ದಾವಣಗೆರೆ, ಧಾರವಾಡದಲ್ಲೂ ಸಿಐಡಿ ಪೊಲೀಸರಿಂದ ಬೇಟೆ?
- ಎಸ್‌ಐ ಪರೀಕ್ಷೆ ಅಕ್ರಮ ಬೆಂಗಳೂರು, ಕಲಬುರಗಿ ಆಚೆಗೂ ನಡೆದಿರುವ ಶಂಕೆ
- ಒಎಂಆರ್ ಶೀಟ್ ತಿದ್ದಿ ಕೆಲವರಿಂದ ಕಳ್ಳಾಟ
- ಶಂಕಿತರಿಗೆ ವಿಚಾರಣೆಗೆ ಸಮನ್ಸ್
ಬೆಂಗಳೂರು (ಮೇ.7): ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (Police Sub inspector) ನೇಮಕಾತಿ ಪರೀಕ್ಷಾ ಅಕ್ರಮ ( recruitment Scam) ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಶೋಧಿಸಿದಂತೆಲ್ಲ ಮತ್ತಷ್ಟುವಿಸ್ತಾರವಾಗುತ್ತಿದ್ದು, ಬೆಂಗಳೂರು (Bengaluru) ಹಾಗೂ ಕಲಬುರಗಿ (Kalaburagi) ನಗರಗಳ ನಂತರ ಈಗ ಮತ್ತೆರಡು ಜಿಲ್ಲೆಗಳಲ್ಲಿ ಭಾನಗಡಿ ನಡೆದಿರುವ ಬಗ್ಗೆ ಸಿಐಡಿ ಶಂಕೆ ವ್ಯಕ್ತಪಡಿಸಿದೆ.
ಎಸ್‌ಐ ನೇಮಕಾತಿ ವೇಳೆ ದಾವಣಗೆರೆ (Davanagere Exam Center) ಹಾಗೂ ಧಾರವಾಡದ ಪರೀಕ್ಷಾ ಕೇಂದ್ರಗಳಲ್ಲಿ (Dharawad Exam Center) ಸಹ ಒಎಂಆರ್ ಶೀಟ್ ತಿದ್ದುಪಡಿ ಮಾಡಿ ಕೆಲ ಅಭ್ಯರ್ಥಿಗಳು ಅಕ್ರಮ ನಡೆಸಿರುವ ಬಗ್ಗೆ ಆರೋಪ ಬಂದಿದ್ದು, ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ (FIR) ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲು ಸಿಐಡಿ ಚಿಂತಿಸಿದೆ ಎಂಬ ಮಾತುಗಳು ಕೇಳಿಬಂದಿವೆ.
ಪರೀಕ್ಷಾ ಅಕ್ರಮದ ಶಂಕೆ ಮೇರೆಗೆ ಕೆಲ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು (OMR Sheet) ಪರಿಶೀಲಿಸಿದಾಗ ಮತ್ತೆರಡು ಜಿಲ್ಲೆಗಳಲ್ಲಿ ಅಕ್ರಮದ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಆ ಎರಡು ಜಿಲ್ಲೆಗಳಲ್ಲಿ ಪರೀಕ್ಷೆ ಬರೆದಿದ್ದ ಶಂಕಿತ ಅಭ್ಯರ್ಥಿಗಳಿಗೆ ಸಿಐಡಿ ವಿಚಾರಣೆಗೆ ಕರೆದಿದೆ ಎನ್ನಲಾಗಿದೆ.
ಎಲ್ಲೆಲ್ಲಿ ನಡೆದಿತ್ತು ಪರೀಕ್ಷೆ: 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಸಂಬಂಧ 2021ರ ಅಕ್ಟೋಬರ್‌ನಲ್ಲಿ ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಹಾಗೂ ಕಲಬರಗಿ ನಗರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಬೆಂಗಳೂರಿನಲ್ಲಿ 172 ಹಾಗೂ ಕಲಬುರಗಿಯಲ್ಲಿ 107 ಸೇರಿ ಒಟ್ಟು 279 ಮಂದಿ ಆಯ್ಕೆಯಾಗಿದ್ದಾರೆ. ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮೈಸೂರು ಹಾಗೂ ಮಂಗಳೂರು ಕೇಂದ್ರಗಳಲ್ಲಿ ಇನ್ನುಳಿದ 266 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕೊನೆಗೆ ಕಲಬುರಗಿ ನಗರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅಕ್ರಮ ಬೆಳಕಿಗೆ ಬಂದು ರಾಜ್ಯವ್ಯಾಪಿ ಸಂಚಲನ ಸೃಷ್ಟಿಸಿತು.
ಬಳಿಕ ಈ ಅಕ್ರಮದ ಜಾಲವನ್ನು ಸಿಐಡಿ ಶೋಧಿಸಿದಾಗ ಬೆಂಗಳೂರಿನಲ್ಲೂ ಭಾನಗಡಿ ಬಯಲಾಯಿತು. ಎಸ್‌ಐ ಹುದ್ದೆ ಪಡೆಯಲು ಲಕ್ಷ ಲಕ್ಷ ಹಣವನ್ನು ಅಭ್ಯರ್ಥಿಗಳು ಲಂಚ ನೀಡಿರುವುದು ಬಹಿರಂಗವಾಯಿತು. ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಹಾಗೂ ಒಂಎಆರ್ ಶೀಟ್ ತಿದ್ದಿ ಅಭ್ಯರ್ಥಿಗಳು ರಾರಯಂಕ್ ಪಡೆದು ಪಾಸಾಗಿದ್ದರು. ಈ ಪರೀಕ್ಷಾ ಅಕ್ರಮದ ಜಾಲವು ಈಗ ದಾವಣಗೆರೆ ಹಾಗೂ ಧಾರವಾಡ ಪರೀಕ್ಷಾ ಕೇಂದ್ರಗಳಲ್ಲಿ ಸಹ ಹರಡಿದೆ ಎಂದು ಸಿಐಡಿ ಅಧಿಕಾರಿಗಳು ಶಂಕಿಸಿದ್ದಾರೆ.
ಜೆಇ ಪರೀಕ್ಷೆಯಲ್ಲಿ ದಾವಣಗೆರೆಯಲ್ಲಿ ಅಕ್ರಮ: ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ಬಂಧಿತನಾಗಿರುವ ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಮಂಜುನಾಥ್ ಮೇಳಕುಂದಿ, 2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಪರೀಕ್ಷೆಯಲ್ಲಿ ದಾವಣಗೆರೆ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಸಲು ಯತ್ನಿಸಿದ್ದ ಸಂಗತಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅಂದು ದಾವಣಗೆರೆಯಲ್ಲಿ ಮಂಜುನಾಥ್ ದಶವಂತ ಎಂಬ ಅಭ್ಯರ್ಥಿ ಬಂಧನವಾಗಿತ್ತು. ಹೀಗಾಗಿ ಪಿಎಸ್‌ಐ ಪರೀಕ್ಷೆಯಲ್ಲಿ ಕೂಡಾ ದಾವಣಗೆರೆ ಪರೀಕ್ಷಾ ಕೇಂದ್ರದಲ್ಲಿ ಮಂಜುನಾಥ ಮೇಳಕುಂದಿ ತಂಡ ಅಕ್ರಮ ನಡೆಸಿರಬಹುದು ಎನ್ನಲಾಗುತ್ತಿದೆ.
ಬೆಂಗಳೂರಿನಲ್ಲಿ ನಾಲ್ವರ ಒಎಂಆರ್ ಶೀಟ್ ನಾಪತ್ತೆ: ಬೆಂಗಳೂರಿನಲ್ಲಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳಿಗೆ ವಿಚಾರಣೆಗೆ ಸಿಐಡಿ ನೋಟಿಸ್ ಜಾರಿಗೊಳಿಸಿತ್ತು. ವಿಚಾರಣೆ ವೇಳೆ ನಾಲ್ವರು ಅಭ್ಯರ್ಥಿಗಳು ಕಾರ್ಬನ್ ಒಎಂಆರ್ ಶೀಟ್ ಸಲ್ಲಿಸಿರಲಿಲ್ಲ. ಇನ್ನುಳಿದ 168 ಅಭ್ಯರ್ಥಿಗಳ ಒಎಂಆರ್ ಶೀಟ್ ಪರಿಶೀಲಿಸಿದಾಗ 22 ಅಭ್ಯರ್ಥಿಗಳ ಅಕ್ರಮ ಬಯಲಾಗಿತ್ತು. ಈಗ ಕಾರ್ಬನ್ ಒಎಂಆರ್ ಶೀಟ್ ಕಳೆದುಹೋಗಿವೆ ಎಂದು ಸಬೂಬು ಹೇಳಿದ್ದವರಿಗೆ ಮತ್ತೆ ವಿಚಾರಣೆಗೆ ಸಿಐಡಿ ಕರೆದಿದೆ ಎಂದು ತಿಳಿದುಬಂದಿದೆ.
ಕಲಬುರಗಿಯಲ್ಲಿ ಇನ್ನೊಬ್ಬ ಡಿವೈಎಸ್ಪಿ ರೇವೂರ್ ಬಂಧನ
ಕಲಬುರಗಿ: ಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ಸಂಬಂಧ ಗುರುವಾರವಷ್ಟೇ ಲಿಂಗಸುಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಮತ್ತು ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆಯನ್ನು ಬಂಧಿಸಿದ್ದ ಸಿಐಡಿ ಅಧಿಕಾರಿಗಳ ತಂಡ ಶುಕ್ರವಾರ ಕೆಎಸ್‌ಆರ್‌ಪಿ 6ನೇ ಬೆಟಾಲಿಯನ್ ಸಹಾಯಕ ಅಸಿಸ್ಟೆಂಟ್ ಕಮಾಂಡೆಂಟ್ (ಡಿವೈಎಸ್ಪಿ ರಾರಯಂಕ್) ವೈಜನಾಥ ರೇವೂರ್‌ರನ್ನು ಬಂಧಿಸಿದೆ. ಇವರು ಹಗರಣದ ಕಿಂಗ್‌ಪಿನ್ ಆರ್.ಡಿ.ಪಾಟೀಲ್‌ಗೆ ನೆರವು ನೀಡಿ ಡೀಲ್ ಕುದುರಿಸುತ್ತಿದ್ದರು ಎನ್ನಲಾಗಿದೆ.
ರುದ್ರಗೌಡನಿಂದಾಗಿ ಕೆಟ್ಟೆ: ಬಿಕ್ಕಿಬಿಕ್ಕಿ ಅತ್ತ ಡಿವೈಎಸ್‌ಪಿ
ಕಲಬುರಗಿ: ಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಬಂಧಿತನಾಗಿರುವ ಲಿಂಗಸುಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರ ವಿಚಾರಣೆಯನ್ನು ಸಿಐಡಿ ಪೊಲೀಸರು ತೀವ್ರಗೊಳಿಸಿದ್ದಾರೆ. ಅಕ್ರಮದ ಕಿಂಗ್‌ಪಿನ್ ರುದ್ರಗೌಡ ಪಾಟೀಲನ ಕುಮ್ಮಕ್ಕಿನಿಂದ ನಾನು ತಪ್ಪು ಮಾಡಿದೆ ಎಂದು ಸಾಲಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ ಎಂದು ತಿಳಿದುಬಂದಿದೆ.
ಪಿಎಸ್‌ಐ ನೇಮಕಾತಿ ಹಗರಣ: ತುಮಕೂರು, ಮಂಗಳೂರಿನ ಕೇಂದ್ರಗಳಲ್ಲೂ ಅಕ್ರಮ?
ಎರಡೂ ಕಡೆಯಿಂದ ದುಡ್ಡು ಬಾಚಿಕೊಂಡ ರುದ್ರಗೌಡ!
ಹಗರಣದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಎಸ್‌ಐ ಅಭ್ಯರ್ಥಿಗಳಿಂದ ಸಿಗುವ ಲಂಚದ ಹಣದಲ್ಲಿ ಪಾಲು ಪಡೆದಿದ್ದ. ಅದರ ಜೊತೆಗೆ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿಯಿಂದ ದಿವ್ಯಾ ಹಾಗರಗಿ ಮತ್ತು ಕಾಶೀನಾಥ್‌ಗೆ ಕರೆ ಮಾಡಿಸಿ, ಅವರಿಂದ ಲಕ್ಷಾಂತರ ರು. ವಸೂಲಿ ಮಾಡಿಸಿ, ಅದರಲ್ಲೂ ಕಮಿಷನ್ ಪಡೆದಿದ್ದ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.
PSI Scam, ಕೋರ್ಟ್ ಅನುಮತಿ, ಬಂಧನದಲ್ಲಿರುವ ಅಭ್ಯರ್ಥಿಗಳಿಗೆ ಶಾಕ್
ಇಬ್ಬರು ಪತ್ರಕರ್ತರು, ಒಬ್ಬ ಧಾರ್ಮಿಕ ಮುಖಂಡ ಭಾಗಿ?
ಯಾದಗಿರಿ: ಎಸ್‌ಐ ಪರೀಕ್ಷೆ ನೇಮಕಾತಿ ಹಗರಣದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಧಾರ್ಮಿಕ ಮುಖಂಡ ಹಾಗೂ ಇಬ್ಬರು ಪತ್ರಕರ್ತರೂ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಅವರ ಚಲನವಲನಗಳ ಬಗ್ಗೆ ಸಿಐಡಿ ಅಧಿಕಾರಿಗಳ ತಂಡ ಹದ್ದಿನ ಕಣ್ಣಿಟ್ಟಿದೆ ಎನ್ನಲಾಗಿದೆ. ಇವರು ನೇಮಕಾತಿ ಆಕಾಂಕ್ಷಿಗಳನ್ನು ಹುಡುಕಿ, ಅವರನ್ನು ಹಗರಣದ ಕಿಂಗ್‌ಪಿನ್‌ಗಳಾದ ದಿವ್ಯಾ ಹಾಗರಗಿ ಮತ್ತು ರುದ್ರಗೌಡನಿಗೆ ಪರಿಚಯಿಸುತ್ತಿದ್ದರು. ನಂತರ ಕಮಿಷನ್ ಪಡೆಯುತ್ತಿದ್ದರು ಎನ್ನಲಾಗಿದೆ.