ಎಸ್‌ಐ ಕೇಸಲ್ಲಿ ಸಚಿವರ ಹೆಸರು ದಾಖಲಿಗೆ ಸಿಐಡಿ ನಕಾರ: ಡಿಕೆಶಿ
* ತನಿಖೆಯಲ್ಲಿ ಆಂತರಿಕವಾಗಿ ಏನೆಲ್ಲಾ ಆಗುತ್ತಿದೆ ಎಂಬುದು ಗೊತ್ತಿದೆ
* ಇಂತಹ ತನಿಖೆಯಿಂದ ನ್ಯಾಯ ಸಿಗುವುದಿಲ್ಲ
* ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು
ಬೆಂಗಳೂರು(ಜು.07): ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪಾಲ್ ಅವರು ಹಗರಣದಲ್ಲಿ ಭಾಗಿಯಾಗಿರುವ ಸಚಿವರು, ನಾಯಕರ ಹೆಸರನ್ನು ಬಹಿರಂಗಪಡಿಸಲು ಸಿದ್ಧವಿದ್ದರೂ ತನಿಖಾಧಿಕಾರಿಗಳು ಅದನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಈ ಕುರಿತು ಹೈಕೋರ್ಚ್ ನ್ಯಾಯಮೂರ್ತಿ ಏನು ಹೇಳಿದ್ದಾರೆ ಎಂಬುದನ್ನು ಎಲ್ಲರೂ ಗಮನಿಸಿದ್ದಾರೆ. ಪಿಎಸ್‌ಐ ಹಗರಣದಲ್ಲಿ ರಾಜ್ಯದ ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು, ಸಚಿವರು ಭಾಗಿಯಾಗಿದ್ದಾರೆ. ಸಚಿವರೇ ನಮ್ಮ ಜಿಲ್ಲೆಯ ಅಭ್ಯರ್ಥಿಗಳಿಗೆ ಶರಣಾಗುವಂತೆ ಹೇಳಿದ್ದಾರೆ. ಈವರೆಗೆ 50ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಅವರ ಹೇಳಿಕೆ, ಬಂಧನವಾಗಿರುವ ಎಡಿಜಿಪಿ ಅವರ ಹೇಳಿಕೆಯನ್ನು ಪೂರ್ಣ ಪ್ರಮಾಣದಲ್ಲಿ ತನಿಖಾಧಿಕಾರಿಗಳು ದಾಖಲೆ ಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು.
PSI Recruitment Scam: ಕಿಂಗ್‌ಪಿನ್‌ಗಳನ್ನು ಸಿಐಡಿ ಬಂಧಿಸಲಿ: ಎಚ್‌ಡಿಕೆ ಆಗ್ರಹ
ತನಿಖೆಯಲ್ಲಿ ಆಂತರಿಕವಾಗಿ ಏನೆಲ್ಲಾ ಆಗುತ್ತಿದೆ ಎಂಬುದು ಗೊತ್ತಿದೆ. ಇಂತಹ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದ ಅವರು, ರಾಜ್ಯದಲ್ಲಿ ಯಾವುದೇ ಯೋಜನೆಗಳು ಜಾರಿಯಾಗುತ್ತಿಲ್ಲ. ಬಿಜೆಪಿ ಜನರಿಗೆ ಕೊಟ್ಟಭರವಸೆಗಳನ್ನು ಈಡೇರಿಸಿಲ್ಲ. ಅವರ ಕಥೆ ಮುಕ್ತಾಯದ ಹಂತದಲ್ಲಿದ್ದು, ಜನ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ. ಅಧ್ಯಯನದ ಹೆಸರಲ್ಲಿ ಬಿಜೆಪಿ ಶಾಸಕರು ಪ್ರವಾಸ ಮಾಡುತ್ತಿದ್ದಾರೆ. ಇದು ಅವರ ಇಚ್ಛೆ, ನಾವು ನಮ್ಮ ಶಾಸಕರನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲು ಮುಂದಾದಾಗ ಅವರು ಟೀಕಿಸಿದ್ದರು ಎಂದು ಕಿಡಿಕಾರಿದರು.