ಒಂದೆಡೆ ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಪಿಎಸ್‌ಐ ಅಕ್ರಮದ ಬಗ್ಗೆ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದರೆ, ಇನ್ನೊಂದೆಡೆ, ಪ್ರಕರಣದಲ್ಲಿ ಕಿಂಗ್‌ ಪಿನ್‌ ಆಗಿರುವ ಆರ್‌ಡಿ ಪಾಟೀಲ್‌ ಅವರ ಸಹೋದರ ಕಾಂಗ್ರೆಸ್‌ ನಾಯಕ ಮಹಾಂತೇಶ್‌ ಪಾಟೀಲ್‌ ಜಾಮೀನು ಪಡೆದುಕೊಂಡಿದ್ದಾರೆ. 

ಕಲಬುರಗಿ (ಡಿ.17): ಪಿ.ಎಸ್.ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬೇಲ್ ಮೇಲೆ ಬಂದ ಕಾಂಗ್ರೆಸ್ ಮುಖಂಡನಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಕಿಂಗ್ ಪಿನ್ ಆರ್.ಡಿ ಪಾಟೀಲ್ ಸಹೋದರ ಮಹಾಂತೇಶ ಪಾಟೀಲ್‌ಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಮಾಜಿ ಎಂಎಲ್‌ಸಿ ಅಲ್ಲಮ ಪ್ರಭು ಪಾಟೀಲ್ ಇನ್ನಿತರಿಂದ ಮಹಾಂತೇಶ್‌ ಪಾಟೀಲ್‌ಗೆ ಸನ್ಮಾನ ಮಾಡಲಾಗಿದೆ. ಮಹಾಂತೇಶ ಪಾಟೀಲ್ ಬೇಲ್ ಮೇಲೆ ಹೊರ ಬರುತ್ತಿದ್ದಂತೆಯೇ ಮನೆಗೆ ಹೋಗಿ ಅಲ್ಲಮಪ್ರಭು ಪಾಟೀಲ್ ಸನ್ಮಾನ ಮಾಡಿದ್ದಾರೆ. ಒಂದಡೆ ಕಾಂಗ್ರೆಸ್ ನಾಯಕ ಪ್ರಿಯಾಂಕ್‌ ಖರ್ಗೆ ಪಿ.ಎಸ್.ಐ ಅಕ್ರಮದ ಬಗ್ಗೆ ಸರಕಾರದ ವಿರುದ್ದ ಕಿಡಿಕಾರುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್‌ ನಾಯಕರು ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ಭರ್ಜರಿ ಸ್ವಾಗತ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಜಾಮೀನಿನ ಮೇಲೆ ಹೊರಬಂದ ಮಹಾಂತೇಶ ಪಾಟೀಲ್ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿದ್ದರು. ಮಹಾಂತೇಶ ಪಾಟೀಲ್ ಮನೆಗೆ ತೆರಳಿ ಶಾಲು ಹೊದಿಸಿ, ಮಾಲೆ ಹಾಕಿ ಅವರ ಬೆಂಬಲಿಗರು ಸನ್ಮಾನ ಮಾಡಿದ್ದಾರೆ.