಪ್ರಭಾವಿಗಳು ಹಾಗೂ ಖಾಕಿಪಡೆಯಲ್ಲಿನ ಕೆಲವರನ್ನು ಅರೆಸ್ಟ್ ಮಾಡಲಾಗಿದೆ. ದಿವ್ಯಾ ಹಾಗರಗಿ ಹಾಗೂ ರುದ್ರಗೌಡ ಬಂಧನ ನಂತರ ಮತ್ತಷ್ಟೂಮಾಹಿತಿಗಳು ಬಯಲಿಗೆ ಬರುತ್ತಿವೆ. ಈಗ ಧಾರ್ಮಿಕ ಮುಖಂಡನ ಹಾಗೂ ಪತ್ರಕರ್ತರ ಬಗ್ಗೆಯೂ ಸಿಐಡಿ ತಂಡದ ಕಣ್ಗಾವಲು ಮುಂದಿನ ದಿನಗಳಲ್ಲಿ ಮತ್ತಷ್ಟೂಅಚ್ಚರಿಗಳನ್ನು ಬಯಲಿಗೆಳೆಯಬಹುದು ಎನ್ನಲಾಗುತ್ತಿದೆ.
ಮೊದಲ ಬಾರಿ ಪೊಲೀಸ್ ಅಧಿಕಾರಿಗಳ ಬಂಧನ
ಮಹತ್ವದ ಬೆಳವಣಿಗೆಯೊಂದರಲ್ಲಿ ಪಿಎಸ್‌ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯ ಇಬ್ಬರು ಉನ್ನತ ಅಧಿಕಾರಿಗಳನ್ನು ಬಂಧಿಸಲಾಗಿದೆ. ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇರೆಗೆ ಡಿವೈಎಸ್ಪಿ ಹಾಗೂ ಅಭ್ಯರ್ಥಿಗಳನ್ನು ಪೂರೈಸಿದ ಆರೋಪದ ಮೇರೆಗೆ ಸಿಪಿಐ ಒಬ್ಬರನ್ನು ಗುರುವಾರ ಸಿಐಡಿ ಬಂಧಿಸಿದೆ.
ದಾವಣಗೆರೆ, ಧಾರವಾಡದಲ್ಲೂ ಸಿಐಡಿ ಪೊಲೀಸರಿಂದ ಬೇಟೆ?
ರಾಯಚೂರು ಜಿಲ್ಲೆಯ ಲಿಂಗಸುಗೂರು ಡಿವೈಎಸ್ಪಿ ವಿಜಯ ಕುಮಾರ್ ಸಾಲಿ ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಬಂಧಿತ ಪೊಲೀಸ್ ಅಧಿಕಾರಿಗಳು. ಇಬ್ಬರನ್ನೂ ಬುಧವಾರ ತಡರಾತ್ರಿವರೆಗೂ ತೀವ್ರ ವಿಚಾರಣೆ ನಡೆಸಿದ್ದ ಸಿಐಡಿ ತಂಡ ಗುರುವಾರ ಬಂಧಿಸಿದೆ. ಈ ಇಬ್ಬರನ್ನೂ 8 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಹಣ ನೀಡಿ ಪರೀಕ್ಷೆ ಬರೆದಿದ್ದ ಏಳು ಮಂದಿ ಪೊಲೀಸ್ ಕಾನ್ಸ್ಟೇಬಲ್ಗಳನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇರೆಗೆ ಬಂಧಿತರಾಗಿರುವ ಮೊದಲಿಬ್ಬರು ಪೊಲೀಸರು ವಿಜಯ ಕುಮಾರ್ ಹಾಗೂ ಆನಂದ್ ಆಗಿದ್ದಾರೆ. ಈ ಇಬ್ಬರ ಬಂಧನದೊಂದಿಗೆ ಪ್ರಕರಣದಲ್ಲಿ ಒಟ್ಟಾರೆ ಬಂಧಿತರ ಸಂಖ್ಯೆ ಒಟ್ಟಾರೆ 41ಕ್ಕೇರಿದೆ. ಇದರಲ್ಲಿ 9 ಮಂದಿ ಪೊಲೀಸರಾಗಿದ್ದಾರೆ.
10 ಲಕ್ಷಕ್ಕೆ ಬ್ಲ್ಯಾಕ್ಮೇಲ್:
ಡಿವೈಎಸ್ಪಿ ವಿಜಯಕುಮಾರ್ ಸಾಲಿಗೆ ಜ್ಞಾನಜ್ಯೋತಿ ಶಾಲೆಯಲ್ಲಿ ಪಿಎಸ್‌ಐ ಪರೀಕ್ಷೆ ನಡೆದ ವಾರದ ಬಳಿಕ ಬ್ಲೂಟೂತ್ ಬಳಸಿ ಅಕ್ರಮ ಆಗಿದ್ದು ಗೊತ್ತಾಗಿತ್ತು. ಈ ಸಂಬಂಧ ಡಿವೈಎಸ್ಪಿ ಶಾಲೆ ಒಡತಿ ದಿವ್ಯಾಹಾಗರಗಿ ಮತ್ತು ಪ್ರಾಂಶುಪಾಲ ಕಾಶೀನಾಥ್ಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ನಂತರ ದಿವ್ಯಾಹಾಗರಗಿ ಕಡೆಯಿಂದ .10 ಲಕ್ಷ ಸಂದಾಯವಾದ ಬಳಿಕ ಸುಮ್ಮನಾಗಿದ್ದಾರೆ.
ತಮಾಷೆಯೆಂದರೆ ಜ್ಞಾನಜ್ಯೋತಿ ಶಾಲೆಯಲ್ಲಿ ಇಂಥದ್ದೊಂದು ಅಕ್ರಮ ನಡೆದಿದೆ ಎಂದು ಡಿವೈಎಸ್ಪಿಗೆ ಮಾಹಿತಿ ನೀಡಿದ್ದೇ ಅಕ್ರಮದ ಕಿಂಗ್ಪಿನ್ ಆರ್.ಡಿ.ಪಾಟೀಲ. ಡಿವೈಎಸ್ಪಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆತನೇ ಈ ರೀತಿ ಮಾಡುವಂತೆ ಹೇಳಿಕೊಟ್ಟಿದ್ದ. ಡಿವೈಎಸ್ಪಿ ಬ್ಲ್ಯಾಕ್ಮೇಲ್ ಮಾಡುತ್ತಿರುವ ವಿಚಾರ ದಿವ್ಯಾ ಹಾಗರಗಿ, ಕಾಶೀನಾಥ್ ತನ್ನ ಗಮನಕ್ಕೆ ತಂದಾಗ ಎಲ್ಲರೂ ಸೇರಿ .20 ಲಕ್ಷ ಹೊಂದಿಸಿ ಕೊಡೋಣ ಎಂದು ಸಲಹೆಯನ್ನೂ ನೀಡಿದ್ದ. ತಾನು ಯಾವುದೇ ಪಾಲು ಹಾಕದೆ ಕೇವಲ ದಿವ್ಯಾ, ಕಾಶೀನಾಥ್ ಹಾಗೂ ಬಂಧಿತ ಎಂಜಿನಿಯರ್ ಮಂಜುನಾಥ್ ಸೇರಿ ಹೊಂದಿಸಿಕೊಟ್ಟಿದ್ದ .10 ಲಕ್ಷವನ್ನಷ್ಟೇ ಡಿವೈಎಸ್ಪಿಗೆ ತಲುಪಿಸಿದ್ದ. ಈ ವಿಚಾರವನ್ನು ಆರ್.ಡಿ.ಪಾಟೀಲನೇ ಸಿಐಡಿ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
