*  ಹೊಸ ದಿನಾಂಕ ನಿಗದಿ ಮಾಡಿ ಸಿಐಟಿ ನೋಟಿಸ್‌ ಸಾಧ್ಯತೆ*  ಅಮೃತ್‌ ಪೌಲ್‌ ಅವರು ವೈಯಕ್ತಿಕ ಕಾರಣ ನೀಡಿ ವಿಚಾರಣೆಗೆ ಗೈರು* 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅವ್ಯವಹಾರ 

ಬೆಂಗಳೂರು(ಮೇ.28):ಪಿಎಸ್‌ಐ ಪರೀಕ್ಷಾ ಅವ್ಯವಹಾರ ಪ್ರಕರಣ ಸಂಬಂಧ ಕಳೆದ ಎರಡು ದಿನಗಳಿಂದ ಸಿಐಡಿ ವಿಚಾರಣೆ ಎದುರಿಸುತ್ತಿದ್ದ ಎಡಿಜಿಪಿ ಅಮೃತ್‌ ಪೌಲ್‌ ಮೂರನೇ ದಿನವಾದ ಶುಕ್ರವಾರದ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.

ಶುಕ್ರವಾರ ಬೆಳಗ್ಗೆ 11 ಗಂಟೆ ಕಾಲ್‌ರ್‍ಟನ್‌ ಹೌಸ್‌ನಲ್ಲಿರುವ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ಸೂಚಿಸಿದ್ದರು. ಆದರೆ, ಅಮೃತ್‌ ಪೌಲ್‌ ಅವರು ವೈಯಕ್ತಿಕ ಕಾರಣ ನೀಡಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಶೀಘ್ರದಲ್ಲೇ ಮತ್ತೊಂದು ದಿನ ನಿಗದಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಅಮೃತ್‌ ಪೌಲ್‌ಗೆ ನೋಟಿಸ್‌ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

545 ಪಿಎಸ್‌ಐ ಹುದ್ದೆಗಳ ನೇಮಕಾತಿ ಅವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯ ಲಭವಾದ ಹಿನ್ನೆಲೆಯಲ್ಲಿ ಪೊಲೀಸ್‌ ನೇಮಕಾತಿ ವಿಭಾಗದ ಡಿವೈಎಸ್ಪಿ ಸೇರಿದಂತೆ ಕೆಳ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಸಿಐಡಿ ಬಂಧಿಸಿದೆ. ಎಡಿಜಿಪಿ ಅಮೃತ್‌ ಪೌಲ್‌ ಅವರು ಈ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅವಧಿಯಲ್ಲೇ ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದಿದ್ದ ಹಿನ್ನೆಲೆಯಲ್ಲಿ ಅವರನ್ನೂ ವಿಚಾರಣೆ ಮಾಡಲಾಗುತ್ತಿದೆ.

ಪಿಎಸ್‌ಐ ಅಕ್ರಮ ಕೇಸ್: ಎಡಿಜಿಪಿ ಪೌಲ್‌ 5 ಗಂಟೆ ವಿಚಾರಣೆ

ಬುಧವಾರ ಮತ್ತು ಗುರುವಾರ ಎಸ್‌ಪಿ ದರ್ಜೆಯ ತನಿಖಾಧಿಕಾರಿ ಎಡಿಜಿಪಿ ಅಮೃತ್‌ ಪೌಲ್‌ ಅವರನ್ನು ಸುದೀರ್ಘ ವಿಚಾರಣೆ ಮಾಡಿದ್ದರು. ಎಡಿಜಿಪಿ ಅವರು ನೀಡಿದ ಉತ್ತರ ತೃಪ್ತಿಕರವಾಗದ ಪರಿಣಾಮ ಶುಕ್ರವಾರವೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಇದೀಗ ಅಮೃತ್‌ ಪೌಲ್‌ ವೈಯಕ್ತಿಕ ಕಾರಣ ಮುಂದಿಟ್ಟು ವಿಚಾರಣೆಗೆ ಗೈರು ಹಾಜರಾಗಿದ್ದಾರೆ.

ಈಗಾಗಲೇ ಪಿಎಸ್‌ಐ ನೇಮಕಾತಿ ಅವ್ಯವಹಾರ ಪ್ರಕರಣ ಸಂಬಂಧ ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಮಧ್ಯವರ್ತಿಗಳು, ಪೊಲೀಸ್‌ ಅಧಿಕಾರಿಗಳು, ನೇಮಕಾತಿ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸಿಐಡಿ ಬಂಧಿಸಿದೆ.