PSI Recruitment Scam; ಎಫ್‌ಎಸ್‌ಎಲ್ ವರದಿ ಸಲ್ಲಿಕೆಗೆ ಹೈಕೋರ್ಟ್ ಸೂಚನೆ
- ಎಸ್‌ಐ ಪರೀಕ್ಷೆ , ಎಫ್‌ಎಸ್‌ಎಲ್ ವರದಿ ಸಲ್ಲಿಕೆಗೆ ನ್ಯಾಯಾಲಯ ಸೂಚನೆ
- ತಿದ್ದಿದ ಒಎಂಆರ್ ಶೀಟ್‌ಗಳ ಸಲ್ಲಿಕೆಗೂ ಆದೇಶ
- ಹೆಚ್ಚಿನ ವಿಚಾರಣೆ ಜು.14ಕ್ಕೆ ಮುಂದೂಡಿದ ಕೋರ್ಟ್
ಬೆಂಗಳೂರು (ಜು.8): ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣದ ಅಕ್ರಮ ವಿಧಾನಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ತಿದ್ದುಪಡಿ ಮಾಡಿರುವ ಒಎಂಆರ್ ಶೀಟ್‌ಗಳ ಪ್ರತಿ ಸಲ್ಲಿಸುವಂತೆ ಸಿಐಡಿಗೆ ಗುರುವಾರ ಹೈಕೋರ್ಚ್ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ಬಂಧನಕ್ಕೆ ಗುರಿಯಾಗಿರುವ ಸಿ.ಎನ್.ಶಶಿಧರ್ ಮತ್ತು ಆರ್. ಶರತ್ ಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸಿಐಡಿ ಪರ ಸರ್ಕಾರಿ ವಕೀಲರು ಹಾಜರಾಗಿ, ಪ್ರಕರಣದ ಸಂಬಂಧ ಎಡಿಜಿಪಿ ಅಮೃತ್ ಪಾಲ್ ಬಂಧನ ಸೇರಿದಂತೆ ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ಹಾಗೆಯೇ, ಪ್ರಕರಣದಲ್ಲಿ ತಿದ್ದುಪಡಿ ಮಾಡಿರುವ 32 ಒಎಂಆರ್ ಶೀಟ್‌ಗಳನ್ನು ಸಲ್ಲಿಸಿ, ಅವುಗಳನ್ನು ನ್ಯಾಯಾಲಯ ಪರಿಶೀಲಿಸಬೇಕೆಂದು ಕೋರಿದರು.
ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಪಿಎಸ್‌ಐ ನೇಮಕಾತಿ ಹಗರಣ: ನ್ಯಾಯಾಂಗ ತನಿಖೆಗೆ ‘ಕೈ’ ಹೋರಾಟ
ವರದಿ ದಾಖಲಿಸಿಕೊಂಡ ನ್ಯಾಯಪೀಠ, ತಿದ್ದುಪಡಿ ಮಾಡಲಾದ ಒಎಂಆರ್ ಶೀಟ್‌ಗಳ (OMR Sheet) ಮೂಲ ಪ್ರತಿ ಸಲ್ಲಿಸಲಾಗಿದೆ. ಆದರೆ, ಅವುಗಳು ಬೇಡ, ತನಿಖಾಧಿಕಾರಿಯ ಬಳಿಯೇ ಇರಲಿ ಎಂದು ನುಡಿಯಿತು.
ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ (Forensic Science Laboratory - ಆರ್‌ಎಫ್‌ಎಸ್‌ಎಲ್) ಸಲ್ಲಿಸಬೇಕು. ಅವುಗಳ ಪ್ರಕಾರ ಏನೇನು ತಿದ್ದುಪಡಿ ಮಾಡಲಾಗಿದೆ? ಎಲ್ಲೆಲ್ಲಿ ಒಎಂಆರ್ ಪುಟಗಳನ್ನು ಬದಲಾವಣೆ ಮಾಡಲಾಗಿದೆ? ಬ್ಲೂಟೂತ್ ಸೇರಿದಂತೆ ಯಾವ್ಯಾವ ಅಕ್ರಮ ವಿಧಾನಗಳನ್ನು ಬಳಸಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ವಿವರ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜು.14ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಹೈಕೋರ್ಚ್ ಪ್ರಕರಣದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ರಾಜಕಾರಣಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನ್ಯಾಯಾಲಯ ಗಂಭೀರ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
PSI Scam: ಎಡಿಜಿಪಿ ಮನೆಯಿಂದ ಬರಿಗೈಲಿ ವಾಪಸ್ ಬಂದ ಸಿಐಡಿ ತಂಡ
ಅದಕ್ಕೆ ನ್ಯಾಯಮೂರ್ತಿ ಸಂದೇಶ್ ಅವರು ಪ್ರತಿಕ್ರಿಯಿಸಿ, ಹೊರಗಿನವರು ತಮ್ಮ ಲಾಭಕ್ಕಾಗಿ ಕೋರ್ಚ್ ಆದೇಶವನ್ನು ಬಳಸಿದರೆ ನಾನೇನು ಮಾಡಬೇಕು. ಹೊರಗಿನ ವಿಚಾರದ ಬಗ್ಗೆ ಏನೂ ಮಾಡಲಾಗುವುದಿಲ್ಲ. ಕೋರ್ಚ್ ಮುಂದಿರುವ ವಿಷಯವನ್ನಷ್ಟೇ ಪರಿಶೀಲಿಸಲಾಗುವುದು ಎಂದು ನುಡಿದರು.
ಅರ್ಜಿದಾರ ಪರ ವಕೀಲರು, ತನಿಖಾಧಿಕಾರಿಗಳ ಪ್ರಕಾರ 32 ಮಂದಿ ಮಾತ್ರ ಕಳಂಕಿತರಿದ್ದಾರೆ. ಆದರೆ ಆಯ್ಕೆಯಾದ ಎಲ್ಲರನ್ನೂ ಸಂಶಯದಿಂದ ನೋಡಲಾಗುತ್ತಿದೆ ಎಂದು ತಿಳಿಸಿದರು.
ನ್ಯಾಯಮೂರ್ತಿ ಉತ್ತರಿಸಿ, ನೇಮಕಾತಿ ಅಕ್ರಮದಿಂದ ಪಿಎಸ್‌ಐ ಪರೀಕ್ಷೆ ಬರೆದಿದ್ದ 50 ಸಾವಿರ ವಿದ್ಯಾರ್ಥಿಗಳು ನೊಂದಿದ್ದಾರೆ. ಅವರೆಲ್ಲರೂ ಒಂದು ರೀತಿಯಲ್ಲಿ ಸಂತ್ರಸ್ತರೆ. ಅಕ್ರಮದಲ್ಲಿ ಮಧ್ಯವರ್ತಿಗಳ ಪ್ರಧಾನ ಪಾತ್ರವಿದೆ. ಅವರು ಲಕ್ಷಾಂತರ ಹಣ ಪಡೆದಿದ್ದಾರೆ. ನೇಮಕಾತಿ ಅಕ್ರಮ ಸಮಾಜಕ್ಕೆ ದೊಡ್ಡ ಅಪಾಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್‌ಐ ಕೇಸಲ್ಲಿ ಸಚಿವರ ಹೆಸರು ದಾಖಲಿಗೆ ಸಿಐಡಿ ನಕಾರ: ಡಿಕೆಶಿ
ಪ್ರಕರಣದಲ್ಲಿ ನೊಂದವರ 50 ಸಾವಿರ ಅಭ್ಯರ್ಥಿಗಳ ಹಿತಾಸಕ್ತಿಯನ್ನು ನ್ಯಾಯಾಲಯ ರಕ್ಷಣೆ ಮಾಡಬೇಕಿದೆ. ಅವರಿಗೆ ನ್ಯಾಯ ಒದಗಿಸುವುದು ಮತ್ತು ನೇಮಕಾತಿಯ ಅಕ್ರಮ ತಪ್ಪಿತಸ್ಥರನ್ನು ಶಿಕ್ಷಿಸುವುದು ಕೋರ್ಚ್ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಕೋರ್ಚ್ ತನಿಖೆಯ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದರೂ ಕಾನೂನಿನ ಸಂಕೋಲೆಯಿಂದ ತಪ್ಪಿಸಿಕೊಳ್ಳಬಾರದು ಎಂದು ನಿರ್ದೇಶಿಸಿದರು. ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಹೆಚ್ಚಿನ ವಿಚಾರಣೆಯನ್ನು ಜು.14ಕ್ಕೆ ಮುಂದೂಡಿತು.