ಪಿಎಸ್‌ಐ ಹಗರಣದ ಕಿಂಗ್‌ಪಿನ್ ಆರ್‌ಡಿಪಿಗೆ ಮತ್ತೊಂದು ಸಂಕಷ್ಟ?
ನಾಲ್ಕು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ರುದ್ರಗೌಡ ಪಾಟೀಲ್, ಜೈಲಿನಿಂದ ಬಿಡುಗಡೆ ನಂತರ ಜಾಮೀನು ಷರತ್ತು ಪಾಲಿಸಿಲ್ಲವೆಂದು ಸಿಐಡಿ ನೋಟಿಸ್.
ಕಲಬುರಗಿ(ಡಿ.21): ಪೊಲೀಸ್ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ರೂವಾರಿ, ನಾಲ್ಕು ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದ ಆರ್‌ಡಿ ಪಾಟೀಲ್‌ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಂಭವಗಳಿವೆ. ಜಾಮೀನು ಮೇಲೆ ಬಿಡುಗಡೆಗೊಂಡಿರುವ ಆರ್‌ಡಿ ಪಾಟೀಲ್ ಜೈಲಿನಿಂದ ಬಿಡುಗಡೆ ನಂತರ ಜಾಮೀನಿನ ಶರತ್ತು ಪಾಲಿಸಿಲ್ಲ ಎನ್ನುವ ಕಾರಣಕ್ಕೆ ಸಿಐಡಿ ನೋಟಿಸ್ ಜಾರಿ ಮಾಡಿದೆ. ಪಾಸ್‌ಪೋರ್ಟ್ ಹ್ಯಾಂಡೋವರ್, ಸಿಐಡಿ ಕಚೇರಿಗೆ ಹಾಜರ್ ಆಗುವ ವಿಚಾರ ಸೇರಿದಂತೆ ಜಾಮೀನು ಕೊಡುವಾಗ ಹೈಕೋರ್ಟ್ ವಿಧಿಸಿದ್ದ ಹಲವು ಶರತ್ತುಗಳನ್ನು ಆರ್‌ಡಿ ಪಾಟೀಲ್ ಉಲ್ಲಂಘಿಸಿದ್ದಾರೆಂದು ಮಂಗಳವಾರ ಸಿಐಡಿ ಅಧಿಕಾರಿಗಳತಂಡ ಇಲ್ಲಿನ ಅಕ್ಕ ಮಹಾದೇವಿ ಕಾಲೋನಿಯಲ್ಲಿರುವ ಆರ್‌ಡಿ ಪಾಟೀಲ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಸಂದರ್ಭದಲ್ಲಿ ಆರ್‌ಡಿ ಪಾಟೀಲ್ ಮನೆಯಲ್ಲಿ ಇಲ್ಲದ ಕಾರಣ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿರುವ ಸಿಐಡಿ ಕ್ರಮದಿಂದಾಗಿ ಕಿಂಗ್‌ಪಿಎನ್‌ಗೆ ಹೊಸ ನಮೂನೆಯ ಕಾನೂನು ತೊಡಕು, ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರಿಸಿವೆ.
PSI Recruitment Scam: ಬೇಲ್ ಪಡೆದು ಬಂದ ಕಾಂಗ್ರೆಸ್ ಮುಖಂಡನಿಗೆ ಭರ್ಜರಿ ಸ್ವಾಗತ!
ಜೈಲಿನಿಂದ ಬಿಡುಗಡೆಯಾದ ನಂತರವೂ ಯಾರೂ ಭೇಟಿ ಮಾಡದಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಅಜ್ಞಾತ ಸ್ಥಳಕ್ಕೆ ತೆರಳಿರುವ ಆರ್.ಡಿ. ಪಾಟೀಲ್ ಅವರ ಮೊಬೈಲ್ ಕೂಡಾ ಸ್ವಿಚ್‌ಆಫ್ ಆಗಿರೋದು ಸಿಐಡಿ ಅಧಿಕಾರಿಗಳ ಪರಿಶೀಲನೆಯಿಂದ ಗೊತ್ತಾಗಿದೆ.
ಹೈಕೋರ್ಟ್ ಷರತ್ತು ಬದ್ಧ ಜಾಮೀನಿನಲ್ಲಿ ಜಿಲ್ಲೆಯ ಟ್ರಯಲ್ ಕೋರ್ಚ್ ಬಿಟ್ಟು ಹೋಗಬಾರದು, ಜಾಮೀನಿನಲ್ಲಿ ಸೂಚಿರುವ ವಿಳಾಸದಲ್ಲೇ ಇರಬೇಕು, ಹೈಕೋರ್ಟ್‌ಗೆ ತನಿಖಾಧಿಕಾರಿಗಳಿಗೆ ನೀಡಿದ ಮೊಬೈಲ್ ನಂಬರ್‌ನಲ್ಲಿ ಅಧಿಕಾರಿಗಳಿಗೆ ಲಭ್ಯವಿರಬೇಕು. ಜಾಮೀನಿನ ಮೇಲೆ ಹೊರ ಬಂದಾಗ ಸಾಕ್ಷಿ ನಾಶ ಮಾಡಬಾರದು. ಮೊಬೈಲ್ ನಂಬರ್ ಬದಲಾವಣೆ ಮಾಡೋದಾದ್ರೆ, ವಿಳಾಸ ಬದಲಾವಣೆ ಮಾಡೋದಾದ್ರೆ ತನಿಖಾಧಿಕಾರಿ ಮತ್ತು ಕೋರ್ಟ್ ಗಮನಕ್ಕೆ ತರಬೇಕು ಎಂಬುದೇ ಜಾಮೀನು ಪ್ರಮುಖ ಷರತ್ತುಗಳಾಗಿದ್ದವು.
PSI Recruitment Scam: ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ; ಎಡಿಜಿಪಿ ಅಮೃತ್ ಪೌಲ್ ಪುತ್ರಿ ಪತ್ರ
ಆದರೆ ಸಿಐಡಿ ಅಧಿಕಾರಿಗಳು ಆರ್‌ಡಿ ಪಾಟೀಲ್ ಮನೆಗೆ ಭೇಟಿ ನೀಡಿದಾಗ ಮನೆ ಬೀಗ ಹಾಕಲ್ಪಟ್ಟಿತ್ತು. ಅವರ ಮೊಬೈಲ್ ಕೂಡಾ ಸ್ವಿಚ್‌ಆಪ್ ಆಗಿದ್ದು ಕಂಡು ಬಂದ ಹಿನ್ನಲೆ ಸಹೋದರನ ಮೂಲಕ ಆರ್‌ಡಿ ಪಾಟೀಲ್‌ಗೆ ನಿನ್ನೆ ನಾಲ್ಕು ಗಂಟೆಗೆ ವಿಚಾರಣೆಗೆ ಹಾಜರಾಗಲು ತನಿಖಾಧಿಕಾರಿ ಸೂಚಿಸಿದ್ದರು. ತನಿಖಾಧಿಕಾರಿ ಸೂಚನೆಯಂತೆ ಆರ್‌ಡಿ ಪಾಟೀಲ್ ತನಿಖಾಧಿಕಾರಿಯ ಮುಂದೆ ಹಾಜರಾಗಿರಲಿಲ್ಲ.
ನಿನ್ನೆ ಇಡೀ ದಿನವಾದ್ರು ಸಿಐಡಿ ಮುಂದೆ ಹಾಜರಾಗದ ಹಿನ್ನಲೆ ಇಂದು ಸಿಐಡಿಯಿಂದ ನೋಟಿಸ್ ಜಾರಿಮಾಡಲಾಗಿದೆ. ಹೈಕೋರ್ಟ್ ಜಾಮೀನು ಆದೇಶದ ಷರತ್ತುಗಳಂತೆ ಆರ್.ಡಿ. ಪಾಟೀಲ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಬೆಳವಣಿಗೆ ಮುಂದಿನ ದಿನಳಲ್ಲಿ ಕಿಂಗ್‌ಪಿಎನ್‌ಗೆ ಹೊಸತೊಂದು ಸಂಕಷ್ಟದ ಖೆಡ್ಡಾ ಸಿಐಡಿ ತೋಡಲು ಕಾರಣವಾಗುವುದೆ ಎಂಬ ಚರ್ಚೆಗಳು ಸಾಗಿವೆ.