PSI Recruitment Scam: ಪಿಎಸ್ಐ ಆಗಲು ಅಕ್ರಮದ ಹಾದಿ ತುಳಿದ ದಂಪತಿಗಳ ಬಂಧನ!

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಬಗೆದಷ್ಟು ಬಯಲಾಗುತ್ತಲೇ ಇದೆ. ಪಿಎಸ್ಐ ಆಗುವ ಕನಸು ಹೊತ್ತು ಅಕ್ರಮದ ದಾರಿ ಹಿಡಿದ ಕಾರಣಕ್ಕೆ ದಂಪತಿಗಳಿಬ್ಬರನ್ನ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. 

psi recruitment scam kalaburagi cid police arrest shanti bai couple in hyderabad gvd

ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ

ಕಲಬುರಗಿ (ಮೇ.30): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಬಗೆದಷ್ಟು ಬಯಲಾಗುತ್ತಲೇ ಇದೆ. ಪಿಎಸ್ಐ ಆಗುವ ಕನಸು ಹೊತ್ತು ಅಕ್ರಮದ ದಾರಿ ಹಿಡಿದ ಕಾರಣಕ್ಕೆ ದಂಪತಿಗಳಿಬ್ಬರನ್ನ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಇಂದು ಮತ್ತಿಬ್ಬರನ್ನು ಬಂಧಿಸಿದೆ. ಶಾಂತಿಬಾಯಿ ನಾಯಕ್ ಮತ್ತು ಬಸ್ಯಾ ನಾಯಕ್ ಎನ್ನುವವರೇ ಬಂಧಿತ ಆರೋಪಿಗಳು. 

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕೋನಾಪೂರ ಎಸ್.ಎನ್ ತಾಂಡಾ ನಿವಾಸಿ ಶಾಂತಿಬಾಯಿ ಆಗಿರುವ ಶಾಂತಿಬಾಯಿ ನಾಯಕ್, ಪಿಎಸ್ಐ ಆಗುವ ಕನಸು ಕಂಡವಳು. ನಿಯತ್ತಾಗಿ ಓದಿ ಪರೀಕ್ಷೆ ಬರೆದಿದ್ದರೆ ಜೈಲು ಕಂಬಿ ಎಣಿಸುವ ಪ್ರಶ್ನೆಯೇ ಬರುತ್ತಿರಲಿಲ್ಲ. ಆದ್ರೆ ಶಾಂತಿಬಾಯಿ, ಈ ಪ್ರಕರಣದ ಕಿಂಗ್‌ಪಿನ್ ಇಂಜಿನಿಯರ್ ಮಂಜುನಾಥ ಮೇಳಕುಂದಾ ಜೊತೆ ಡೀಲ್ ಮಾಡಿಕೊಂಡು ಪರೀಕ್ಷೆ ಬರೆದಿದ್ದಳು. 

PSI Recruitment Scam ಕಿಂಗ್‌ಪಿನ್ ಆರ್.ಡಿ ಪಾಟೀಲ್ ಮನೆ ಕೆಲಸದಾಳು ಅರೆಸ್ಟ್!

ಇದೂ ಜ್ಞಾನ ಜ್ಯೋತಿ ಕೇಸ್: ಈ ಪ್ರಕರಣದ ಇನ್ನೊಬ್ಬ ಪ್ರಮುಖ ಕಿಂಗ ಪಿನ್ ಬಿಜೆಪಿ ನಾಯಕಿ ದಿವ್ಯ ಹಾಗರಗಿ ಒಡೆತನದ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿಯೇ ಈ ಶಾಂತಿಬಾಯಿ ಪರೀಕ್ಷೆ ಬರೆದಿದ್ದಳು. ಪಿಎಸ್ಐ ಪರೀಕ್ಷೆ ಪಾಸ್ ಮಾಡಿಸಲು ಕಿಂಗ್ ಪಿನ್ ಮಂಜುನಾಥ್ ಜೊತೆ ಒಟ್ಟು 50 ಲಕ್ಷ ರೂಪಾಯಿ ಒಪ್ಪಂದ ಮಾಡಿಕೊಂಡಿದ್ದಳು. ಶಾಂತಿಬಾಯಿ ನಾಯಕ್ ಮತ್ತು ಈಕೆಯ ಗಂಡ ಬಸ್ಯಾ ನಾಯಕ್ ಸೇರಿ ಅಡ್ವಾನ್ಸಾಗಿ ಮಂಜುನಾಥ್‌ಗೆ 10 ಲಕ್ಷ ರೂಪಾಯಿ ಸಹ ನೀಡಿದ್ದರು. ಅದರಂತೆ ಓಎಂಆರ್ ಶೀಟ್ ತಿದ್ದುಪಡಿ ಮೂಲಕ ಈ ಶಾಂತಿಬಾಯಿ ಪಿಎಸ್ಐ ಪರೀಕ್ಷೆಯಲ್ಲಿ ಪಾಸ್ ಸಹ ಆಗಿದ್ದಳು. 

ಒಂದುವರೆ ತಿಂಗಳಿಂದ ನಾಪತ್ತೆ: ಯಾವಾಗ ಅಕ್ರಮ ಬೆಳಕಿಗೆ ಬಂದು ಸಿಐಡಿ ತನಿಖೆ ಶುರು ಮಾಡಿತೋ, ಆಗಲೇ ಶಾಂತಿಬಾಯಿ ಮತ್ತು ಈಕೆಯ ಗಂಡ ಬಸ್ಯ ನಾಯಕ್ ಇಬ್ಬರು ಪರಾರಿಯಾಗಿದ್ದರು. ಈ ಪ್ರಕರಣದ ಮೂಲ ಆರೋಪಿಗಳೆಲ್ಲರನ್ನೂ ಸಿಐಡಿ ಬಂಧಿಸಿದ್ದರೂ ಸಹ ಈ ನಾಯಕ್ ದಂಪತಿಗಳು ಮಾತ್ರ ಸಿಐಡಿಗೆ ಸಿಕ್ಕಿರಲಿಲ್ಲ. ಕಳೆದ ಒಂದುವರೆ ತಿಂಗಳಿಂದ ತಲೆ ಮರೆಸಿಕೊಂಡಿದ್ದ ಶಾಂತಿಬಾಯಿ ದಂಪತಿಗಳನ್ನು ಸಿಐಡಿ ಕಡೆಗೂ ಅರೆಸ್ಟ್‌ ಮಾಡಿದೆ. 

ಹೈದ್ರಾಬಾದ್‌ನಲ್ಲಿ ಬಂಧನ: ಹೈದ್ರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಆಧರಿಸಿ ಕಳೆದೆರಡು ದಿನಗಳಿಂದ ಹೈದ್ರಾಬಾದ್‌ನಲ್ಲಿ ಶೋಧ ನಡೆಸುತ್ತಿದ್ದ ಸಿಐಡಿ ಅಧಿಕಾರಿಗಳಿಗೆ ಇಂದು ಶಾಂತಿಬಾಯಿ ದಂಪತಿಗಳು ಸಿಕ್ಕಿಬಿದ್ದಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಹೈದರಾಬಾದ್‌ನಲ್ಲಿ ಇವರನ್ನು ಬಂಧಿಸಿ, 3 ಗಂಟೆ 30 ನಿಮಿಷದ ಸುಮಾರಿಗೆ ಕಲ್ಬುರ್ಗಿ ಸಿಐಡಿ ಕಚೇರಿಗೆ ಕರೆತರಲಾಯಿತು. 

ಪಿಎಸ್‌ಐ ಅಕ್ರಮ: ಎಡಿಜಿಪಿ ಪೌಲ್‌ 3ನೇ ದಿನದ ವಿಚಾರಣೆಗೆ ಗೈರು

ಮಕ್ಕಳ ಜೊತೆ ಸಿಐಡಿ ಕಛೇರಿ ಪ್ರವೇಶ: ಸುದೀರ್ಘ ಒಂದುವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಶಾಂತಿಬಾಯಿ ದಂಪತಿಗಳು, ತಮ್ಮ ಎರಡು ಮಕ್ಕಳೊಂದಿಗೆ ಸಿಐಡಿ ಕಚೇರಿ ಪ್ರವೇಶಿಸಿದ್ದಾರೆ. ಒಂದುವರೆ ವರ್ಷದ ಮಗುವನ್ನ ಶಾಂತಿಬಾಯಿ ತನ್ನ ಮಡಿಲಲ್ಲಿ ಎತ್ತುಕೊಂಡು ಸಿಐಡಿ ಕಛೇರಿ ಪ್ರವೇಶಿಸಿದರೆ, ಇನ್ನೊಬ್ಬ ನಾಲ್ಕು ವರ್ಷದ ಮಗುವನ್ನು ಆಕೆಯ ಪತಿ ಬಸ್ಯಾ ನಾಯಕ್ ಕರೆದುಕೊಂಡು ಸಿಐಡಿ ಕಛೇರಿ ಪ್ರವೇಶಿಸಿದ್ದಾನೆ.

35ಕ್ಕೆ ಏರಿಕೆ: ಶಾಂತಿಬಾಯಿ ನಾಯಕ್ ಮತ್ತು ಬಸ್ಯಾ ನಾಯಕ್ ದಂಪತಿಗಳ ಬಂಧನದೊಂದಿಗೆ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 35ಕ್ಕೆ ಏರಿಕೆಯಾದಂತಾಗಿದೆ.

Latest Videos
Follow Us:
Download App:
  • android
  • ios