* ನಾನೇನು ಖುದ್ದು ವಿಚಾರಣೆಗೆ ಬರಬೇಕಿಲ್ಲ* ಸಿಎಂ, ಗೃಹ ಸಚಿವರ ಬಂಧಿಸಿ: ಪ್ರಿಯಾಂಕ್‌* ಸಿಐಡಿ ನೋಟಿಸ್‌ ಬಗ್ಗೆ ಹಕ್ಕುಚ್ಯು

ಬೆಂಗಳೂರು(ಮೇ.07): ‘ಪಿಎಸ್‌ಐ ಅಕ್ರಮದ ಬಗ್ಗೆ ನಾನು ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಅಂಶಗಳಲ್ಲಿ ನೈಜತೆ ಇದೆ ಎಂದು ಮನಗಂಡ ಬಳಿಕ, ದಾಖಲೆ ನೀಡಲು ಸಿಐಡಿ ನನಗೆ ಮೂರನೇ ಬಾರಿಗೆ ನೋಟಿಸ್‌ ಜಾರಿ ಮಾಡಿದೆ. ನೈಜತೆ ಇರುವುದು ನಂಬಿದ್ದರೆ ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬಂಧಿಸಿ’ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದಾರೆ.

‘ಉದ್ದೇಶಪೂರ್ವಕವಾಗಿ ನನ್ನ ಬಾಯಿ ಮುಚ್ಚಿಸಲು ಇದೇ ರೀತಿ ನೋಟಿಸ್‌ ನೀಡುತ್ತಿದ್ದರೆ ನೀವು ಬಹಳ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಅರಿಯಿರಿ. ನಿಮಗಿಂತಲೂ ಹೆಚ್ಚು ಕಾನೂನು ಜ್ಞಾನ ನನಗೂ ಇದೆ. ಈ ನೋಟಿಸ್‌ಗಳ ವಿರುದ್ಧ ನಾನೂ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಹಕ್ಕು ಚ್ಯುತಿ ಮಂಡನೆ, ವಿಜ್ಹಲ್‌ಬ್ಲೊಯ​ರ್‍ಸ್ ಪ್ರೊಟೆಕ್ಷನ್‌ ಆ್ಯಕ್ಟ್ ಸೇರಿದಂತೆ ನನಗಿರುವ ಕಾನೂನು ಆಯ್ಕೆಗಳನ್ನೂ ಬಳಸಬೇಕಾಗುತ್ತದೆ’ ಎಂದು ಸಿಐಡಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸಿಐಡಿಗೆ ಲಿಖಿತ ಉತ್ತರವನ್ನೂ ನೀಡಿರುವ ಅವರು, ‘ನಾನು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿರುವ ಎಲ್ಲಾ ದಾಖಲೆಗಳೂ ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಮಾಹಿತಿ. ಹೀಗಿದ್ದರೂ ರಾಜಕೀಯ ಪ್ರೇರಿತ ನೋಟಿಸ್‌ಗಳಿಂದ ನನ್ನನ್ನು ಸುದ್ದಿಗೋಷ್ಠಿ ಮಾಡದಂತೆ ತಡೆಯಲು ಯತ್ನಿಸಿದರೆ ಅದು ನಿಮ್ಮಿಂದ ಸಾಧ್ಯವಿಲ್ಲ. ನಾನು ಮಾತನಾಡಿರುವ ಎಲ್ಲಾ ಅಂಶಗಳ ಕುರಿತೂ ನಾನು ದಾಖಲೆ ಒದಗಿಸುತ್ತಿದ್ದೇನೆ. ಅದರ ನೈಜತೆ ಪರಿಶೀಲಿಸಬೇಕಿರುವುದು ತನಿಖಾಧಿಕಾರಿಗಳಾಗಿ ನಿಮ್ಮ ಕೆಲಸ. ಐಪಿಸಿ ಸೆಕ್ಷನ್‌ 91 ರ ಅಡಿಯಲ್ಲಿ ನಾನು ನನ್ನ ಬಳಿ ಇರುವ ದಾಖಲೆಯನ್ನು ಕಳುಹಿಸಿದರೆ ಸಾಕು. ಖುದ್ದು ವಿಚಾರಣೆಗೆ ಹಾಜರಾಗಬೇಕಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಕನ್ನಡಪ್ರಭ ವರದಿ ಪ್ರಸ್ತಾಪ:

‘3ನೇ ನೋಟಿಸ್‌ನಲ್ಲಿ ನನಗೆ ನೋಟಿಸ್‌ ನೀಡಿ ಆಡಿಯೋ ಕ್ಲಿಪ್‌ ನೈಜತೆ ಪ್ರಶ್ನಿಸಿದ್ದಾರೆ. ಏ.23 ರಂದು ಕನ್ನಡಪ್ರಭ ಪತ್ರಿಕೆ ಆಡಿಯೋ ಸಂಭಾಷಣೆ ಸಹಿತ ಸುದ್ದಿ ಪ್ರಕಟಿಸಿದೆ. ವರದಿ ಬಂದ ಬಳಿಕ ನನ್ನ ಬಳಿಯೂ ರೆಕಾರ್ಡ್‌ ಇದ್ದದ್ದಕ್ಕೆ ಮಾತನಾಡಿದ್ದೇನೆ. ನಿಮ್ಮ ಗುಪ್ತಚರ ಇಲಾಖೆ, ಸಿಐಡಿ ಕೇವಲ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ ಆಧಾರದ ಮೇಲೆಯೇ ತನಿಖೆ ಮಾಡುವುದೇ? ನಿಮ್ಮ ಯೋಗ್ಯತೆಗೆ ಒಂದು ಸುದ್ದಿಗೋಷ್ಠಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲವೇ?’ ಎಂದು ಪ್ರಿಯಾಂಕ ಖರ್ಗೆ ಕಿಡಿ ಕಾರಿದರು.

ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ‘ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಏ.24ರಂದು ನನಗೆ ಮೊದಲ, ಏ.28 ರಂದು ಎರಡನೇ ನೋಟಿಸ್‌ ನೀಡಲಾಗಿತ್ತು. ಅದರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಾಗೂ ದಾಖಲಾತಿಗಳನ್ನು ಸಹಾಯ ತನಿಖಾಧಿಕಾರಿಗೆ ಕಚೇರಿಯಲ್ಲಿ ಹಾಜರಾಗಿ ಸಲ್ಲಿಸಬೇಕು ಎಂದಿತ್ತು. ಇದಕ್ಕೆ ನಾನು ಲಿಖಿತ ಉತ್ತರ ನೀಡಿ ‘ಸಚಿವ ಪ್ರಭು ಚೌಹಾಣ್‌ ಅವರು ಬರೆದ ಪತ್ರದಲ್ಲಿ ಈ ನೇಮಕಾತಿಯಲ್ಲಿ ಗೋಲ್ಮಾಲ್‌ ನಡೆದಿದ್ದು ನೇಮಕಾತಿ ಪ್ರಕ್ರಿಯೆ ನಿಲ್ಲಿಸಿ ತನಿಖೆ ನಡೆಸಬೇಕು’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಇದರ ಜತೆಗೆ ಪರಿಷತ್‌ ಸದಸ್ಯ ಸಂಕನೂರು ಅವರೂ ಪತ್ರ ಬರೆದಿದ್ದರು. ಇದು ಸೇರಿದಂತೆ ಸಾರ್ವಜನಿಕ ವಲಯದಲ್ಲಿರುವ ಮಾಹಿತಿ ಆಧಾರದ ಮೇಲೆ ಸುದ್ದಿಗೋಷ್ಠಿ ನಡೆಸಿದ್ದು ನನಗೆ ನೋಟಿಸ್‌ ನೀಡುವುದಾದರೆ ಅವರಿಗೂ ನೀಡಿ’ ಎಂದು ಹೇಳಿದ್ದೆ ಎಂದರು.

ಆದರೆ, ಮೇ 4ರಂದು 3ನೇ ನೋಟಿಸ್‌ ಕಳುಹಿಸಿ ಅದರಲ್ಲಿ ‘ತಾವು 24ರಂದು ವಿಚಾರಣೆಗೆ ಹಾಜರಾಗದೆ ಲಿಖಿತ ಉತ್ತರ ಸಲ್ಲಿಸಿದ್ದು, ಅದರಲ್ಲಿ ಪರಿಶೀಲಿಸಿದಾಗ ಪ್ರಕರಣಕ್ಕೆ ಸಂಬಂಧವಿಲ್ಲದ ಸಂಗತಿಗಳು ಕಂಡುಬರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಹಾಗೂ ನೈಜತೆ ಇಲ್ಲದ ಮಾಹಿತಿಗಳನ್ನು ಹರಿದಾಡುತ್ತಿದ್ದು ಅವುಗಳನ್ನು ಸಾಕ್ಷ್ಯಾಧಾರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಹಾಗಾದರೆ ತನಿಖಾಧಿಕಾರಿಗಳು ಸಂಪುಟ ಸಚಿವರು, ಪರಿಷತ್‌ ಸದಸ್ಯರ ಪತ್ರವನ್ನು ಆಧಾರರಹಿತ ಎನ್ನುವ ಮೂಲಕ ಏನು ಹೇಳಲು ಹೊರಟಿದ್ದಾರೆ?’ ಎಂದು ಪ್ರಿಯಾಂಕ ಖರ್ಗೆ ಕಿಡಿ ಕಾರಿದರು.

ಸಿಎಂ, ಗೃಹ ಸಚಿವರನ್ನು ಬಂಧಿಸಿ: ಪ್ರಿಯಾಂಕ ಖರ್ಗೆ

ಇನ್ನು ನೋಟಿಸ್‌ನಲ್ಲಿ ‘ಪತ್ರಿಕಾಗೋಷ್ಠಿಯಲ್ಲಿ ಆಡಿಯೋ ಕ್ಲಿಪ್‌ ಹಾಜರುಪಡಿಸಿ ತಮ್ಮ ಬಳಿ ಇನ್ನೂ ಸಾಕ್ಷ್ಯಾಧಾರಗಳು ಇವೆ ಎಂದು ಹೇಳಿದ್ದೀರಿ. ಇದನ್ನು ಪರಿಗಣಿಸಿ ತಾವು ಅವುಗಳನ್ನು ಹಾಜರುಪಡಿಸುವ ಮೊದಲು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಮಾಧ್ಯಮಗಳ ಮುಂದೆ ಹಾಜರುಪಡಿಸುತ್ತೀರಿ ಎಂದು ಭಾವಿಸಿ ಈ ನೋಟಿಸ್‌ ನೀಡಲಾಗಿದೆ’ ಎಂದು ಹೇಳಲಾಗಿದೆ.

‘ತನಿಖಾಧಿಕಾರಿಗಳು ನಾನು ಹೇಳಿದ್ದನ್ನೆಲ್ಲ ನಿಜ ಎಂದು ಪರಿಗಣಿಸುವುದಾದರೆ, ಅದರ ಆಧಾರದ ಮೇಲೆ ನನಗೆ ನೋಟಿಸ್‌ ನೀಡುವುದಾದರೆ, ಗೃಹ ಸಚಿವರು, ಮುಖ್ಯಮಂತ್ರಿ ಯನ್ನು ಬಂಧಿಸಬೇಕಲ್ಲವೇ? ನಿಮಗೆ ಯಾವ ಅಂಶ ಬೇಕು ಅದನ್ನು ಮಾತ್ರ ಆಯ್ಕೆ ಮಾಡಿಕೊಂಡು, ಅದರ ಆಧಾರದ ಮೇಲೆ ನೀವು ನೋಟಿಸ್‌ ಜಾರಿ ಮಾಡುತ್ತೀರಾ? ಇದೇನಾ ನಿಮ್ಮ ತನಿಖೆ ರೀತಿ? ಆಡಿಯೋ ನೈಜತೆ ನಾನು ಪರಿಶೀಲಿಸುವುದಾದರೆ ನಿಮಗೆ ಏಕೆ ಸಂಬಳ ನೀಡಬೇಕು? ಪೊಲೀಸ್‌ ಇಲಾಖೆ ಏಕೆ ಬೇಕು?’ ಎಂದು ತರಾಟೆಗೆ ತೆಗೆದುಕೊಂಡರು.

ವಿಚಾರಣೆಗೆ ಹಾಜರಾಗುವ ಪ್ರಶ್ನೆಯೇ ಇಲ್ಲ: ಪ್ರಿಯಾಂಕ್

‘ಸಿಐಡಿ ನೋಟಿಸ್‌ಗೆ ನಾನು ಸರಿಯಾದ ಉತ್ತರಗಳನ್ನು ನೀಡಿದ್ದೇನೆ. ಬಳಿಕವೂ ಏಕೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು? ನಾನು ಯಾರ ಮನೆಯಲ್ಲೂ ಉಂಡಿಲ್ಲ ತಿಂದಿಲ್ಲ. ಹೀಗಾಗಿ ನಾನು ತನಿಖಾಧಿಕಾರಿಗಳ ಮುಂದೆ ಹಾಜರಾಗುವ ಪ್ರಶ್ನೆ ಇಲ್ಲ. ಉಪ್ಪು ತಿಂದವರು ನೀರು ಕುಡಿಯಬೇಕು. ಈ ಪ್ರಕರಣದಲ್ಲಿ ಸಾಕಷ್ಟುನಿಮ್ಮ ನಾಯಕರು ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಬಿಜೆಪಿ ನಾಯಕರಿಗೆ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದರು.